ಬೆಂಗಳೂರು (ಜೂ.18) :  ಪೊಲೀಸ್‌ ಶಾಲಾ-ಕಾಲೇಜು, ಅಕಾಡೆಮಿ ಹಾಗೂ ಬೆಟಾಲಿಯನ್‌ಗಳಲ್ಲಿ ಕೆಲಸ ನಿರ್ವಹಿಸಬೇಕಾದ ‘ಡಿ ಗ್ರೂಪ್‌’ ನೌಕರರು (ಪೊಲೀಸ್‌ ಅನುಯಾಯಿ) ಹಿರಿಯ ಪೊಲೀಸ್‌ ಅಧಿಕಾರಿಗಳ ಮನೆಯಲ್ಲಿ ಹತ್ತಾರು ವರ್ಷಗಳಿಂದ ‘ಜೀತದಾಳು’ಗಳ ರೀತಿಯಲ್ಲಿ ಕೆಲಸ ಮಾಡುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಅಧಿಕಾರಿಗಳ ಮನೆಯಲ್ಲಿ ಕೆಲಸಕ್ಕಿರುವ ಪೊಲೀಸ್‌ ಆರ್ಡರ್ಲಿಗಳ ಜತೆ ‘ಡಿ’ ಗ್ರೂಪ್‌ ನೌಕರರು ಕೂಡ ಆರ್ಡರ್ಲಿಗಳಾಗಿ ಸೇವೆ ಮಾಡುತ್ತಿರುವ ಕಾರಣ ಬೆಟಾಲಿಯನ್‌ ಹಾಗೂ ಪೊಲೀಸ್‌ ಶಾಲೆ, ಅಕಾಡೆಮಿಗಳಲ್ಲಿ ಇರುವ ಬೆರಳೆಣಿಕೆಯಷ್ಟು‘ಡಿ’ ಗ್ರೂಪ್‌ ನೌಕರರು ಹೈರಾಣಾಗಿ ಹೋಗಿದ್ದಾರೆ.

ಪ್ರಸ್ತುತ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಇಲಾಖೆಯ 12 ಪಡೆ, ಎರಡು ಇಂಡಿಯನ್‌ ರಿಸವ್‌ರ್‍ ಬೆಟಾಲಿಯನ್‌ಗಳಲ್ಲಿ (ಐಆರ್‌ಬಿ) ಸೇವೆ ಸಲ್ಲಿಸಲು ಒಟ್ಟು 1161 ಹಾಗೂ ಕೆಎಸ್‌ಆರ್‌ಪಿ ತರಬೇತಿ ಶಾಲೆ, ಪೊಲೀಸ್‌ ಅಕಾಡೆಮಿಗಳಲ್ಲಿ ಸೇವೆ ಸಲ್ಲಿಸಲು 365 ಮಂದಿಯನ್ನು ನೇಮಕ ಮಾಡಲಾಗಿದೆ.

ಇಲಾಖೆಯಲ್ಲಿ ಬೆಟಾಲಿಯನ್‌, ಪೊಲೀಸ್‌ ಅಕಾಡೆಮಿ ಹಾಗೂ ತರಬೇತಿ ಶಾಲೆಗಳಲ್ಲಿ ಪೊಲೀಸರಿಗೆ ಕ್ಷೌರ, ದೋಭಿ, ನೀರು ತರುವ, ಕಸ ಗುಡಿಸುವ, ಟೈಲರ್‌, ಚಮ್ಮಾರ, ಬಡಗಿ, ಅಡುಗೆ ಮಾಡುವ ಕೆಲಸಕ್ಕೆ ಈ ಸಿಬ್ಬಂದಿ ನೇಮಕಗೊಂಡಿದ್ದಾರೆ. ಒಂದು ಪಡೆಯಲ್ಲಿ ಸುಮಾರು ಸಾವಿರ ಮಂದಿ ಪೊಲೀಸರಿದ್ದು, ಇವರ ಸೇವೆ ಮಾಡಲು ಪ್ರತಿ ಬೆಟಾಲಿಯನ್‌ಗೆ 92 ಮಂದಿ ‘ಡಿ’ ಗ್ರೂಪ್‌ ನೌಕರರಿರಬೇಕು. ಕೆಎಸ್‌ಆರ್‌ಪಿ ಬಂದೋಬಸ್‌್ತ ಎಂದು ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ತೆರಳಿದರೆ ಆ ಬೆಟಾಲಿಯನ್‌ ಜತೆಗೆ ಡಿ ಗ್ರೂಪ್‌ ಸಿಬ್ಬಂದಿ ಕೂಡ ತೆರಳುತ್ತಾರೆ.

ವಿಪರ್ಯಾಸವೆಂದರೆ ಇಲ್ಲಿನ ಅರ್ಧದಷ್ಟುಸಿಬ್ಬಂದಿ ಹಿರಿಯ ಪೊಲೀಸ್‌ ಅಧಿಕಾರಿಗಳ ಮನೆಗಳಲ್ಲಿ ಅಡುಗೆ ಕೆಲಸ, ಬಟ್ಟೆಶುಚಿಗೊಳಿಸುವ, ಗಾರ್ಡನ್‌ ಕೆಲಸ, ಅಧಿಕಾರಿಗಳ ಮಕ್ಕಳನ್ನು ಶಾಲಾ-ಕಾಲೇಜಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದು, ಒಂದು ರೀತಿಯಲ್ಲಿ ಅಧಿಕಾರಿಗಳ ಮನೆಗಳಲ್ಲಿ ಜೀತದಾಳುಗಳಾಗಿದ್ದಾರೆ.

ಬೆಟಾಲಿಯನ್‌ಗೆ 25 ಡಿ ಗ್ರೂಪ್‌ ನೌಕರರು:

ಒಟ್ಟಾರೆ ಬೆಟಾಲಿಯನ್‌ಗಳಿಗೆ 1161 ಸಿಬ್ಬಂದಿ ನೇಮಕಗೊಂಡಿದ್ದು, ಈ ಪೈಕಿ 600 ಸಿಬ್ಬಂದಿ ನಿವೃತ್ತಿ ಹಾಗೂ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಒಂದು ಬೆಟಾಲಿಯನ್‌ನಲ್ಲಿ ಸಾವಿರ ಪೊಲೀಸರಿದ್ದು, ಇವರಿಗೆ 25ರಿಂದ 30 ಮಂದಿ ಅನುಯಾಯಿಗಳು ಮಾತ್ರ ಇದ್ದಾರೆ. ಉಳಿದಂತೆ 250 ಸಿಬ್ಬಂದಿ ಅಧಿಕಾರಿಗಳ ಮನೆಯಲ್ಲಿ ‘ಜೀತ’ ಮಾಡುತ್ತಿದ್ದಾರೆ.

ಮುಂಬಡ್ತಿ ನೀಡದ ಇಲಾಖೆಯ ನಿರ್ಧಾರ ಪ್ರಶ್ನಿಸಿ ‘ಡಿ ಗ್ರೂಪ್‌’ ನೌಕರರೊಬ್ಬರು 2006ರಲ್ಲಿ ಕೆಎಟಿ ಮೆಟ್ಟಿಲೇರಿದ್ದರು. ಪ್ರಕರಣ ವಿಚಾರಣೆ ನಡೆಸಿದ ಕೆಎಟಿ ಮುಂಬಡ್ತಿ ನೀಡದ ಹೊರತು ಯಾವುದೇ ನೇಮಕಾತಿ ಮಾಡಿಕೊಳ್ಳದಂತೆ ಆದೇಶ ನೀಡಿದ್ದು, ಹೀಗಾಗಿ ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿದೆ. ನಿಯಮದಂತೆ ಪ್ರತಿ ಬೆಟಾಲಿಯನ್‌ನಲ್ಲಿ 92 ಮಂದಿ ಅನುಯಾಯಿಗಳಿರಬೇಕು. ಆದರೆ ಸಾವಿರ ಮಂದಿಗೂ ಹೆಚ್ಚು ಪೊಲೀಸರಿರುವ ಪಡೆಗಳಲ್ಲಿ ಕೇವಲ 30 ಡಿ ಗ್ರೂಪ್‌ ನೌಕರರಷ್ಟೇ ಎಲ್ಲ ಕೆಲಸವನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ತರಬೇತಿ ಶಾಲೆ ಹಾಗೂ ಅಕಾಡೆಮಿಗಳಿಗೆ 30 ಮಹಿಳಾ ಡಿ ಗ್ರೂಪ್‌ ನೌಕರರಿದ್ದು, ಈ ಪೈಕಿ ಶೇ.10ರಷ್ಟುಮಹಿಳಾ ಸಿಬ್ಬಂದಿ ಅಕಾಡೆಮಿ ಹಾಗೂ ತರಬೇತಿ ಶಾಲೆಗಳ ಪ್ರಾಂಶುಪಾಲರು, ಕಮಾಂಡೆಂಟ್‌ ಮನೆಗಳಲ್ಲಿ ‘ಜೀತ’ಕ್ಕಿದ್ದಾರೆ.

ದನಿ ಎತ್ತಿದರೆ ಶಿಕ್ಷೆ:

ಇಲಾಖೆಯಲ್ಲಿ ಪೊಲೀಸರಿಗೆ ಇರುವಂತೆ ಡಿ ಗ್ರೂಪ್‌ ನೌಕರರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಡಿ ಗ್ರೂಪ್‌ ನೌಕರರು ತಮ್ಮ ಮುಂಬಡ್ತಿ ಬಗ್ಗೆ ದನಿ ಎತ್ತಿದರೆ ಹಿರಿಯ ಅಧಿಕಾರಿಗಳು ಸುಖಾಸುಮ್ಮನೆ ಕಿರುಕುಳ ನೀಡುತ್ತಾರೆ. ಉನ್ನತ ಅಧಿಕಾರಿಗಳ ಎದುರು ನಾವು ನಿಲ್ಲಲು ಸಾಧ್ಯವಾಗುತ್ತಿಲ್ಲ. ಯಾರೊಬ್ಬರೂ ನಮಗೆ ನ್ಯಾಯ ದೊರಕಿಸಿಕೊಡುತ್ತಿಲ್ಲ ಎಂದು ರಾಷ್ಟ್ರೀಯ ಕ್ರೀಡಾಪಟುವೊಬ್ಬರು (ಡಿ ಗ್ರೂಪ್‌)  ತಮ್ಮ ಅಳಲು ತೋಡಿಕೊಂಡರು.

ನಾಟ್‌ ರೀಚೆಬಲ್‌ ಡಿಜಿಪಿ

ಈ ವಿಷಯದ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ಎನ್‌.ರಾಜು ಅವರನ್ನು ಪತ್ರಿಕೆ ದಿನವಿಡೀ ಸಂಪರ್ಕಿಸಲು ಯತ್ನಿಸಿದರೂ ನಿರಂತರವಾಗಿ ‘ಬ್ಯುಸಿ’ ಎಂದು ಬರುತ್ತಿತ್ತು.

ಸರ್ಕಾರಕ್ಕೆ ಗೊತ್ತಿದ್ದರೂ ಮೌನ

ಕೆಎಸ್‌ಆರ್‌ಪಿ, ಸಿಎಆರ್‌ ಮತ್ತು ಡಿಎಆರ್‌ ಪೊಲೀಸರು ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಆರ್ಡರ್ಲಿಗಳಾಗಿದ್ದಾರೆ. ಈ ಆರ್ಡರ್ಲಿ ತೆಗೆದು ಪ್ರತ್ಯೇಕವಾಗಿ ಫಾಲೋಯರ್‌ಗಳನ್ನು ನೇಮಕ ಮಾಡಲಾಗುವುದು ಎಂದು ಈ ಹಿಂದೆಯೇ ಸರ್ಕಾರ ಹೇಳಿದೆ. ಕೆಎಸ್‌ಆರ್‌ಪಿ, ಸಿಎಆರ್‌ ಮತ್ತು ಡಿಎಆರ್‌ಗಳನ್ನು ಹೊರತುಪಡಿಸಿ ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಡಿ ಗ್ರೂಪ್‌ ನೌಕರರು ಆರ್ಡರ್ಲಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಗೊತ್ತಿದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.

ಕೆಲಸ ಮಾಡಲು ನಮಗೆ ಬೇಸರವಿಲ್ಲ. ಆದರೆ, ನಮ್ಮನ್ನು ನೇಮಕ ಮಾಡಿಕೊಂಡಿರುವುದು ಇಲಾಖೆಯ ಕೆಲಸ ಮಾಡುವುದಕ್ಕೆ. ನಾವು ಮಾಡುತ್ತಿರುವುದು ಹಿರಿಯ ಅಧಿಕಾರಿಗಳ ಮನೆಗೆಲಸ. ಬ್ರಿಟಿಷರ ಗುಲಾಮಗಿರಿಯಲ್ಲಿ ಕೆಲಸ ಮಾಡುತ್ತಿರುವ ಅನುಭವವಾಗುತ್ತಿದೆ. ಅಧಿಕಾರಿ ಮತ್ತು ಅವರ ಪತ್ನಿ, ಮಕ್ಕಳ ಸೇವೆ ಮಾಡುತ್ತಿದ್ದೇವೆ. ಇಷ್ಟಾದರೂ ನಮಗೆ ಮುಂಬಡ್ತಿ ಇಲ್ಲ. ಪ್ರಶ್ನೆ ಮಾಡಿ ನಾವು ನ್ಯಾಯಾಲಯ ಎಂದೆಲ್ಲಾ ಹೋದರೆ ಇಲಾಖೆ ತನಿಖೆಗೆ ಗುರಿಪಡಿಸಿ ಕೆಲಸವನ್ನೇ ಬಿಟ್ಟು ಹೋಗುವಂತೆ ಮಾಡುತ್ತಾರೆ. ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

- ನೊಂದ ಡಿ ಗ್ರೂಪ್‌ ನೌಕರ

ವರದಿ :  ಎನ್‌.ಲಕ್ಷ್ಮಣ್‌