ಬೆಂಗಳೂರು (ಡಿ. 10): ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಮಹಮ್ಮದ್ ರೇಲಾ ಬಗ್ಗೆ ಸಚಿವ ಡಿ ಕೆ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ನಾವೆಲ್ಲಾ ಜಾತಿ, ಧರ್ಮ ಎಂದೆಲ್ಲಾ ಮಾತನಾಡುತ್ತೇವೆ. ಡಾ. ಮಹಮ್ಮದ್ ರೇಲಾ ಎನ್ನುವ ಮುಸಲ್ಮಾನ ವೈದ್ಯರು ಅವರ ಹೆಸರಿನಲ್ಲಿ ಆಸ್ಪತ್ರೆಯನ್ನು ಕಟ್ಟಿದ್ದಾರೆ. ತುಂಬಾ ಚೆನ್ನಾಗಿ ಟ್ರೀಟ್ ಮೆಂಟ್ ನೀಡುತ್ತಾರೆ. ಕರ್ನಾಟಕದಲ್ಲಿ ರೇಲಾ ರೀತಿಯ ಆಸ್ಪತ್ರೆ ನಾನು ನೋಡಿಲ್ಲ.  450 ಬೆಡ್​ಗಳಲ್ಲಿ 150 ಐಸಿಯು ಬೆಡ್​ ಇದೆ.  ವೈದ್ಯಕೀಯ ಶಿಕ್ಷಣ ಸಚಿವನಾಗಿ ಈ ಆಸ್ಪತ್ರೆ ಬಗ್ಗೆ ಮೆಚ್ಚುಗೆ ಇದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. 

 ಶ್ರೀಗಳ ಆರೋಗ್ಯ ಜವಾಬ್ದಾರಿ ಹೊತ್ತ ಮೊಹ್ಮದ್ ರೇಲಾ ಯಾರು?

ಡಿಕೆಶಿಯವರ ಈ ಹೇಳಿಕೆ ವಿರುದ್ಧ ಶಾಸಕ ಯತ್ನಾಳ್  ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ಆದರೆ ಡಿಕೆಶಿ ವೈದ್ಯರಿಗೂ ಜಾತಿ ಬಣ್ಣ ಕಟ್ಟುತ್ತಾರೆ. ವೈದ್ಯರು ಅಂದರೆ ದೇವರ ಸಮ. ಅವರಿಗೆ ಜಾತಿ ಇರುವುದಿಲ್ಲ. ಅವರು ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುತ್ತಾರೆ. ಡಿಕೆಶಿ ಹೇಳಿಕೆ ನಾಚಿಕೆಗೇಡಿನ ಸಂಗತಿ. ವೈದ್ಯರಿಗೂ‌ ಜಾತಿ‌ಪಟ್ಟ ಕಟ್ಟೋದು ಸರಿಯಲ್ಲ ಎಂದಿದ್ದಾರೆ. 

 ಸಿದ್ಧಗಂಗಾ ಶ್ರೀಗಳ ಆರೋಗ್ಯ ಚೇತರಿಕೆ; ವಾರ್ಡ್‌ಗೆ ಶಿಫ್ಟ್

ಡಾಕ್ಟರ್‌ಗಳು ಯಾವತ್ತು ಜಾತಿ ಧರ್ಮ ನೋಡುವುದಿಲ್ಲ.  ಅವರ ವೃತ್ತಿ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಾರೆ. ಬಹುಶಃ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಈ ಬಗ್ಗೆ ಯೋಚಿಸಿರುವುದಿಲ್ಲ. ಆದ್ರೆ ಡಿ.ಕೆ ಶಿವಕುಮಾರ್ ಯೋಚಿಸಿದ್ದಾರೆ.  ಇದು ಅವರ ಸಂಕುಚಿತ ಮನೋಭಾವವನ್ನ ತೋರಿಸುತ್ತೆ ಎಂದು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. 

ಆಸ್ಪತ್ರೆಯಲ್ಲಿ ಯಾವುದೇ ಮೈನಾರಿಟಿ, ಮೆಜಾರಿಟಿ ಎಂಬುದಕ್ಕೆಲ್ಲಾ ಜಾಗ ಇರಲ್ಲ.  ಶಿವಕುಮಾರ್ ಹೋದ ಒಂದು ಗಂಟೆ ಮುಂಚೆ ನಾನೂ ಹೋಗಿದ್ದೆ. ಶಿವಕುಮಾರ್ ಯಾವ ಉದ್ದೇಶಕ್ಕೆ ಹಾಗೆ ಹೇಳಿದಾರೋ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಿ ಗುಡಿ ಗೋಪುರ, ಮಸೀದಿಗಳು ನಮ್ಮ ಸಿಂಬಾಲಿಕ್ ಅಷ್ಟೇ. ಶ್ರೀಗಳು ಆರೋಗ್ಯವಾಗಿದ್ದಾರೆ ಎಂದು ಸಚಿವ ಶಿವಕುಮಾರ್ ಗೆ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ. 

ಡಿ.ಕೆ.ಶಿವಕುಮಾರ್ ಆಸ್ಪತ್ರೆಯಲ್ಲೂ ಹೋಗಿ ಕಾಂಗ್ರೆಸ್ ಬುದ್ಧಿ ತೋರಿಸಿದ್ದಾರೆ. ಜಾತಿ, ಧರ್ಮ ಬಿಟ್ಟು ಪ್ರಮಾಣ ವಚನ ಸ್ವೀಕಾರ ಮಾಡಿರುತ್ತಾರೆ ವೈದ್ಯರು. ಅಂತಹ ಸ್ಥಳದಲ್ಲಿ ಜಾತಿ, ಧರ್ಮ ಏಕೆ? ಗೌರವಾನ್ವಿತ ಸಚಿವರಿಗೆ ಆಸ್ಪತ್ರೆಗೂ ಹೋಗಿ ರಾಜಕೀಯ ಮಾಡೋದು ಗೌರವ ತರಲ್ಲ. ಸ್ವಾಮೀಜಿಗೆ ಯಾರಾದ್ರೂ ರಕ್ತ ಕೊಡ್ತಾರೆ ಅಂತಿಟ್ಟುಕೊಳ್ಳಿ, ಅದರಲ್ಲೂ ಧರ್ಮಗಳ ಹೆಸರನ್ನು ತಂದುಬಿಟ್ಟರೆ ಹೇಗೆ? ವೈದ್ಯ ವೃತ್ತಿಗೆ ಧರ್ಮ ಇರಲ್ಲ. ದಯವಿಟ್ಟು ಸ್ಥಳದ ಮಹಿಮೆ ಅರಿತು ಮಾತಾಡಬೇಕು ಎಂದು ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.