ಮೈಸೂರು (ನ. 03): ನಟ ದರ್ಶನ್‌ ಕಾರು ಅಪಘಾತ ಪ್ರಕರಣ ಸಂಬಂಧ ಮೈಸೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.  ಅಪಘಾತ ಪ್ರಕರಣದ ಇಂಚಿಂಚೂ ಮಾಹಿತಿ ಕಲೆ ಹಾಕಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.  ವಿವಿ ಪುರಂ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿಗಳು ತನಿಖೆ ಚುರುಕುಗೊಳಿಸಿದ್ದಾರೆ. 

ಸೆ.23 ರಂದು ದರ್ಶನ್‌ ಕಾರು ಅಪಘಾತಕ್ಕಿಡಾಗಿದೆ.  ಆ ಕಾರನ್ನ ಅವರ ಗೆಳೆಯ ಆಂಟೋನಿ ರಾಯ್‌ ಚಾಲನೆ ಮಾಡುತ್ತಿದ್ದರು. ರಿಂಗ್‌ರಸ್ತೆಯ ಜಂಕ್ಷನ್‌ ಬಳಿ ರಾಯ್‌ ಅವರ ನಿರ್ಲಕ್ಷ್ಯತನದಿಂದ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.  ಈ ನಂತರ ಕಾರಿನಲ್ಲಿದ್ದ 5 ಮಂದಿಗೆ ಗಾಯಗಳಾಗಿ ಚಿಕಿತ್ಸೆ ಪಡೆದಿದ್ದಾರೆ.  ಈ ಸಮಯದಲ್ಲಿ ದರ್ಶನ್‌ರಿಗೆ ಸಹಾಯ ಮಾಡಲು ಬಂದ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಅವರಿಗೂ ಗಾಯಗಳಾಗಿದೆ.  ಅವರು ಸಹ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 

ಕಾರನ್ನ ಸರ್ಕಾರಿ ಆರ್‌ಟಿಓ ಅಧಿಕಾರಿಗಳು ಪರಿಶೀಲಿಸಿದ್ದು ಯಾವುದೇ ತಾಂತ್ರಿಕ ಕಾರಣದಿಂದ ಅಪಘಾತ ಆಗಿಲ್ಲ ಎಂದು ವರದಿ ನೀಡಿದ್ದಾರೆ.  ಘಟನೆ ಸಂಬಂಧ ನಟರಾದ ದರ್ಶನ್‌, ದೇವರಾಜ್‌, ಪ್ರಜ್ವಲ್‌ದೇವರಾಜ್‌ ಚಾಲಕ ಆಂಟೋನಿ, ಕಾರಿನಲ್ಲಿದ್ದ ಪ್ರಕಾಶ್‌ ಎಂಬುವ ಹೇಳಿಕೆ ಪಡೆಯಲಾಗಿದೆ.  ಎಲ್ಲರ ಹೇಳಿಕೆಯಲ್ಲೂ ಆಂಟೋನಿಯವರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಸಹಜ ಅಭಿಪ್ರಾಯ ಬಂದಿದೆ.  ತಪ್ಪಿತಸ್ಥ ಚಾಲಕ ಆಂಟೋನಿ ರಾಯ್‌ ವಿರುದ್ದ ಕಾನೂನಿ ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ವಿವಿಪುರಂ ಸಂಚಾರ ಠಾಣಾ ಪೊಲೀಸರು ಮನವಿ ಮಾಡಿದ್ದಾರೆ.