ಬೆಂಗಳೂರು (ಮಾ. 08):  ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುವುದಿಲ್ಲ ಎಂಬುದಾಗಿ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ದೆಹಲಿಯಲ್ಲಿ ತಮಗೆ ಸೇರಿದ ಫ್ಲ್ಯಾಟ್‌, ಮನೆ ಹಾಗೂ ಬೆಂಗಳೂರಿನ ಹಲವೆಡೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇ.ಡಿ.ಜಾರಿಗೊಳಿಸಿರುವ ಸಮನ್ಸ್‌ ರದ್ದುಪಡಿಸುವಂತೆ ಕೋರಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ಪೀಠಕ್ಕೆ ಹೆಚ್ಚುವರಿ ಸಾಲಿಸಿಟರ್‌ ಜನರಲ್  ಪ್ರಭುಲಿಂಗ ಕೆ. ನಾವದಗಿ ತಿಳಿಸಿದರು.

ಇದಕ್ಕೂ ಮುನ್ನ ಸಚಿವ ಡಿ.ಕೆ.ಶಿವಕುಮಾರ್‌ ಪರ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿ, ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ಸೂಚಿಸಿ ನೋಟಿಸ್‌ ಜಾರಿ ಮಾಡಿರುವ ಇ.ಡಿ. ಕ್ರಮ ಕಾನೂನು ಬಾಹಿರವಾಗಿದೆ. ಆದಾಯ ತೆರಿಗೆ ಇಲಾಖೆಯು ಐಟಿ ಕಾಯ್ದೆ ಸೆಕ್ಷನ್‌ 276ಸಿ ಮತ್ತು 277 ಅಡಿ ದಾಖಲಿಸಿರುವ ಪ್ರಕರಣಗಳು ಇ.ಡಿ. ವ್ಯಾಪ್ತಿಗೆ ಬರುವುದಿಲ್ಲ. ಕ್ರಿಮಿನಲ್‌ ಒಳಸಂಚು ಆರೋಪ ಸಹ ಹೊರಿಸಲಾಗಿದ್ದು, ಅದು ಪ್ರತ್ಯೇಕ ಅಪರಾಧವಲ್ಲ. ಕ್ರಿಮಿನಲ್‌ ಪ್ರಕರಣ ದಾಖಲಿಸುವ ಹಂತ ತಲುಪಿಲ್ಲ ಎಂದು ತಿಳಿಸಿದರು.

ಅಲ್ಲದೆ, ಎಫ್‌ಐಆರ್‌ ದಾಖಲಿಸದೇ ಇಡಿ ಅರ್ಜಿದಾರರಿಗೆ ಸಮನ್ಸ್‌ ನೀಡಿದೆ. ಈ ಕ್ರಮ ನ್ಯಾಯಸಮ್ಮತವಾಗಿಲ್ಲ. ತೊಂದರೆ ನೀಡುವ ಉದ್ದೇಶದಿಂದಲೇ ಸಮನ್ಸ್‌ ನೀಡಲಾಗಿದೆ. ಅರ್ಜಿದಾರರ ವಿರುದ್ಧದ ಮೂರು ವರ್ಷದ ಅಸೆಸ್‌ಮೆಂಟ್‌ ಪ್ರಕರಣಗಳನ್ನು ಅಧೀನ ನ್ಯಾಯಾಲಯ ಕೈಬಿಟ್ಟಿದೆ. ಕೇವಲ ಒಂದು ವರ್ಷದ ಅಸೆಸ್‌ಮೆಂಟ್‌ ಕೇಸ್‌ ಬಾಕಿಯಿದೆ. ಇಂತಹ ಪರಿಸ್ಥಿತಿಯಲ್ಲಿ ಇ.ಡಿ. ವಿಚಾರಣೆಗೆ ಕರೆಯುವುದು ಎಷ್ಟುಸರಿ. ಆದ್ದರಿಂದ ಇ.ಡಿ. ಸಮನ್ಸ್‌ ರದ್ದುಪಡಿಸಬೇಕು ಎಂದು ಕೋರಿ ವಾದ ಮುಕ್ತಾಯಗೊಳಿಸಿದರು.

ಇ.ಡಿ. ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮಾ.11ಕ್ಕೆ ಮುಂದೂಡಲಾಯಿತು.

ಈ ವೇಳೆ ಕಪಿಲ್‌ ಸಿಬಲ್‌ ಅವರು, ಇ.ಡಿ. ವಿಚಾರಣೆಗೆ ಹಾಜರಾದರೆ ಅರ್ಜಿದಾರರನ್ನು ಬಂಧಿಸುವ ಸಾಧ್ಯತೆಯಿದೆ. ಮಾಚ್‌ರ್‍ 11ರ ತನಕ ಅರ್ಜಿದಾರರನ್ನು ಬಂಧಿಸುವುದಿಲ್ಲ ಎಂಬ ಭರವಸೆಯನ್ನು ಇ.ಡಿ. ಕಡೆಯಿಂದ ಕೊಡಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಇ.ಡಿ. ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌, ಅಂತಹ ಭರವಸೆ ಕೊಡಲು ಸಾಧ್ಯವಿಲ್ಲ. ಹಿಂದೆ ಸಮನ್ಸ್‌ ನೀಡಿದ್ದ ನಂತರ ಹೊಸದಾಗಿ ಸಮನ್ಸ್‌ ನೀಡಿಲ್ಲ. ತನಿಖೆ ಪ್ರಗತಿಯಲ್ಲಿರುವಾಗಲೇ ಪ್ರಕರಣ ರದ್ದು ಕೋರಿರುವ ಕ್ರಮ ಸರಿಯಾಗಿಲ್ಲ ಎಂದು ತಿಳಿಸಿದರು.

ಇದರಿಂದ ತೃಪ್ತರಾಗದ ಕಪಿಲ್‌ ಸಿಬಲ್‌, ಈ ರೀತಿ ಹೇಳಿದರೆ ಹೇಗೆ? ಅರ್ಜಿದಾರರನ್ನು ಯಾವುದೇ ಸಮಯದಲ್ಲಾದರೂ ಬಂಧಿಸಬಹುದು. ಅರ್ಜಿದಾರರಿಗೆ ಸಾಂವಿಧಾನಿಕ ರಕ್ಷಣೆ ಬೇಕಿದೆ ಎಂದು ಬಲವಾಗಿ ತಿಳಿಸಿದರು.

ಈ ವಾದ ಪ್ರತಿವಾದ ಪರಿಗಣಿಸಿದ ನ್ಯಾಯಪೀಠ, ಇ.ಡಿ. ಸಮನ್ಸ್‌ ನೀಡಿದರೆ ಹಾಜರಾತಿಗೆ ಕಾಲಾವಕಾಶ ಕೇಳಲು ಅರ್ಜಿದಾರರಿಗೆ ಅವಕಾಶವಿದೆ. ಒಂದು ವೇಳೆ ಅರ್ಜಿದಾರರು ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಇ.ಡಿ.ಯು ಪರಿಗಣಿಸಬೇಕು. ಅರ್ಜಿದಾರರಿಗೆ ಒಂದು ವೇಳೆ ಏನಾದರೂ ತೊಂದರೆ ಎದುರಾದಲ್ಲಿ ಅವರು ಕೋರ್ಟ್‌ ಮೊರೆ ಹೋಗಬಹುದು ಎಂದು ಸ್ಪಷ್ಟಪಡಿಸಿ ಮಧ್ಯಂತರ ಆದೇಶ ಮಾಡಿತು.

ಇದೇ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಆದಾಯ ತೆರಿಗೆ ಇಲಾಖೆ, ಡಿ.ಕೆ.ಶಿವಕುಮಾರ್‌ ಸಾವಿರಾರು ಕೋಟಿ ರು. ಲೆಕ್ಕವಿಲ್ಲದ ನಗದು ವಹಿವಾಟು ನಡೆಸಿರುವುದು ದಾಖಲೆಗಳಿಂದ ತಿಳಿಯಲಿದೆ. ಅವರು ತೆರಿಗೆ ವಂಚಿಸಿರುವುದನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಲಿದೆ ಎಂದು ಹೇಳಿದೆ.