Asianet Suvarna News Asianet Suvarna News

ಊಟವನ್ನೂ ಮಾಡದೇ ಒಂದೇ ದಿನ 18 ಕಡೆ ಭಾಷಣ ಮಾಡಿದ ಅಟಲ್!

  • ವಾಜಪೇಯಿ ನೆನೆದು ಡಿ ಎಚ್ ಶಂಕರಮೂರ್ತಿ ಭಾವುಕ 
  • ವಾಜಪೇಯಿಯೊಂದಿಗಿನ ಒಡನಾಟ ನೆನೆಸಿಕೊಂಡ ಶಂಕರಮೂರ್ತಿ 
  • ಊಟವಿಲ್ಲದೇ ಒಂದೇ ದಿನ 18 ಕಡೆ ಭಾಷಣ ಮಾಡಿದ ಅಟಲ್ ಜಿ 
D H Shankaramurthy recalls memories of Atal Bihari Vajpayee
Author
Bengaluru, First Published Aug 17, 2018, 8:27 AM IST

ಬೆಂಗಳೂರು (ಆ. 17): ಮಾಜಿ ಪ್ರಧಾನಿ, ದೇಶ ಕಂಡ ಅಪರೂಪದ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ ಸಂದರ್ಭ ಇನ್ನು ಕೂಡ ಕಣ್ಣು ಕಟ್ಟಿದಂತಿದೆ.

ವಾಜಪೇಯಿ ಅವರು 1966 ರಿಂದ ಕರ್ನಾಟಕಕ್ಕೆ ಬಂದಾಗಲೆಲ್ಲಾ ನನ್ನ ಮನೆಗೆ ಬಂದು ಉಳಿದುಕೊಳ್ಳುತ್ತಿದ್ದರು. ಅದು 1983 ರ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕರ್ನಾಟಕ ಪ್ರವಾಸಕ್ಕೆ ಬಂದಿದ್ದರು. ಸುಮಾರು ಆರೆಂಟು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆ ಸುತ್ತಿ ಭಾಷಣ ಮಾಡಿದ್ದರು.

ವಾಜಪೇಯಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದಿಸುವ ಸೌಭಾಗ್ಯ ನನ್ನದಾಗಿತ್ತು. ಒಂದೇ ದಿನ 18 ಸ್ಥಳಗಳಲ್ಲಿ ಭಾಷಣ ಮಾಡಿ ವಾಜಪೇಯಿ ಬಳಲಿದ್ದರು. ಕೊನೆ ಭಾಷಣದ ಸ್ಥಳದಲ್ಲಿ ಕಾರ್ಯಕರ್ತರು ಇನ್ನು ಕೂಡ ಭೋಜನದ ವ್ಯವಸ್ಥೆ ಮಾಡಿರಲಿಲ್ಲ. ವಾಜಪೇಯಿ ಮತ್ತು ನಾನು ಕಾರು ಹತ್ತಿ ಸ್ಥಳದಿಂದ ಹೊರಟೆವು. ಆಗ ಯಾವುದೇ ಅಂಗರಕ್ಷಕರು ಇರಲಿಲ್ಲ.

‘ಊಟ ಇಲ್ಲದೆ, ನನಗೆ ಹೀಗೆ ಭಾಷಣ ಮಾಡಿಸಿ ಸಾಯಿಸ್ತೀಯಾ’ ಎಂದು ವಾಜಪೇಯಿ ಅವರು ಲಘು ಹಾಸ್ಯ ಮಾಡಿದರು. ಮಾರ್ಗ ಮಧ್ಯೆ ತಡರಾತ್ರಿ ಒಂದು ಸ್ಥಳದಲ್ಲಿ ಹೋಟೆಲ್ ನೋಡಿ ಚಾಲಕ ಕಾರು ನಿಲ್ಲಿಸಿದ. ನಾನು ಕಾರು ಇಳಿದು ಹೋಟೆಲ್ ಪ್ರವೇಶಿಸಿ ತಿನ್ನಲು ಏನಿದೆ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದೆ. ಊಟ ಏನು ಇಲ್ಲ. ಕೇವಲ ಒಂದು ಚಪಾತಿ ಇದೆ ಎಂದು ಹೇಳಿದರು. ರಾತ್ರಿ ಸಮಯ 12 ಗಂಟೆ ಮೀರಿತ್ತು. ಒಂದೇ ಚಪಾತಿಯನ್ನು ಪೇಪರ್‌ನಲ್ಲಿ ಕಟ್ಟಿಸಿಕೊಂಡು ಕಾರಿನಲ್ಲಿ ಕುಳಿತಿದ್ದ ವಾಜಪೇಯಿ ಅವರಿಗೆ ಕೊಟ್ಟು ಕುಳಿತುಕೊಂಡೆ. ‘ನೀನು ಏನು ತಿಂದೆ’ ಎಂದು ವಾಜಪೇಯಿ ಅವರು ನನ್ನ ಪ್ರಶ್ನೆ ಮಾಡಿದರು.

ಊಟ ಸಿಗಲಿಲ್ಲ ಎಂದು ಹೇಳಿದೆ. ಅಯ್ಯೋ ಎಂದ ಅವರು ಇರುವ ಒಂದು ಚಪಾತಿಯನ್ನೇ ಹಂಚಿಕೊಂಡು ತಿನ್ನೋಣ ಎಂದರು. ಚಪಾತಿಯನ್ನು ನನ್ನ ಎಡಗೈ ಮೇಲಿಟ್ಟು ಒಂದು ಬದಿ ಅವರು ಹರಿದು  ತಿಂದರೆ, ಮತ್ತೊಂದು ಕಡೆಯಿಂದ ನಾನು ಚಪಾತಿ ತಿಂದು ಮುಗಿಸಿದೆವು. ಮರು ದಿನ ಭಾವುರಾವ್ ದೇಶಪಾಂಡೆ ಅವರು ಸಿಕ್ಕಾಗ ಇನ್ನು ಮುಂದೆ ಇವನ (ನನ್ನ ಜತೆ) ಜತೆ ಭಾಷಣಕ್ಕೆ ಹೋಗುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಭಾಷಣ ಮಾಡಿಸ್ತಾನೆ ಎಂದು ಹೇಳುತ್ತಾ ತಮಾಷೆ ಮಾಡಿದ ಸಂದರ್ಭ ಇನ್ನು ನನ್ನ ಕಣ್ಣ ಮುಂದಿದೆ.

-ಡಿ ಎಚ್ ಶಂಕರಮೂರ್ತಿ, ವಿಧಾನಪರಿಷತ್ ಮಾಜಿ ಸಭಾಪತಿ  

Follow Us:
Download App:
  • android
  • ios