ದರ್ಶನ್ ಕಾರು ಅಪಘಾತದ ಬಗ್ಗೆ ಇದೀಗ ದರ್ಶನ್ ಸ್ನೇಹೊತ ರಾಯ್ ಆ್ಯಂಟನಿ ಮತ್ತೊಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಅಪಘಾತವಾದ ಸಮಯದಲ್ಲಿ ತಾವೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದುದಾಗಿ ತಿಳಿಸಿದ್ದಾರೆ. 

ಮೈಸೂರು: ಅಪಘಾತವಾದ ವೇಳೆ ತಾನೇ ಕಾರನ್ನು ಚಾಲನೆ ಮಾಡುತ್ತಿದ್ದೆ ಎಂದು ನಟ ದರ್ಶನ್‌ ತೂಗುದೀಪ ಅವರ ಸ್ನೇಹಿತ ರಾಯ್‌ ಆಂಟೋನಿ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆದ ರಾಯ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಬಳಿಕ ದೂರವಾಣಿ ಮೂಲಕ ಸಂಪರ್ಕಕ್ಕೆ ಸಿಕ್ಕ ರಾಯ್‌, ನಾನೀಗ ಮನೆಯಲ್ಲಿದ್ದು, ವಿಶ್ರಾಂತಿ ಪಡೆಯುತ್ತಿದ್ದೇನೆ. ಆರೋಗ್ಯವಾಗಿದ್ದೇನೆ. ಅಪಘಾತವಾದ ಸಂದರ್ಭದಲ್ಲಿ ನಾನೇ ಕಾರನ್ನು ಚಾಲನೆ ಮಾಡುತ್ತಿದ್ದೆ ಎಂದಿದ್ದಾರೆ.

ಸೋಮವಾರ ಮುಂಜಾನೆ ಮೈಸೂರಿನ ಹೆಬ್ಬಾಳ ಹೊರ ವರ್ತುಲ ರಸ್ತೆಯಲ್ಲಿ ನಟ ದರ್ಶನ್‌ ಅವರಿದ್ದ ಕಾರು ಡಿವೈಡರ್‌ವೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಕೂದಲೆಳೆ ಅಂತರದಿಂದ ದರ್ಶನ್‌ ಪ್ರಾಣಾಪಾಯದದಿಂದ ಪಾರಾಗಿದ್ದರು. ಘಟನೆ ವೇಳೆ ಕಾರಿನಲ್ಲಿದ್ದ ನಟರಾದ ದೇವರಾಜ್‌, ಅವರ ಪುತ್ರ ಪ್ರಜ್ವಲ್‌ ದೇವರಾಜ್‌ ಗಾಯಗೊಂಡಿದ್ದರು. ದರ್ಶನ್‌ ಹಾಗೂ ಆಂಟೋನಿ ಕೈ ಮುರಿದಿತ್ತು.

ದರ್ಶನ್‌ ಇಂದು ಡಿಸ್ಚಾಜ್‌ರ್‍ ಸಾಧ್ಯತೆ: ಇತ್ತ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಚಿಕಿತ್ಸೆ ಮುಂದುವರೆದಿದ್ದು, ಶನಿವಾರ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗುವ ಸಾಧ್ಯತೆ ಇದೆ. ಅಪಘಾತದ ನಂತರ ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್‌ರನ್ನು ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಮಾಡುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದರು. 

ಆದರೆ ಶುಕ್ರವಾರ ಸಂಜೆಯಾದರೂ ದರ್ಶನ್‌ ಅವರನ್ನು ಆಸ್ಪತ್ರೆಯಿಂದ ಕಳುಹಿಸುವ ಯಾವುದೇ ಸೂಚನೆ ಕಂಡು ಬರಲಿಲ್ಲ. ಖಳನಟ ರವಿಶಂಕರ್‌ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ದರ್ಶನ್‌ ಅವರ ಆರೋಗ್ಯ ವಿಚಾರಿಸಿದರು. ದರ್ಶನ್‌ ಅವರ ತಾಯಿ ಮೀನಾ ಅವರೂ ಭೇಟಿ ನೀಡಿ ಸಂಜೆವರೆಗೂ ಆಸ್ಪತ್ರೆಯಲ್ಲಿಯೇ ಇದ್ದರು. ದರ್ಶನ್‌ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಯಾವಾಗ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.