ಬೆಂಗಳೂರು :  ಝೀರೋ ಟ್ರಾಫಿಕ್‌ ವ್ಯವಸ್ಥೆ ನಮಗೇನೂ ಶಾಶ್ವತವಾಗಿ ಸಿಗಲ್ಲ, ತಾತ್ಕಾಲಿಕವಾದುದು. ಸಂಚಾರದಟ್ಟಣೆಯಿಂದ ಜನರಿಗಾಗುತ್ತಿರುವ ಸಮಸ್ಯೆ ಅರಿಯಲು ಕೆಲವೊಮ್ಮೆ ಎಸ್ಕಾರ್ಟ್‌ ವಾಹನ ಬಿಟ್ಟು ನಾನೊಬ್ಬನೇ ಸ್ವತಃ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುತ್ತೇನೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ, ನಗರದ ಹಲವು ರಸ್ತೆಗಳಲ್ಲಿ ಏಕಕಾಲಕ್ಕೆ ನಡೆಯುತ್ತಿರುವ ವೈಟ್‌ಟಾಪಿಂಗ್‌ ಕಾಮಗಾರಿ ವಿಳಂಬದಿಂದ ಸಂಚಾರ ದಟ್ಟಣೆ ತೀವ್ರಗೊಂಡಿದೆ, ನೀವು ಝೀರೋ ಟ್ರಾಫಿಕ್‌ನಲ್ಲಿ ಸಂಚರಿಸುವುದರಿಂದ ಇದು ಗಮನಕ್ಕೆ ಬಂದಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೀವು ತಪ್ಪು ತಿಳಿದಿದ್ದೀರಿ. 

ನಮಗೇನೂ ಝೀರೋ ಟ್ರಾಫಿಕ್‌ ವ್ಯವಸ್ಥೆ ಶಾಶ್ವತವಲ್ಲ. ತಾತ್ಕಾಲಿಕವಾದುದು. ಸಂಚಾರ ದಟ್ಟಣೆಯಿಂದ ವಾಹನಸವಾರರು, ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆಯ ವಾಸ್ತವ ತಿಳಿಯಲು ಕೆಲವೊಮ್ಮೆ ನಾನೂ ಕೂಡ ಎಸ್ಕಾರ್ಟ್‌ಅನ್ನೂ ಬಿಟ್ಟು, ಸ್ವತಃ ಒಬ್ಬನೇ ಕಾರು ಚಾಲನೆ ಮಾಡಿಕೊಂಡು ತುಮಕೂರು ಮತ್ತಿತರ ಕಡೆಗೆ ಸಂಚರಿಸಿದ್ದೇನೆ. ಹಾಗಾಗಿ ಟ್ರಾಫಿಕ್‌ ಸಮಸ್ಯೆ ಅನುಭವ ನನಗೂ ಆಗಿದೆ. ವೈಟ್‌ಟಾಪಿಂಗ್‌ ಕಾಮಗಾರಿಯನ್ನು ರಸ್ತೆಯ ಎರಡೂ ಬದಿಗಳಲ್ಲಿ ಏಕಕಾಲಕ್ಕೆ ನಿರ್ವಹಿಸಲಾಗುವುದಿಲ್ಲ. ಒಂದು ಬದಿ ರಸ್ತೆ ಪೂರ್ಣಗೊಂಡ ಬಳಿಕ ಮತ್ತೊಂದು ಬದಿಯ ರಸ್ತೆಯ ಕಾಮಗಾರಿ ಆರಂಭಿಸಲಾಗುತ್ತದೆ. ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.