ದಲಿತ ಪೂಜಾರಿಯ ಪಾದ ಸ್ಪರ್ಶಕ್ಕೆ ಮೈಯೊಡ್ಡಿ ಹರಕೆ ತೀರಿಸುವ ಸರ್ವ ಜನಾಂಗದ ಭಕ್ತರ ವಿಶಿಷ್ಟ ಸಂಪ್ರದಾಯ ತಾಲೂಕಿನ ಅರಸಿಕೇರಿ ದಂಡಿ ದುರುಗಮ್ಮನ ಜಾತ್ರೆಯಲ್ಲಿ ಭಾನುವಾರ ನಡೆಯಿತು.

ಹರಪನಹಳ್ಳಿ (ಡಿ.18): ದಲಿತ ಪೂಜಾರಿಯ ಪಾದ ಸ್ಪರ್ಶಕ್ಕೆ ಮೈಯೊಡ್ಡಿ ಹರಕೆ ತೀರಿಸುವ ಸರ್ವ ಜನಾಂಗದ ಭಕ್ತರ ವಿಶಿಷ್ಟ ಸಂಪ್ರದಾಯ ತಾಲೂಕಿನ ಅರಸಿಕೇರಿ ದಂಡಿ ದುರುಗಮ್ಮನ ಜಾತ್ರೆಯಲ್ಲಿ ಭಾನುವಾರ ನಡೆಯಿತು. ಅರಸಿಕೇರಿ ಗ್ರಾಮ ಅಂದಾಜು ಆರು ಸಾವಿರ ಜನಸಂಖ್ಯೆಯುಳ್ಳ ಹೋಬಳಿ ಕೇಂದ್ರ. ಇಲ್ಲಿ ಪ್ರತಿವರ್ಷ ಡಿಸೆಂಬರ್-ಜನವರಿಯಲ್ಲಿ 3 ದಿನಗಳ ಕಾಲ ದಂಡಿ ದುರುಗಮ್ಮನ ಜಾತ್ರೆ ಜರುಗುತ್ತದೆ. ಜಾತ್ರೆಯ 3ನೇ ದಿನ ದಲಿತ ಪೂಜಾರಿಯ ಪಾದ ಸ್ಪರ್ಶಕ್ಕೆ ಮೈಯೊಡ್ಡುವ ಕಾರ್ಯಕ್ರಮ ನಡೆಯುವುದು ವಿಶೇಷ.

ಬೆಳಗಿನ ಜಾವ ದೇವಸ್ಥಾನದಿಂದ ದಂಡಿನ ದುರುಗಮ್ಮ ದೇವಿಯನ್ನು 2 ಕಿ.ಮೀ. ದೂರದ ಹೊಳೆ (ಹೊಂಡ) ಗಂಗಾಪೂಜೆಗೆ ಕರೆ ತರಲಾಗುತ್ತದೆ. ಪೂಜೆ ಮುಗಿಸಿಕೊಂಡು ದೇವಿಯ ಕೇಲು (ಪೂಜಾ ಸಾಮಗ್ರಿಗಳುಳ್ಳ ಮಡಿಕೆ) ಹೊತ್ತ ಹರಿಜನ ಪೂಜಾರಿ ದೇವಸ್ಥಾನದ ಕಡೆಗೆ ಹೊರಡುತ್ತಾರೆ. ಆಗ ಲಿಂಗಾಯತ, ವಾಲ್ಮೀಕಿ, ಕುರುಬ, ಜಂಗಮ, ಭೋವಿ, ಬಾರಿಕರು, ಶೆಟ್ಟರು, ಬ್ರಾಹ್ಮಣರು, ಗೊಂದಳಿಯರು ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಸರ್ವ ಜಾತಿಯ ಭಕ್ತರು ಮಡೆಯಿಂದ ರಸ್ತೆ ಮಧ್ಯೆ ಬೋರಲಾಗಿ ಮಲಗಿಕೊಳ್ಳುತ್ತಾರೆ.

ಅವರ ಬೆನ್ನ ಮೇಲೆ ನಿಧಾನವಾಗಿ ಒಬ್ಬ ಕೇಲು ಹೊತ್ತ ಹರಿಜನ ಪೂಜಾರಿ ನಡೆಯುತ್ತಾ ಸಾಗುತ್ತಾರೆ. ಇದೇ ರೀತಿ ದೇವಸ್ಥಾನದವರೆಗೆ ಅಂದರೆ ಅಂದಾಜು 2 ಕಿಲೋ ಮೀಟರ್ ಉದ್ದ ನಡಿಗೆ ಸಾಗುತ್ತದೆ. ಕೆಲ ಭಕ್ತರು ಒಂದು ಬಾರಿ ಬೆನ್ನು ತುಳಿಸಿಕೊಂಡರೂ ಮುಂದೆ ಪುನಃ ಹೋಗಿ ಇನ್ನೊಮ್ಮೆ ಸರತಿ ಸಾಲಿನಲ್ಲಿ ಮಲಗಿಕೊಂಡು ಬೆನ್ನ ಮೇಲೆ ಪೂಜಾರಿಯ ಪಾದಗಳಿಂದ ತುಳಿಸಿ ಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಬೆನ್ನ ಮೇಲೆ ನಡೆಯುವವ ಸೇರಿ ಒಟ್ಟು 8 ಮಂದಿ ಪೂಜಾರಿಗಳ ತಂಡ ಸಕಲ ವಾದ್ಯ, ಮೇಳಗಳ ಸದ್ದಿನೊಂದಿಗೆ ದೇವಿಯ ಮೂರ್ತಿಯೊಂದಿಗೆ ಹೊಳೆ ಪೂಜೆ ಮುಗಿಸಿಕೊಂಡು ದೇವಸ್ಥಾನಕ್ಕೆ ಸಾಗುತ್ತದೆ. ಅದರಲ್ಲಿ ಒಬ್ಬ ಕೇಲು ಹೊತ್ತುಕೊಂಡ ಪೂಜಾರಿ ಮಾತ್ರ ಈ ರೀತಿ ಭಕ್ತರ ಮೈ ಮೇಲೆ ನಡೆದುಹೋದರೆ ಉಳಿದವರು ಪಕ್ಕಕ್ಕೆ ನಡೆದು ಹೋಗುತ್ತಾರೆ.