ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವ ಮೂಡಿಸಲು ದಲಿತರ ಮನೆಯಲ್ಲಿ ವಾಸ್ತವ್ಯ, ದಲಿತರ ಮನೆಯಲ್ಲಿ ಉಪಾಹಾರ ಸೇವನೆಯಂತಹ ಕಾರ್ಯಕ್ರಮಗಳನ್ನು ರಾಜಕಾರಣಿಗಳು ನಡೆಸುತ್ತಿರುವಾಗಲೇ ಸುಲಭ್ ಶೌಚಾಲಯದ ಹರಿಕಾರ ಬಿಂದೇಶ್ವರ್ ಪಾಠಕ್ ಅವರು ಸದ್ದಿಲ್ಲದೇ ಕ್ರಾಂತಿಯನ್ನೇ ಮಾಡಿದ್ದಾರೆ. ಮಲಹೊರುವ ಪದ್ಧತಿಯಿಂದ ವಿಮುಕ್ತಿಗೊಳಿಸಿ, ದಲಿತರನ್ನು  ಬ್ರಾಹ್ಮಣರನ್ನಾಗಿ ಪರಿವರ್ತಿಸಿ ಅವರಿಗೆ ಉದ್ಯೋಗ ನೀಡುತ್ತಿದ್ದಾರೆ.

ನವದೆಹಲಿ: ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವ ಮೂಡಿಸಲು ದಲಿತರ ಮನೆಯಲ್ಲಿ ವಾಸ್ತವ್ಯ, ದಲಿತರ ಮನೆಯಲ್ಲಿ ಉಪಾಹಾರ ಸೇವನೆಯಂತಹ ಕಾರ್ಯಕ್ರಮಗಳನ್ನು ರಾಜಕಾರಣಿಗಳು ನಡೆಸುತ್ತಿರುವಾಗಲೇ ಸುಲಭ್ ಶೌಚಾಲಯದ ಹರಿಕಾರ ಬಿಂದೇಶ್ವರ್ ಪಾಠಕ್ ಅವರು ಸದ್ದಿಲ್ಲದೇ ಕ್ರಾಂತಿಯನ್ನೇ ಮಾಡಿದ್ದಾರೆ. ಮಲಹೊರುವ ಪದ್ಧತಿಯಿಂದ ವಿಮುಕ್ತಿಗೊಳಿಸಿ, ದಲಿತರನ್ನು ಬ್ರಾಹ್ಮಣರನ್ನಾಗಿ ಪರಿವರ್ತಿಸಿ ಅವರಿಗೆ ಉದ್ಯೋಗ ನೀಡುತ್ತಿದ್ದಾರೆ.

ಸುಲಭ್ ಇಂಟರ್’ನ್ಯಾಷನಲ್ ಸಂಸ್ಥೆಯ ಮುಖ್ಯಸ್ಥ ಪಾಠಕ್ ಪ್ರಧಾನಿ ಮೋದಿ ಕುರಿತು ರಚಿಸಿರುವ ಪುಸ್ತಕ ಬುಧವಾರ ದೆಹಲಿಯಲ್ಲಿ ಬಿಡುಗಡೆಯಾಯಿತು. ಇದೇ ವೇಳೆ ಅವರ ಕ್ರಾಂತಿಯೂ ಬೆಳಕಿಗೆ ಬಂದಿತು.

ರಾಜಸ್ಥಾನದ ಅಲ್ವಾರ್ ಹಾಗೂ ಟೋಂಕ್’ನ ಪುರುಷರು-ಮಹಿಳೆಯರು ಹಳದಿ ಸೀರೆ ಮತ್ತು ವಸ್ತ್ರ ಧರಿಸಿ ಸಮಾರಂಭದಲ್ಲಿ ಕಂಡುಬಂದರು. ಅವರೆಲ್ಲ ಸುಲಭ್ ಸಂಸ್ಥೆಯ ನೌಕರರು.

ಈ ಹಿಂದೆ ನಾವು ವಾಲ್ಮೀಕಿಗಳಾಗಿದ್ದೆವು, ಪಾಠಕ್ ನಮ್ಮನ್ನು ಬ್ರಾಹ್ಮಣರಾಗಿಸಿದ್ದಾರೆ. ಈ ಹಿಂದೆ ನಾವು ಮಲ ಹೊರುತ್ತಿದ್ದೆವು. ಈಗ ಉತ್ತಮ ಕೆಲಸ ಸಿಕ್ಕಿದೆ. ಮಲಹೊರುವವರಂತೆ ನಾವೂ ಈ ಹಿಂದೆ ನೀಲಿ ಸಮವಸ್ತ್ರ ಧರಿಸುತ್ತಿದ್ದೆವು. ಈಗ ಸುಂದರ ಹಳದಿ ಸೀರೆ ತೊಡುತ್ತಿದ್ದೇವೆ’ ಎಂದು ಅಲ್ವಾರ್’ನಲ್ಲಿ ಸುಲಭ್ ತಂಡವನ್ನು ನೋಡಿಕೊಳ್ಳುತ್ತಿರುವ ಉಷಾ ಚಮ್ಮಾರ್ ತಿಳಿಸಿದರು.

ಕಳೆದ ವರ್ಷ ಅಲ್ವಾರ್’ನಲ್ಲಿನ ದೇಗುಲವೊಂದಕ್ಕೆ ಪಾಠಕ್ ಅವರು ಕರೆದುಕೊಂಡು ಹೋಗಿ, ಸಂಪ್ರದಾಯಬದ್ಧವಾಗಿ ನಮಗೆ ದೀಕ್ಷೆಗೊಳಿಸಿ ಬ್ರಾಹ್ಮಣರಾಗಿಸಿದರು. ಪಾಠಕ್ ಅವರು ಕೂಡಾ ಬ್ರಹ್ಮಣ. ಈಗ ಸಮಾಜದ ಮುಖ್ಯವಾಹಿನಿಯಲ್ಲಿ ಇದ್ದೇನೆ ಎಂದು ನನಗೆ ಅನಿಸುತ್ತಿದೆ. ನಾನು ಮಂತ್ರಗಳನ್ನು ಕಲಿತಿದ್ದೇನೆ. ಕುಟುಂಬಕ್ಕೆ ಉತ್ತಮ ಜೀವನ ದೊರೆತಿದೆ. ಮಕ್ಕಳು ಶಾಲೆಗೆ ಹೋಗುತ್ತಾರೆ ಎಂದು ತಿಳಿಸಿದರು.