ಬೆಂಗಳೂರು :  ಕರ್ನಾಟಕದ ‘ಸಿಂಗಂ’ ಎಂದೇ ಹೆಸರು ಮಾಡಿರುವ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ದಕ್ಷಿಣ ವಿಭಾಗದ ಡಿಸಿಪಿಯಾಗಿರುವ ಅಣ್ಣಾಮಲೈ ಕುಪ್ಪೆಸ್ವಾಮಿ ಅವರು ರಾಜೀನಾಮೆ ಬಳಿಕ ರಾಜಕೀಯ ಅಥವಾ ಸಾಮಾಜಿಕ ಆಂದೋಲನದಲ್ಲಿ ಪಾಲ್ಗೊಳ್ಳಬಹುದು ಎಂದು ಸುದ್ದಿ ಕೇಳಿಬರುತ್ತಿದೆ.

ಇನ್ನು ಅಣ್ಣಾಮಲೈ ಅವರು ಮಂಗಳವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ರಾಜೀನಾಮೆ ವಿಚಾರ ತಿಳಿಸಲಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ತಮ್ಮ ರಾಜೀನಾಮೆ ವಿಚಾರವನ್ನು ಅಣ್ಣಾಮಲೈ ಅವರು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅದರಿಂದ ಅಚ್ಚರಿಗೊಂಡ ಹಿರಿಯ ಅಧಿಕಾರಿಗಳು ರಾಜೀನಾಮೆ ನಿರ್ಧಾರ ಬೇಡ ಎಂದು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಸಾರ್ವಜನಿಕರ ಸೇವೆ ಮಾಡಲು ರಾಜಕೀಯ ಅಥವಾ ಸಾಮಾಜಿಕ ಆಂದೋಲನಕ್ಕೆ ಸೇರಬೇಕು ಎಂಬ ನಿರ್ಧಾರದಿಂದ ಹಿಂದೆ ಸರಿಯಲು ಅವರು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣೆಯ ಹೀರೋಗಳೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡ 'ಸಿಂಗಂ', ಟ್ವೀಟ್ ವೈರಲ್

1984ರ ಜೂ.4ರಂದು ಜನಿಸಿರುವ ಅಣ್ಣಾಮಲೈ ಅವರು ಮೂಲತಃ ತಮಿಳುನಾಡಿನ ಕೊಯಮತ್ತೂರಿನವರಾಗಿದ್ದಾರೆ. ಬಿಇ ಎಂಜಿನಿಯರಿಂಗ್‌ ಮಾಡಿ ಎಂಬಿಎ ಪೂರ್ಣಗೊಳಿಸಿರುವ ಅಣ್ಣಾಮಲೈ ಅವರು 2011ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾರೆ.

ಮತದಾನ ಮಾಡಿ: ಖಾಕಿ ಖದರ್ ಹೆಚ್ಚಿಸಿದವರ ಮನವಿ ಹೀಗಿತ್ತು ನೋಡಿ!

2011ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅವರು ಕಾರ್ಕಳ ಉಪವಿಭಾಗದ ಎಎಸ್ಪಿಯಾಗಿ 2011ರಲ್ಲಿ ವೃತ್ತಿ ಆರಂಭಿಸಿ 2013ರಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕಗೊಂಡರು. ಬಳಿಕ ಅಲ್ಲಿಂದ ಚಿಕ್ಕಮಗಳೂರು ಎಸ್ಪಿಯಾಗಿ ಹೆಚ್ಚು ಸುದ್ದಿ ಮಾಡಿದರು. ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಜಿಲ್ಲೆಯಲ್ಲಿ ಖಡಕ್‌ ಅಧಿಕಾರಿ ಎಂದು ಹೆಸರು ಪಡೆದ ಅಣ್ಣಾಮಲೈ ಸಾರ್ವಜನಿಕರ ಪಾಲಿಗೆ ‘ಸಿಂಗಂ’ ಆಗಿದ್ದರು. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. 2018ರ ಅಕ್ಟೋಬರ್‌ 17ರಿಂದ ಅವರು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದಾರೆ.