ದೇಶಾದ್ಯಂತ ಏಕರೂಪದ ವೈದ್ಯಕೀಯ ಪ್ರವೇಶ ಪರೀಕ್ಷಾ ಪದ್ಧತಿ (ನೀಟ್) ಜಾರಿಗೊಳಿಸುವ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡಿ ವಿಫಲಳಾಗಿದ್ದ ತಮಿಳುನಾಡಿನ ದಲಿತ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯು ತಮಿಳುನಾಡಿನ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದು, ರಾಜ್ಯದ ಅಣ್ಣಾ ಡಿಎಂಕೆ ಸರ್ಕಾರ ಹಾಗೂ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

ಚೆನ್ನೈ(ಸೆ.02): ದೇಶಾದ್ಯಂತ ಏಕರೂಪದ ವೈದ್ಯಕೀಯ ಪ್ರವೇಶ ಪರೀಕ್ಷಾ ಪದ್ಧತಿ (ನೀಟ್) ಜಾರಿಗೊಳಿಸುವ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡಿ ವಿಫಲಳಾಗಿದ್ದ ತಮಿಳುನಾಡಿನ ದಲಿತ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯು ತಮಿಳುನಾಡಿನ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದು, ರಾಜ್ಯದ ಅಣ್ಣಾ ಡಿಎಂಕೆ ಸರ್ಕಾರ ಹಾಗೂ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

ಅರಿಯಲೂರು ಜಿಲ್ಲೆ ಕುಳುಮ್ಮೂರು ಎಂಬ ಊರಿನ ಅನಿತಾ (17) ಆತ್ಮಹತ್ಯೆ ಮಾಡಿಕೊಂಡವಳು. ಈಕೆ ತನ್ನ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾಳೆ. ತನಗೆ ವೈದ್ಯಕೀಯ ಸೀಟು ಸಿಕ್ಕಿಲ್ಲ ಎಂದು ಗೊತ್ತಾದ ತಕ್ಷಣವೇ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈಕೆಯ ತಂದೆ ಓರ್ವ ಬಡ ದಿನಗೂಲಿ ಕಾರ್ಮಿಕ. ಈಕೆಗೆ ತಾಯಿಯಿಲ್ಲ. ವೈದ್ಯಳಾಗಬೇಕು ಎಂಬ ಕನಸು ಕಂಡಿದ್ದ ಮಗಳ ಶಿಕ್ಷಣಕ್ಕಾಗಿ ಈತ ಕೂಲಿನಾಲಿ ಮಾಡಿ ಹಣ ಹೊಂದಿಸುತ್ತಿದ್ದ. ತುಂಬಾ ಜಾಣೆಯಾಗಿದ್ದ ಅನಿತಾ ಪಿಯುಸಿ ದ್ವಿತೀಯ ವರ್ಷದಲ್ಲಿ 1200 ಅಂಕಗಳ ಪೈಕಿ 1176 ಅಂಕ ಪಡೆದಿದ್ದಳು. ಇನ್ನು ತಮಿಳುನಾಡು ಸರ್ಕಾರ ಹಮ್ಮಿಕೊಂಡಿದ್ದ ವೈದ್ಯಕೀಯ ಸಿಇಟಿಯಲ್ಲಿ 200ಕ್ಕೆ 196.75 ಹಾಗೂ ಎಂಜಿನಿಯರಿಂಗ್ ಸಿಇಟಿಯಲ್ಲಿ 200ಕ್ಕೆ 199.76 ಅಂಕ ಪಡೆದಿದ್ದಳು. ಆದರೆ ಕೇಂದ್ರ ಸರ್ಕಾರದ ನೀಟ್‌ನಲ್ಲಿ ಆಕೆ 700ಕ್ಕೆ 86 ಅಂಕ ಮಾತ್ರ ಪಡೆದಳು.

ಇದೇ ವೇಳೆ ನೀಟ್ ವಿರುದ್ಧ ಅನಿತಾ ಹಾಕಿದ್ದ ಅರ್ಜಿ ಅಮಾನ್ಯ ಮಾಡಿದ ಸುಪ್ರೀಂ ಕೋರ್ಟ್, ನೀಟ್ ಕಡ್ಡಾಯ ಎಂದು ಆದೇಶಿಸಿ ಸೆ.4ರ ಒಳಗೆ ಪ್ರಕ್ರಿಯೆ ಮುಗಿಸುವಂತೆ ಸೂಚಿಸಿತು. ನೀಟ್ ತಮಿಳುನಾಡಿಗೆ ಅನ್ವಯವಾಗದಂತೆ ಸುಗ್ರೀವಾಜ್ಞೆ ಹೊರಡಿಸುವ ಭರವಸೆಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಿಂದೆ ಸರಿದವು. ಹೀಗಾಗಿ ನೀಟ್ ಅಡಿ ವೈದ್ಯಕೀಯ ಸೀಟು ಸಿಗದ ಕಾರಣ ನೊಂದು ಅನಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈಕೆಯ ಆತ್ಮಹತ್ಯೆ ಬಗ್ಗೆ ರಾಜ್ಯ ಸರ್ಕಾರ ಆಘಾತ ವ್ಯಕ್ತಪಡಿಸಿದೆ. ಆದರೆ ಅನಿತಾ ಸಾವಿಗೆ ಬಿಜೆಪಿ ಮತ್ತು ಅಣ್ಣಾ ಡಿಎಂಕೆ ಸರ್ಕಾರಗಳೇ ಕಾರಣ ಎಂದು ಪ್ರತಿಪಕ್ಷಗಳು ಹೇಳಿದ್ದು, ಪ್ರತಿಭಟನೆ ಆರಂಭಿಸಿವೆ.