ನವದೆಹಲಿ: ದೇಶದ ಜಲಾಶಯಗಳಲ್ಲಿ ನೀರಿನ ಮಟ್ಟಭಾರಿ ಪ್ರಮಾಣದಲ್ಲಿ ಕುಸಿತ ಅನುಭವಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಕೇಂದ್ರ ಸರ್ಕಾರ ‘ಬರ ಸಲಹಾವಳಿ’ಗಳನ್ನು ನೀಡಿದೆ. ನೀರನ್ನು ವಿವೇಕಯುತವಾಗಿ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದೆ.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಕಳೆದ ವಾರವೇ ಈ ಸಲಹೆ ಬಂದಿದ್ದರೆ, ಶುಕ್ರವಾರ ತಮಿಳುನಾಡಿಗೆ ರವಾನೆಯಾಗಿದೆ ಎಂದು ಕೇಂದ್ರ ಜಲ ಆಯೋಗದ ಸದಸ್ಯ ಎಸ್‌.ಕೆ. ಹಲ್ದಾರ್‌ ಅವರು ತಿಳಿಸಿದ್ದಾರೆ.

ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದಾಗ ಜಲಾಶಯದಲ್ಲಿ ಶೇ.20ಕ್ಕಿಂತ ಕಡಿಮೆ ನೀರು ಇದ್ದಾಗ ಈ ರೀತಿಯ ಸಲಹಾವಳಿಗಳನ್ನು ಕೇಂದ್ರವು ರಾಜ್ಯಗಳಿಗೆ ರವಾನಿಸುತ್ತದೆ. ನೀರು ರಾಜ್ಯಗಳಿಗೆ ಸಂಬಂಧಿಸಿದ ಅಧಿಕಾರವಾಗಿರುವುದರಿಂದ, ಅಣೆಕಟ್ಟೆಗಳಲ್ಲಿ ನೀರಿನ ಮಟ್ಟಕುಸಿದಾಗ ಅಲ್ಲಿನ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಲಹೆ ಮಾಡುತ್ತದೆ.