ಗ್ರಾಮ ವಾಸ್ತವ್ಯ, ಮಹಿಳಾ ಸಮಾವೇಶದ ಬಳಿಕ ಕೊರಟಗೆರೆ ಕ್ಷೇತ್ರದ ಮತದಾರರ ಮನವೊಲಿಕೆಗೆ ಬಡ್ಡಿರಹಿತ ಸಾಲದ ಮೂಲಕ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್  ಮುಂದಾಗಿ ರುವಂತಿದೆ.

ಕೊರಟಗೆರೆ: ಗ್ರಾಮ ವಾಸ್ತವ್ಯ, ಮಹಿಳಾ ಸಮಾವೇಶದ ಬಳಿಕ ಕೊರಟಗೆರೆ ಕ್ಷೇತ್ರದ ಮತದಾರರ ಮನವೊಲಿಕೆಗೆ ಬಡ್ಡಿರಹಿತ ಸಾಲದ ಮೂಲಕ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂದಾಗಿ ರುವಂತಿದೆ.

ಪರಂ ಅವರಿಗೆ ಮಧುಗಿರಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸಾಥ್ ನೀಡಿದ್ದಾರೆ. ಭಾನುವಾರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, 553 ಸ್ವಸಹಾಯ ಗುಂಪು ಮತ್ತು 5932 ರೈತ ಕುಟುಂಬಕ್ಕೆ ತುಮಕೂರು ಡಿಸಿಸಿ ಬ್ಯಾಂಕಿನಿಂದ 4.9 ಕೋಟಿ ರು. ಬಡ್ಡಿ ರಹಿತ ಸಾಲ ವಿತರಿಸಿದ ಪರಮೇಶ್ವರ್, ರಾಜ್ಯದ ಮಹಿಳೆಯರು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಯಾಗುವ ಮೂಲಕ ಆರ್ಥಿಕ ಸದೃಢರಾಗಬೇಕು ಎಂದರು.

ಶಾಸಕ ರಾಜಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್‌ನ ಮೂಲಕ ನಾವು ಪಕ್ಷದ ಪರ ರಾಜಕೀಯವನ್ನೂ ಮಾಡ್ತೀವಿ. ರೈತರಿಗೆ ಸಾಲದ ರೂಪದಲ್ಲಿ ಅನುಕೂಲವನ್ನೂ ಮಾಡಿಕೊಡ್ತೀವಿ.

ಡಿಸಿಸಿ ಬ್ಯಾಂಕ್‌ನಲ್ಲಿ ಒಂದು ಪೈಸೆಯೂ ಸಹ ಸರ್ಕಾರದ ಹಣವಿಲ್ಲ. ಸಾರ್ವಜನಿಕರ ಹಣವನ್ನು ನಮ್ಮ ಸ್ವಾರ್ಥಕ್ಕಾಗಿ ಬಳುಸುತ್ತಿಲ್ಲ ಎಂದರು. ವಿಡೀಯೋ ವೈರಲ್: ಕಾರ್ಯಕ್ರಮ ಮುಕ್ತಾಯವಾದ ನಂತರ ಕೆಲ ಮುಖಂಡರು ಸಮಾರಂಭಕ್ಕೆ ಬಂದಿದ್ದ ಮಹಿಳೆಯರಿಗೆ ರಾಜಾರೋಷವಾಗಿ ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.