Asianet Suvarna News Asianet Suvarna News

ಡಿಕೆಶಿಗೆ ಧಾರವಾಡ ಜಿಲ್ಲೆ ಉಸ್ತುವಾರಿ?

ಡಿಕೆಶಿಗೆ ಧಾರವಾಡ ಜಿಲ್ಲೆ ಉಸ್ತುವಾರಿ?  ಉಪ ಚುನಾವಣೆ ನಂತರ ಬಳ್ಳಾರಿ ಹಿಂಪಡೆದು ಧಾರವಾಡ ನೀಡುವ ಸಾಧ್ಯತೆ | ಬಳ್ಳಾರಿ ಉಸ್ತುವಾರಿ ತುಕಾರಾಂಗೆ?

D K Shivakumar likely to become Dharawad district in-charge
Author
Bengaluru, First Published May 14, 2019, 9:43 AM IST

ಬೆಂಗಳೂರು (ಮೇ. 14):  ಉಪ ಚುನಾವಣೆ ನಂತರ ಜಿಲ್ಲಾ ಉಸ್ತುವಾರಿ ಸಚಿವರಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದ್ದು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಉಸ್ತುವಾರಿ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಬಗ್ಗೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಶಿವಕುಮಾರ್‌ ಅವರ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಚುನಾವಣೆ ಮುಗಿಯುತ್ತಿದ್ದಂತೆಯೇ ಈ ಬಗ್ಗೆ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಕುಂದಗೋಳ ವಿಧಾನಸಭಾ ಕ್ಷೇತ್ರದ ಚುನಾವಣೆಯ ಹೊಣೆಗಾರಿಕೆ ಹೊತ್ತಿರುವ ಶಿವಕುಮಾರ್‌ ಅವರಿಗೆ ಬಳ್ಳಾರಿ ಜಿಲ್ಲೆಯ ಬದಲಿಗೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಉಸ್ತುವಾರಿ ನೀಡುವುದು ಉತ್ತಮ ಎಂಬ ಚಿಂತನೆಯಿದ್ದು, ಶಿವಕುಮಾರ್‌ ಅವರಿಗೂ ಈ ಬಗ್ಗೆ ಆಸಕ್ತಿಯಿದೆ.

ಹೀಗಾಗಿ ವೇಣುಗೋಪಾಲ್‌ ಅವರೊಂದಿಗೆ ಚರ್ಚೆಯೂ ನಡೆದಿದೆ. ಈ ಚರ್ಚೆ ವೇಳೆ ಬಳ್ಳಾರಿ ಜಿಲ್ಲೆಗೆ ಸ್ಥಳೀಯರಿಗೆ ಉಸ್ತುವಾರಿ ನೀಡಬೇಕು ಎಂಬ ಒತ್ತಡವಿದೆ. ಹೀಗಾಗಿ ಸಚಿವ ತುಕಾರಾಂ ಅವರಿಗೆ ಬಳ್ಳಾರಿ ಉಸ್ತುವಾರಿಯನ್ನು ವಹಿಸುವ ಚಿಂತನೆಯಿದೆ ಎನ್ನಲಾಗಿದೆ.

ತುಕಾರಾಂ ಅವರಿಗೆ ಬಳ್ಳಾರಿ ಜಿಲ್ಲೆ ಉಸ್ತುವಾರಿ ನೀಡಿದರೆ ಆಗ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ಹೊಂದಿರುವ ಆರ್‌.ವಿ. ದೇಶಪಾಂಡೆ ಅವರಿಂದ ಹಿಂಪಡೆದು ಡಿ.ಕೆ. ಶಿವಕುಮಾರ್‌ ಅವರಿಗೆ ನೀಡುವ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಲಿಂಗಾಯತ-ವೀರಶೈವ ಧರ್ಮ ವಿಚಾರದಲ್ಲಿ ಡಿ.ಕೆ.ಶಿವಕುಮಾರ್‌ ಅವರು ವಿಭಜನೆ ಬೇಡ ಎಂಬ ನಿಲುವು ಪ್ರಕಟಿಸಿರುವುದರಿಂದ ಈ ಭಾಗದಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಹೀಗಾಗಿ, ತಮಗೆ ಉಸ್ತುವಾರಿ ನೀಡಿದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಬಲವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂದು ಶಿವಕುಮಾರ್‌ ವಾದ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಚುನಾವಣೆ ನಂತರ ನಿರ್ಧಾರ ಕೈಗೊಳ್ಳೋಣ ಎಂದು ವೇಣುಗೋಪಾಲ್‌ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios