ಯಾದಗಿರಿ(ಅ.03): ಆ ತುಂಬು ಗರ್ಭಿಣಿ ಎಲ್ಲರಂತೆ ಹೆರಿಗೆಗಾಗಿ ಆಸ್ಪತ್ರೆ ಸೇರಿದ್ದಳು. ಆಸ್ಪತ್ರೆಗೆ ಹಣ ಕಟ್ಟಿ ವಿವಿಧ ಪರೀಕ್ಷೆ ಕೂಡ ನಡೆದಿತ್ತು. ಇನ್ನೇನು ಹೆರಿಗೆಯಾಗುತ್ತದೆ ಎನ್ನುವ ಹೊತ್ತಿಗೆ ಸಿಬ್ಬಂದಿ ಗರ್ಭಿಣಿಯನ್ನು ಆಸ್ಪತ್ರೆಯಿಂದ ಹೊರದಬ್ಬಿದ್ದಾರೆ. ಈ ವೇಳೆ ಗರ್ಭಿಣಿ ಆ ಆಸ್ಪತ್ರೆ ಎದುರೇ ಜನ್ಮ ನೀಡಿದ್ದಾಳೆ. ಈ ಅಮಾನವೀಯ ಘಟನೆ ನಡೆದದ್ದು ಎಲ್ಲಿ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಗ್ರಾಮದ ರೇಣುಕಾ ಯಾದಗಿರಿಯ ಆದರ್ಶ ಹೆರಿಗೆ ಆಸ್ಪತ್ರೆಯ ಅಮಾನವೀಯತೆ ಕಾರಣ, ಅದೇ ಆಸ್ಪತ್ರೆಯ ಮುಂದೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ರೇಣುಕಾ ತಂದೆ ಯಂಕಣ್ಣ, ಮಗಳ ಚೊಚ್ಚಲ ಹೆರಿಗೆಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿಗಿರುವ ಆದರ್ಶ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ವೈದ್ಯೆ ಪ್ರೇಮಾ, ನಿಮ್ಮ ಮಗಳು ಹೆರಿಗೆಗೆ ಸ್ಪಂದಿಸುತ್ತಿಲ್ಲ ಅಂತ ಹೇಳಿ ಗರ್ಭಿಣಿಯನ್ನು ಹೊರದಬ್ಬಿದ್ದಾರೆ. ಆದರೆ ಇದೇ ವೇಳೆ ಆಸ್ಪತ್ರೆ ಎದುರೇ ರೇಣುಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ತಾಯಿ ಹಾಗೂ ನವಜಾತ ಶಿಶುವನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಆದರ್ಶ ಆಸ್ಪತ್ರೆ ಸಿಬ್ಬಂದಿ ಬಾಕಿ 6 ಸಾವಿರ ಹಣವನ್ನು ಕಟ್ಟಿ ಹೋಗುವಂತೆ ಆಂಬುಲೆನ್ಸ್ ಚಾಲಕನಿಗೆ ಹೇಳಿದ್ದಾರಂತೆ.
ಒಟ್ಟಿನಲ್ಲಿ ಆದರ್ಶ ಎನ್ನುವ ಹೆರಿಗೆ ಆಸ್ಪತ್ರೆ ಆದರ್ಶ ಪಾಲಿಸುವುದಿರಲಿ, ಮಾನವೀಯತೆಯನ್ನೇ ಮರೆತಂತಿದೆ. ಹಣದಾಸೆಗೆ ಗರ್ಭಿಣಿಯ ಜೀವದ ಜೊತೆ ಆಸ್ಪತ್ರೆಯ ವೈದ್ಯರು ಚೆಲ್ಲಾಟವಾಡಿದ್ದು ಮಾತ್ರ ಖಂಡನೀಯ.
