‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ರಾಜಕೀಯ ಸೇರ್ಪಡೆ ವಿಚಾರ ಕಾಂಗ್ರೆಸ್ ವಲಯ ಹಾಗೂ ಕನ್ನಡ ಚಿತ್ರೋದ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ದರ್ಶನ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಿದರೆ, ಪತ್ರಿಕಾಗೋಷ್ಠಿ ಯೊಂದರಲ್ಲಿ ಪಾಲ್ಗೊಂಡಿದ್ದ ನಟ ದರ್ಶನ್ ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಯಾವುದೇ ಪ್ರತಿಕ್ರಿಯೆ ನೀಡದೆ ಗೋಷ್ಠಿ ಯಿಂದ ನಿರ್ಗಮಿಸುವ ಮೂಲಕ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ದರ್ಶನ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆದಿಲ್ಲ ಎಂದಿದ್ದಾರೆ.
ಬೆಂಗಳೂರು(ಸೆ.01): ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ರಾಜಕೀಯ ಸೇರ್ಪಡೆ ವಿಚಾರ ಕಾಂಗ್ರೆಸ್ ವಲಯ ಹಾಗೂ ಕನ್ನಡ ಚಿತ್ರೋದ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ದರ್ಶನ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಿದರೆ, ಪತ್ರಿಕಾಗೋಷ್ಠಿ ಯೊಂದರಲ್ಲಿ ಪಾಲ್ಗೊಂಡಿದ್ದ ನಟ ದರ್ಶನ್ ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಯಾವುದೇ ಪ್ರತಿಕ್ರಿಯೆ ನೀಡದೆ ಗೋಷ್ಠಿ ಯಿಂದ ನಿರ್ಗಮಿಸುವ ಮೂಲಕ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ದರ್ಶನ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆದಿಲ್ಲ ಎಂದಿದ್ದಾರೆ.
ಇನ್ನು ದರ್ಶನ್ ಸಹೋದರ ದಿನಕರ್ ಅವರು, ದರ್ಶನ್ ಮನಸ್ಥಿತಿ ರಾಜಕೀಯಕ್ಕೆ ಸರಿಹೊಂದು ವುದಿಲ್ಲ. ಶೇ.200ರಷ್ಟು ಅವರು ರಾಜಕೀಯ ಸೇರುವುದಿಲ್ಲ ಎಂದು ಖಚಿತವಾಗಿ ಹೇಳಿದ್ದಾರೆ. ಇನ್ನು ದರ್ಶನ್ ಅವರ ತಾಯಿ ಮೀನಾ ತೂಗು ದೀಪ ಅವರು, ರಾಜಕೀಯ ಸೇರುವುದು ದರ್ಶನ್ ವೈಯಕ್ತಿಕ ವಿಚಾರ ಎಂದಿದ್ದಾರೆ. ಈ ವಿಭಿನ್ನ ಹೇಳಿಕೆಗಳು ದರ್ಶನ್ ರಾಜ ಕೀಯ ಸೇರ್ಪಡೆ ವಿಚಾರದ ಚರ್ಚೆಯನ್ನು ಮತ್ತಷ್ಟು ಕುತೂಹಲಕರಗೊಳಿಸಿವೆ.
ಈ ನಡುವೆ, ದರ್ಶನ್ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಒಪ್ಪಿದ್ದಾರೆ. ಆದರೆ, ಚುನಾವಣಾ ರಾಜಕೀಯಕ್ಕೆ ಇಳಿಯುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಗುರುವಾರ ಪತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ದರ್ಶನ್ ಕನ್ನಡ ನೆಲ ಜಲದ ಬಗ್ಗೆ ಕಾಳಜಿಯುಳ್ಳ ಹಾಗೂ ಈ ಸಂಬಂಧ ಸಾಕಷ್ಟು ಹೋರಾಟಗಳನ್ನು ನಡೆಸಿರುವ ನಟ. ಅವರು ಕಾಂಗ್ರೆಸ್ ಪಕ್ಷ ಸೇರುವುದಾದರೆ ಸ್ವಾಗತ. ವಾಸ್ತವವಾಗಿ ದರ್ಶನ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಪಕ್ಷದಲ್ಲಿ ಕೆಲವು ಹಂತಗಳಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ದರ್ಶನ್ ಅವರೊಂದಿಗೂ ಮಾತುಕತೆ ನಡೆ ದಿತ್ತು. ದರ್ಶನ್ ಪಕ್ಷಕ್ಕೆ ಬಂದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು. ಆದರೆ, ಪರಮೇಶ್ವರ್ ಅವರು, ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದಷ್ಟೇ ಹೇಳಿದರು.
ಚಿತ್ರೋದ್ಯಮದಲ್ಲಿ ಸಂಚಲನ:
ಇನ್ನು ಉಪೇಂದ್ರ ನಂತರ ದರ್ಶನ್ ರಾಜಕೀಯ ಎಂಟ್ರಿಯ ಸುದ್ದಿ ಕನ್ನಡ ಚಿತ್ರೋದ್ಯಮದಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಸದ್ಯದಲ್ಲಿ ದರ್ಶನ್ ಕಾಲ್‌ಶೀಟ್ ನೀಡಿರುವ ಒಟ್ಟು ಸಿನಿಮಾಗಳ ಜತೆಗೆ ಅವರ ರಾಜಕೀಯಕ್ಕೆ ನೆಲೆ ಆಗಲಿರುವ ಮೈಸೂರಿನ ನಂಟು ಕೂಡ ಚರ್ಚೆಯ ಮುನ್ನೆಲೆಗೆ ಬಂದಿವೆ. ಹಲವು ಲೆಕ್ಕಾ ಚಾರಗಳ ಮೂಲಕ ದರ್ಶನ್ ರಾಜಕೀಯಕ್ಕೆ ಬರುವುದು ಬಹುತೇಕ ಖಚಿತ ಅನ್ನುವುದು ಗಾಂಧಿನಗರದ ನಂಬಿಕೆ. ಗುರುವಾರ ನಗರದಲ್ಲಿ ತಮ್ಮ ರಾಜಕೀಯ ಎಂಟ್ರಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಟ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗಿದ್ದು, ಸದ್ಯದ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡಿದೆ.
ದರ್ಶನ್ ರಾಜಕೀಯದ ಪ್ರವೇಶ ಕುರಿತು ಮೊದಲು ವರದಿ ಮಾಡಿದ್ದು ‘ಕನ್ನಡ ಪ್ರಭ’. ಈ ವರದಿ ಬಹಿರಂಗವಾಗುತ್ತಿದ್ದಂತೆಯೇ ಗಾಂಧಿನಗದಲ್ಲಿ ದರ್ಶನ್ ಅವರದ್ದೇ ಸುದ್ದಿ. ಮತ್ತೊಂದೆಡೆ ಗುರುವಾರ ಬೆಳಗ್ಗೆಯೇ ನಗರದ ಕಂಠೀರವ ಸ್ಟುಡಿಯೋದಲ್ಲಿ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇ ಶನದ ‘ಲೈಫ್ ಜತೆ ಒಂದು ಸೆಲ್ಫಿ’ ಚಿತ್ರದ ಮುಹೂರ್ತ ಫಿಕ್ಸ್ ಆಗಿತ್ತು. ದರ್ಶನ್ ಸೇರಿ ಅಲ್ಲಿ ಅವರ ಕುಟುಬಂದವರೆಲ್ಲ ಮಾಧ್ಯಮದ ಮುಂದೆ ಹಾಜರಿದ್ದರು. ದರ್ಶನ್ ಎಂಟ್ರಿ ಕುರಿತು ಮೊದಲು ದಿನಕರ್ ತೂಗುದೀಪ ಪ್ರತಿ ಕ್ರಿಯೆ ನೀಡಿದರು. ‘ದರ್ಶನ್ ಮನಸ್ಥಿತಿಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ. ಅವರು ರಾಜಕೀಯಕ್ಕೆ ಹೋಗುತ್ತಿದ್ದಾರೆನ್ನುವುದು ಶೇ.200ರಷ್ಟು ಸುಳ್ಳು ಸುದ್ದಿ. ಇದು ಎಲ್ಲಿಂದ ಬಂತೋ ಗೊತ್ತಿಲ್ಲ’ ಎಂದರು ದಿನಕರ್.
ದರ್ಶನ್ ತಾಯಿ ಮೀನಾ ತೂಗುದೀಪ ಅವರು ಕೂಡ ಪ್ರತಿಕ್ರಿಯೆ ನೀಡಿ, ದರ್ಶನ್ ರಾಜಕೀಯಕ್ಕೆ ಬರುತ್ತಾರೆ, ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆನ್ನುವ ಒಂದು ಸುದ್ದಿಯೂ ನನಗೆ ಗೊತ್ತಿಲ್ಲ’ ಎಂದರು. ನಂತರದ ಸರದಿ ದರ್ಶನ್ ಅವರದ್ದು. ರಾಜಕೀಯ ಎಂಟ್ರಿಯ ಕುರಿತ ಪ್ರಶ್ನೆ ಕೇಳುತ್ತಿದ್ದಂತೆ ಪ್ರತಿಕ್ರಿಯೆ ನೀಡದೆ ಹೊರಟು ಹೋದರು. ಹಾಗಂತ ಮಾಧ್ಯಮದವರು ಕೇಳಿದ ಪ್ರಶ್ನೆಯನ್ನು ನಿರಾಕರಿಸಲಿಲ್ಲ. ಕಾಕತಾಳೀಯ ಎನ್ನುವ ಹಾಗೆ ಮುಹೂರ್ತ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ ಮುಖ್ಯ ಅತಿಥಿ ಆಗಿ ಭಾಗವಹಿಸಿದ್ದರು. ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ‘ಸಿನಿಮಾ ಮಂದಿ ರಾಜಕೀಯಕ್ಕೆ ಬರುತ್ತಿರುವುದು ಇದು ಹೊಸದಲ್ಲ. ಸಾಕಷ್ಟು ಜನ ಅಲ್ಲಿಂದ ರಾಜಕೀಯಕ್ಕೆ ಬಂದಿದ್ದನ್ನು ನಾನು ನೋಡಿದ್ದೇನೆ. ಈಗ ದರ್ಶನ್ ರಾಜಕೀಯಕ್ಕೆ ಬರುತ್ತಾರೆಂದು ಹೇಳಲಾಗುತ್ತಿದೆ. ಅದು ಅವರ ವೈಯಕ್ತಿಕ ವಿಚಾರ. ಹಾಗೊಂದು ವೇಳೆ ಜೆಡಿಎಸ್‌ಗೆ ಬಂದ್ರೆ ಮುಕ್ತ ಸ್ವಾಗತ ನೀಡಲಾಗುವುದು’ ಎಂದರು ದೇವೇಗೌಡ.
