ನವದೆಹಲಿ(ನ. 11): ನೋಟ್'ಬ್ಯಾನ್ ಆದ ಬಳಿಕ ಭಾರತದಲ್ಲಿ ಡಿಜಿಟಲ್ ವಹಿವಾಟಿಗೆ ಪ್ರಾಮುಖ್ಯತೆ ಸಿಗುತ್ತಿದೆ. ಜನರು ಕ್ಯಾಷ್'ಲೆಸ್ ವಹಿವಾಟಿಗೆ ಹೊಂದಿಕೊಳ್ಳತೊಡಗಿದ್ದಾರೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್'ಗಳ ಬಳಕೆ ಹೆಚ್ಚಾಗುತ್ತಿದೆ. ಆದರೆ, ಈ ನಡುವೆ ಮೊಬೈಲ್ ಫೋನ್'ಗಳೇ ಈಗ ಹಣ ವಹಿವಾಟಿನ ಕೇಂದ್ರವಾಗುತ್ತಿವೆ. ನೀತಿ ಆಯೋಗ್'ನ ಸಿಇಒ ಅಮಿತಾಬ್ ಕಾಂತ್ ಹೇಳುವ ಪ್ರಕಾರ, ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಎಟಿಎಂಗಳು ಮತ್ತು ಕಾರ್ಡ್'ಗಳು ನೇಪಥ್ಯಗೆ ಸರಿಯಲಿವೆ. ಜನರು ಮೊಬೈಲ್ ಫೋನ್ ಮೂಲಕವೇ ಎಲ್ಲಾ ವಹಿವಾಟು ನಡೆಸಲಿದ್ದಾರಂತೆ.

ನೋಯ್ಡಾದ ಅಮಿಟಿ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಬಳಿಕ ಭಾಷಣ ಮಾಡಿದ ಅಮಿತಾಭ್ ಕಾಂತ್, ಭಾರತದಲ್ಲಿರುವ ಯುವ ಸಮುದಾಯದಿಂದ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಪುಷ್ಟಿ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಭಾರತದಲ್ಲಿರುವ ಶೇ.72 ಜನರು 32 ವರ್ಷದೊಳಗಿನ ವಯಸ್ಸಿನವರಾಗಿದ್ದಾರೆ. 2040ರವರೆಗೂ ಯುವಸಮುದಾಯವೇ ಭಾರತದಲ್ಲಿ ತುಂಬಿತುಳುಕುತ್ತಿರುತ್ತದೆ. ಅಮೆರಿಕ, ಯೂರೋಪ್ ಮೊದಲಾದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಭಾಗ್ಯ ಇಲ್ಲ. ನಿರಂತರವಾಗಿ ಹೊಸ ಅನ್ವೇಷಣೆ ಮಾಡುವ, ನಿರಂತರವಾಗಿ ಚಲನಶೀಲವಾಗಿರುವ ಸಮಾಜ ಭಾರತದಲ್ಲಿ ನೆಲಸಲಿದೆ. ಭಾರತವು ಮುಂದಿನ ದಿನಗಳಲ್ಲಿ ಶೇ. 9-10 ಪ್ರತಿಶತದಷ್ಟು ವೇಗದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ," ಎಂದು ನೀತಿ ಆಯೋಗದ ಮುಖ್ಯಸ್ಥರು ಹೇಳಿದ್ದಾರೆ.

ಭಾರತವು ನೂರು ಕೋಟಿ ಬಯೋಮೆಟ್ರೆಕ್ಸ್ ಇರುವ, ನೂರು ಕೋಟಿ ಮೊಬೈಲ್ ಫೋನ್'ಗಳಿರುವ ಮತ್ತು ನೂರು ಕೋಟಿ ಬ್ಯಾಂಕ್ ಅಕೌಂಟ್ ಇರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ ಎಂದು ಅಮಿತಾಭ್ ಬಣ್ಣಿಸಿದ್ದಾರೆ.

ನೋಟ್ ಬ್ಯಾನ್ ಬಳಿಕ ಭಾರತದಲ್ಲಿ ಪೇಟಿಎಂನಂತಹ ಮೊಬೈಲ್ ಆ್ಯಪ್'ಗಳಿಗೆ ಬೇಡಿಕೆ ಬಂದಿದೆ. ಸರಕಾರದ್ದೇ ಆದ ಭೀಮ್ ಆ್ಯಪ್ ಕೂಡ ಸಾಕಷ್ಟು ಡೌನ್'ಲೋಡ್ ಆಗಿದೆ. ಎಲ್ಲಾ ಬ್ಯಾಂಕುಗಳೂ ತಮ್ಮದೇ ಆ್ಯಪ್'ಗಳನ್ನು ತಯಾರಿಸಿ ಹಣಕಾಸು ವಹಿವಾಟು ಕಾರ್ಯವನ್ನು ಸುಗಮಗೊಳಿಸಿದೆ. ವಿವಿಧ ಆ್ಯಪ್'ಗಳನ್ನು ಕ್ರೋಢೀಕರಿಸಿದರೆ, ಭಾರತದಲ್ಲಿರುವ ಡಿಜಿಟಲ್ ಪ್ಲಾಟ್'ಫಾರ್ಮ್ ವಿಶ್ವದಲ್ಲೇ ಅತೀದೊಡ್ಡದು ಎನ್ನಲಾಗುತ್ತಿದೆ. ಮೊಬೈಲ್'ನಲ್ಲೇ ಈಗ ಸುಲಭವಾಗಿ ಪೇಮೆಂಟ್ ಮಾಡಲು ಸಾಧ್ಯವಾಗಿದ್ದು, ಎಟಿಎಂ ಕಾರ್ಡ್ ಸ್ವೈಪ್ ಮಾಡುವ ಅಗತ್ಯವೇ ಇಲ್ಲವಾಗಿದೆ.