ಸಿದ್ದರಾಮಯ್ಯ ಬಿಟ್ಟು ಎಚ್ ಡಿಕೆ ಕಡೆ ವಾಲಿದ ಪರಮೇಶ್ವರ್

DCM Parameshwar Support HD Kumaraswamy
Highlights

ಸಮ್ಮಿಶ್ರ ಸರ್ಕಾರ ರಚನೆಯಾದ ನಂತರದ ದಿನಗಳಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೆಚ್ಚು ಕಡಿಮೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಡೆಗೆ ವಾಲಿಬಿಟ್ಟಿದ್ದಾರೆ.

ಬೆಂಗಳೂರು : ಸಮ್ಮಿಶ್ರ ಸರ್ಕಾರದಲ್ಲಿ ಬಜೆಟ್ ಮಂಡನೆ, ಅಧಿಕಾರಿಗಳ ವರ್ಗಾವಣೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಧ್ಯೆ ಶೀತಲ ಸಮರ ನಡೆಯುತ್ತಿದೆಯೇನೋ ಎಂಬಂತೆ ಮೇಲ್ನೋಟಕ್ಕೆ ಅನಿಸಿದರೂ ಅದು ನಿಜವಲ್ಲವಂತೆ. ವಾಸ್ತವವಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನಡುವೆ ಗುಪ್ತಗಾಮಿನಿ ಯಾಗಿರುವ ಆಂತರಿಕ ತಿಕ್ಕಾಟದ ಮುಂದುವರೆದ ಭಾಗ ಇದು ಎನ್ನುವುದು ಕಾಂಗ್ರೆಸ್ಸಿನ ಉನ್ನತ ಮೂಲಗಳ ಅಭಿಪ್ರಾಯ. ಈ ಬೆಳವಣಿಗೆ ಇದ್ದಕ್ಕಿದ್ದಂತೆ ಆರಂಭವಾಗಿಲ್ಲ. 

ಸಮ್ಮಿಶ್ರ ಸರ್ಕಾರ ರಚನೆಯಾದ ನಂತರದ ದಿನಗಳಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೆಚ್ಚು ಕಡಿಮೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಡೆಗೆ ವಾಲಿಬಿಟ್ಟಿದ್ದಾರೆ. ಇಬ್ಬರೂ ಸೇರಿ ಅನೇಕ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ. ಇದು ವಿಶೇಷವಾಗಿ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಸಮಾಧಾನ, ಬೇಸರಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪರಮೇಶ್ವರ ಅವರ ಸಾಂಗತ್ಯ ಎಷ್ಟು ಬಲವಾಗಿದೆ ಎಂದರೆ ಕಾಂಗ್ರೆಸ್ ಶಾಸಕರಲ್ಲೂ ಗೊಂದಲ ಮೂಡತೊಡಗಿದೆ. ಹೊಸ ಅಧಿಕಾರ ಕೇಂದ್ರ ಸೃಷ್ಟಿಯಾಗಿರುವುದು ಬೇರೆ ಬೇರೆ ರೀತಿಯ ಚರ್ಚೆಗೆ ಗ್ರಾಸವಾಗಿದೆ. ಸಮ್ಮಿಶ್ರ ಸರ್ಕಾರದ ರಚನೆಯ ಆರಂಭದಿಂದಲೇ ಸಣ್ಣ ಅಂತರ ಕಾದುಕೊಂಡು ಬಂದಿದ್ದ ಸಿದ್ದರಾಮಯ್ಯ, ಸರ್ಕಾರ ರಚನೆ ನಂತರ ಉದ್ಭವವಾದ ಸಂಪುಟ, ಖಾತೆ ಹಂಚಿಕೆ ಸಂದರ್ಭದಲ್ಲಿ ಪಕ್ಷದ ಶಾಸಕರಲ್ಲಿ ಸಮಾಧಾನದ ಕಿಡಿ ಹೊತ್ತಿದ್ದ ವೇಳೆ ತಮ್ಮ ಪಾಡಿಗೆ ಐದು ದಿನಗಳ ಕಾಲ ಬಾದಾಮಿ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದರು. ಇದೀಗ ಎರಡು ಪಕ್ಷಗಳ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜಾರಿಗೊಳಿಸಲು ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ 10 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆಯಲು ಹೋಗಿರುವುದು ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ತಾಜಾ ಉದಾಹರಣೆ ಎನ್ನಲಾಗುತ್ತಿದೆ. 

ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿಯೊಬ್ಬರ ವರ್ಗಾವಣೆ ವಿಚಾರ ಚರ್ಚೆಯಾಗಿತ್ತು.  ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಯಾಗಿದ್ದ ಜಗದೀಶ್ ಅವರನ್ನು ವರ್ಗ ಮಾಡಿ ಆ ಸ್ಥಾನಕ್ಕೆ ನಾಗರಾಜ್ ಅವರನ್ನು ನೇಮಕ ಮಾಡಲಾಗಿತ್ತು. ಜಗದೀಶ್ ಅವರು ಕುರುಬ ಸಮುದಾಯದವರಾಗಿದ್ದರೆ, ನಾಗರಾಜ್ ಪರಿಶಿಷ್ಟರಾಗಿದ್ದು, ಪರಮೇಶ್ವರ್ ಅವರ ಆಪ್ತರಾಗಿದ್ದರು. ಈ ವರ್ಗಾವಣೆಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರು ಇನ್ನುಮುಂದೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ವರ್ಗಾವಣೆ ಮಾಡಬೇಕು ಎಂಬುದಾಗಿ ಹೇಳಿದ್ದರು. 

ಹೀಗಿದ್ದರೂ ಕೂಡಾ ಕುಮಾರಸ್ವಾಮಿ ಮತ್ತು ಪರಮೇಶ್ವರ್ ಒಂದಾಗಿ ಅನೇಕ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸಿದ್ದರಾಮಯ್ಯ ಅವರ ಅಸಮಾಧಾನ ಹೆಚ್ಚಾಗಲು ಕಾರಣವಾಗಿದೆ ಎಂಬ ಮಾಹಿತಿ ಕಾಂಗ್ರೆಸ್ ಪಾಳೆಯದಿಂದ ಹೊರಬಿದ್ದಿದೆ. 

ಗೊಂದಲದಲ್ಲಿ ಕಾಂಗ್ರೆಸ್  ಶಾಸಕರು: ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರ ಜುಗಲ್‌ಬಂದಿ ಕಾಂಗ್ರೆಸ್ ಶಾಸಕರಲ್ಲಿ ಗೊಂದಲಕ್ಕೂ ಕಾರಣವಾಗಿದೆ. ಹಿಂದೆ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರಗಳಲ್ಲಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೋಗುತ್ತಿದ್ದರು. ಬೆಂಗಳೂರು ಅಭಿವೃದ್ಧಿ ವಿಷಯಕ್ಕೆ ಬಂದರೆ ಕೆ.ಜೆ.ಜಾರ್ಜ್ ಅವರ ಹತ್ತಿರ ಹೋಗುತ್ತಿದ್ದರು. ಆದರೆ ಈಗ ಪರಮೇಶ್ವರ್ ಬಳಿ ಹೋದರೆ ಸಿದ್ದರಾಮಯ್ಯ ಸಿಟ್ಟಾಗುತ್ತಾ ರೆಂದು, ಸಿದ್ದರಾಮಯ್ಯ ಬಳಿ ಹೋದರೆ ಪರಮೇಶ್ವರ್ ಕೋಪಕ್ಕೆ ಗುರಿಯಾಗಬೇ ಕೆಂಬ ಆತಂಕ ಅವರಲ್ಲಿ ಕಾಡತೊಡಗಿದೆ. 

ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹತ್ತಿರ ಕಾಂಗ್ರೆಸ್ ಶಾಸಕರು ಹೋಗುತ್ತಿಲ್ಲ. ಪರಮೇಶ್ವರ್ ಹತ್ತಿರ ಹೋಗಲು ಗುಂಪುಗಾರಿಕೆ ಅಡ್ಡಿಯಾಗು ತ್ತಿದೆ. ಒಂದು ರೀತಿಯಲ್ಲಿ ಅತ್ತ ದರಿ ಇತ್ತ ಪುಲಿ ಎಂಬ ಸ್ಥಿತಿ ಶಾಸಕರದ್ದಾಗಿದೆ. ಪಕ್ಷದ ಶಾಸಕರಲ್ಲಿ ಹೆಚ್ಚುತ್ತಿರುವ ಅತೃಪ್ತಿ, ಅಸಮಾಧಾನದ ಬಗ್ಗೆ ಹಿರಿಯ ಮುಖಂಡರು ಮಾತನಾಡುತ್ತಿಲ್ಲ. ಸಮಾಧಾನ, ಉಪಶಮನ ಮಾಡುವ ಕೆಲಸ ಆಗುತ್ತಿಲ್ಲ. 

ಹಿರಿಯ ನಾಯಕರು ತಮ್ಮ ಪಾಡಿಗೆ ತಾವಿದ್ದಾರೆ. ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿದಂತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಹತ್ತಿರ ಹೋಗಲು ಶಾಸಕರಿಗೆ ಆಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕೆಂಬುದು ಗೊತ್ತಾಗದಂತಹ  ಸ್ಥಿತಿ ಶಾಸಕರದ್ದಾಗಿದೆ. 

ಮಂಡಳಿ, ನಿಗಮಕ್ಕೂ ಹಿಂಜರಿಕೆ: ರಾಜ್ಯದಲ್ಲಿರುವ ವಿವಿಧ ನಿಗಮ, ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡುವ ಪ್ರಕ್ರಿಯೆ ಇಷ್ಟರಲ್ಲೇ ಶುರುವಾಗುವ ಸಾಧ್ಯತೆಯಿದೆ. ಇವುಗಳ ಜವಾಬ್ದಾರಿ ತೆಗೆದುಕೊಂಡರೂ ಎಷ್ಟರ ಮಟ್ಟಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸ ಬಹುದೆಂಬ ಅನುಮಾನ, ಸಂಶಯ ಶಾಸಕರಲ್ಲಿ ಮೂಡಿದೆ. 

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಾರೆಯೇ ಎಂದು ಶಾಸಕರು ಹೊಸ ಜವಾಬ್ದಾರಿ ತೆಗೆದುಕೊಳ್ಳಲು ಹಿಂಜರಿಯುತ್ತಿರುವುದು ಹೊಸ ಬೆಳವಣಿಗೆಯಾಗಿದೆ. 

loader