ಬೆಂಗಳೂರು[ಜು.08] :  ಮುಂಬೈನಲ್ಲಿ ನೆಲೆಗೊಂಡಿರುವವರು ಸೇರಿದಂತೆ ಐವರು ಅತೃಪ್ತ ಶಾಸಕರು ತಮ್ಮ ನಿರ್ಧಾರವನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದೇ ನಂಬಿರುವ ಕಾಂಗ್ರೆಸ್ ನಾಯಕತ್ವ, ಈ ಶಾಸಕರ ಪ್ರಮುಖ ಬೇಡಿಕೆಯಾದ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನದಿಂದ ಪರಮೇಶ್ವರ್ ಅವರನ್ನು ಬದಲಾಯಿಸುವ ದಿಸೆಯಲ್ಲೂ ಗಂಭೀರ ಚಿಂತನೆ ನಡೆಸಿದೆ.

ಮೂಲಗಳ ಪ್ರಕಾರ ಪರಮೇಶ್ವರ್ ಅವರನ್ನು ಬೆಂಗಳೂರು ನಗರ ಉಸ್ತುವಾರಿಯಿಂದ ಬದಲಾಯಿಸುವುದು ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದರೆ ಈ ಐವರು ತಮ್ಮ ನಿರ್ಧಾರ ಬದಲಿಸಬಹುದು ಎಂದ ಚಿಂತನೆ ಕಾಂಗ್ರೆಸ್ ನಾಯಕರಲ್ಲಿದೆ. ಮೂಲಗಳ ಪ್ರಕಾರ ಇದಲ್ಲದೆ, ಹಿರಿಯ ನಾಯಕ  ರಾಮಲಿಂಗಾರೆಡ್ಡಿ ಅವರು ಬೆಂಗಳೂರು ಉಸ್ತುವಾರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಪರಮೇಶ್ವರ್ ಅವರನ್ನು ಬದಲಾಯಿಸಬೇಕು ಮತ್ತು ಕೃಷ್ಣ ಬೈರೇಗೌಡರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. 

ಈ ಬೇಡಿಕೆ ಈಡೇರಿದರೆ ಐವರು ಅತೃಪ್ತರು (ರಾಜೀನಾಮೆ ನೀಡಿರುವ ಎಸ್.ಟಿ. ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು, ರಾಮಲಿಂಗಾರೆಡ್ಡಿ ಮತ್ತು ಸೋಮವಾರ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿರುವ ಸೌಮ್ಯ ರೆಡ್ಡಿ) ತಮ್ಮ ನಿರ್ಧಾರಗಳಿಂದ ಹಿಂದಕ್ಕೆ ಸರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.