ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಾಟಕೋತ್ಸವದ ಅಂಗವಾಗಿ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ಪ್ರತಿದಿನ ರಾತ್ರಿ 7ಕ್ಕೆ ನಾಲ್ಕು ವಿಭಿನ್ನ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದರು.
ಸಾಗರ(ಡಿ.18): ಅಂತರಂಗ ಟ್ರಸ್ಟ್ ಬೆಂಗಳೂರಿನ ಬಿ.ವಿ.ಕಾರಂತ ರಂಗ ಪ್ರತಿಷ್ಠಾನದ ಸಹಯೋಗದೊಂದಿಗೆ ಡಿಸೆಂಬರ್ 22ರಿಂದ 25ರವರೆಗೆ ಬಿ.ವಿ.ಕಾರಂತ ರಂಗನಮನ ರಾಷ್ಟ್ರೀಯ ನಾಟಕೋತ್ಸವವನ್ನು ಸಾಗರದ ಹೆಗ್ಗೋಡಿನಲ್ಲಿ ಹಮ್ಮಿಕೊಂಡಿದೆ ಎಂದು ಅಂತರಂಗ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ರಂಗಕರ್ಮಿ ಎಸ್.ಮಾಲತಿ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಾಟಕೋತ್ಸವದ ಅಂಗವಾಗಿ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ಪ್ರತಿದಿನ ರಾತ್ರಿ 7ಕ್ಕೆ ನಾಲ್ಕು ವಿಭಿನ್ನ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದರು.
ಡಿ.22ರಂದು ಸಂಜೆ 7ಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ನಾಟಕೋತ್ಸವವನ್ನು ಉದ್ಘಾಟಿಸಲಿದ್ದು, ಮಲೆನಾಡು ಅಭಿವೃದ್ದಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ನವದೆಹಲಿಯ ನಾಟ್ಯಧರ್ಮಿ ಸಂಸ್ಥೆಯಿಂದ ‘ಬಲಿ’ ಹಿಂದಿ ನಾಟಕ (ರಚನೆ : ಗಿರೀಶ್ ಕಾರ್ನಡ್, ನಿ. : ಕೆ.ಎಸ್.ರಾಮಚಂದ್ರನ್) ನಡೆಯಲಿದೆ ಎಂದರು.
ಡಿ. 23ರಂದು ಧಾರವಾಡದ ರಂಗಾಯಣ ಸಂಸ್ಥೆ ವತಿಯಿಂದ ಗರುಡ ಸದಾಶಿವರಾಯರ ‘ ಶ್ರೀರಾಮ ಪಟ್ಟಾಭಿಷೇಕ ಕಂಪನಿ ಶೈಲಿಯ ಸಂಗೀತ ನಾಟಕ (ನಿರ್ದೇಶನ : ಡಾ. ಪ್ರಕಾಶ ಗರುಡ) ನಡೆಯಲಿದೆ. ಡಿ. 24ರಂದು ಮೂಡುಬಿದರೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದವರಿಂದ ‘ಮಹಾಮಾಯಿ’ ಜಾನಪದ ನಾಟಕ (ರ. ಡಾ. ಚಂದ್ರಶೇಖರ ಕಂಬಾರ, ವಿನ್ಯಾಸ ಮತ್ತು ನಿರ್ದೇಶನ : ಜೀವನರಾಮ್ ಸುಳ್ಯ) ನಡೆಯಲಿದೆ ಎಂದರು.
ಡಿ. 25ರಂದು ಪಾಂಡವಪುರದ ದಿ ಚಾನಲ್ ಥಿಯೇಟರ್ಸ್'ನ ಅಕ್ಷತಾ ಪಾಂಡವಪುರ ಅವರಿಂದ ‘ಒಬ್ಬಳು’ (ಪರಿಕಲ್ಪನೆ ಮತ್ತು ನಿರ್ದೇಶನ : ಪ್ರಸನ್ನ ಡಿ.) ನಾಟಕ ನಡೆಯಲಿದೆ. ಇದಕ್ಕೂ ಮೊದಲು ನಡೆಯುವ ಸಮಾರೋಪ ಸಮಾರಂಭದಲ್ಲಿ ಮೈಸೂರಿನ ರಂಗಾಯಣದ ನಿರ್ದೇಶಕಿ ಭಾಗಿರಥಿ ಬಾಯಿ ಕದಂ ಅವರು ಸಮಾರೋಪ ಭಾಷಣ ಮಾಡಲಿದ್ದು, ನೀನಾಸಮ್'ನ ಕೆ.ವಿ. ಅಕ್ಷರ ಉಪಸ್ಥಿತರಿರುವರು ಎಂದು ಹೇಳಿದರು.
