ರಾಜಕೀಯ ಅಜೆಂಡಾಗಾಗಿ ಸೇನೆಯ ದುರ್ಬಳಕೆ ಆರೋಪ| 'ನಿಮ್ಮ ಲಾಭಕ್ಕಾಗಿ ನಮ್ಮ ರಕ್ತವನ್ನೇಕೆ ಅವಮಾನಿಸುತ್ತೀರಿ'?| ರಾಜಕೀಯ ಲಾಭಕ್ಕಾಗಿ ಸಶಸ್ತ್ರಪಡೆಗಳ ದರ್ಬಳಕೆಗೆ ನಿವೃತ್ತ ಯೋಧರ ವಿರೋಧ?| ರಾಷ್ಟ್ರಪತಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ ನಿವೃತ್ತ ಯೋಧರು| ಭೂಸೇನೆ, ವಾಯುಸೇನೆ, ನೌಕಾಸೇನೆಯ ನಿವೃತ್ತ ಮುಖ್ಯಸ್ಥರಿಂದ ರಾಷ್ಟ್ರಪತಿಗೆ ಪತ್ರ| ನಿವೃತ್ತ ಯೋಧರ ಯಾವುದೇ ಪತ್ರ ಬಂದಿಲ್ಲ ಎಂದ ರಾಷ್ಟ್ರಪತಿ ಭವನ|
ನವದೆಹಲಿ(ಏ.12): ಸಶಸ್ತ್ರಪಡೆಗಳ ಸಾಹಸವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ನಿವೃತ್ತ ಮಿಲಿಟರಿ ಅಧಿಕಾರಿಗಳು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
8 ಮಾಜಿ ಸೇನಾ ಮುಖ್ಯಸ್ಥರು ಮತ್ತು 156 ಇತರ ಮಿಲಿಟರಿ ಪರಿಣತರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು, ಸಶಸ್ತ್ರಪಡೆಗಳ ದುರ್ಬಳಕೆಯನ್ನು ನಿಲ್ಲಿಸುವಂತೆ ಕೋರಿದ್ದಾರೆ ಎಂದು ಹೇಳಲಾಗಿದೆ.
ಭೂ ಸೇನೆಯ ಮಾಜಿ ಮುಖ್ಯಸ್ಥರಾದ ಜನರಲ್ (ನಿವೃತ್ತ) ಎಸ್.ಎಫ್ ರೋಡ್ರಿಗಸ್, ಜನರಲ್ (ನಿವೃತ್ತ) ಶಂಕರ್ ರಾಯ್ ಚೌಧರಿ ಮತ್ತು ಜನರಲ್ (ನಿವೃತ್ತ) ದೀಪಕ್ ಕಪೂರ್ ಪತ್ರಕ್ಕೆ ಸಹಿ ಹಾಕಿದ ಭೂ ಸೇನೆಯ ಪ್ರಮುಖರು.
ಇನ್ನು ವಾಯುಸೇನಾ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ (ನಿವೃತ್ತ) ಎನ್ಸಿ ಸೂರಿ ಪತ್ರಕ್ಕೆ ಸಹಿ ಹಾಕಿದ ವಾಯುಸೇನೆಯ ಪ್ರಮುಖರು.
ಅದರಂತೆ ಅಡ್ಮಿರಲ್ (ನಿವೃತ್ತ) ಎಲ್ ರಾಮದಾಸ್, ಅಡ್ಮಿರಲ್ (ನಿವೃತ್ತ) ಅರುಣ್ ಪ್ರಕಾಶ್, ಅಡ್ಮಿರಲ್ (ನಿವೃತ್ತ) ಮೆಹ್ತಾ ಮತ್ತು ಅಡ್ಮಿರಲ್ (ನಿವೃತ್ತ) ವಿಷ್ಣು ಭಾಗವತ್ ಪತ್ರಕ್ಕೆ ಸಹಿ ಹಾಕಿದ ನೌಕಾಸೇನೆಯ ಪ್ರಮುಖರು.
ಇತ್ತೀಚಿಗೆ ನಡೆದ ಬಾಲಾಕೋಟ್ ವಾಯುದಾಳಿ, ಈ ಹಿಂದೆ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್ ಗಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರದ ವಸ್ತುವಾಗಿ ಬಳಸಿಕೊಳ್ಳುತ್ತಿವೆ ಎಂದು ಈ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಶಸ್ತ್ರ ಪಡೆಗಳನ್ನು 'ಮೋದಿ ಸೇನೆ' ಎನ್ನುವ ಮೂಲಕ ಅವಮಾನಿಸಲಾಗುತ್ತಿದೆ ಎಂದು ಈ ಹಿರಿಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ ಚುನಾವಣಾ ಪ್ರಚಾರಗಳಲ್ಲಿ ಸೇನೆಯ ಭಾವಚಿತ್ರಗಳು, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಭಾವಚಿತ್ರಗಳನ್ನು ಬಳಸಿದ್ದಕ್ಕೆ ನಿವೃತ್ತ ಯೋಧರು ವಿರೋಧ ವ್ಯಕ್ತಪಡಿಸಿದ್ದಾರೆ.
ಪತ್ರ ಬಂದಿಲ್ಲ ಎಂದ ರಾಷ್ಟ್ರಪತಿ ಭವನ:
ಆದರೆ ಈ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ರಾಷ್ಟ್ರಪತಿ ಭವನ ಮಾಜಿ ಯೋಧರಿಂದ ಇಂತಹ ಯಾವುದೇ ಪತ್ರ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರಪತಿಗೆ ಮಾಜಿ ಸೈನಿಕರು ದೂರು ಸಲ್ಲಿಸಿದ್ದಾರೆ ಎಂಬ ಸುದ್ದಿ ಸುಳ್ಳು, ಅಂತಹ ಯಾವುದೇ ಪತ್ರ ರಾಷ್ಟ್ರಪತಿಗಳಿಗೆ ತಲುಪಿಲ್ಲ ಎಂದು ರಾಷ್ಟರಪತಿ ಭವನ ಸ್ಪಷ್ತನೆ ನೀಡಿದೆ.
