ವಾಯು ಚಂಡಮಾರುತ ತೀವ್ರ| ಸಾಮಾನ್ಯದಿಂದ ತೀವ್ರ ಸ್ವರೂಪಕ್ಕೆ ತಿರುಗಿದ ವಾಯು ಇಂದು ಗುಜರಾತ್ ಮೇಲೆ ದಾಳಿ| ಗುಜರಾತಿನ 10 ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ/ 170 ಕಿ.ಮೀ. ವೇಗದಲ್ಲಿ ಬೀಸಲಿದೆ ಗಾಳಿ| 3 ಲಕ್ಷ ಜನ ಕರಾವಳಿಯಿಂದ ಸ್ಥಳಾಂತರ| 52 ಎನ್‌ಡಿಆರ್‌ಎಫ್ ತಂಡ ನಿಯೋಜನೆ| 70 ಜನರ ಸಮರ್ಥ್ಯದ 10 ಸೇನಾ ತುಕಡಿಗಳು
ನವದೆಹಲಿ[ಜೂ.13]: ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ‘ವಾಯು’ ಚಂಡಮಾರುತ ಇದೀತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರ ಗುಜರಾತ್‌ನ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಚಂಡಮಾರುತದ ಸ್ವರೂಪ ಬದಲಾಗಿರುವ ಕಾರಣ ಗಂಟೆಗೆ 160 ರಿಂದ 170ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ಕರಾವಳಿ ತೀರದ 3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಈ ನಡುವೆ, ಸಾಮಾನ್ಯವಾಗಿ ಚಂಡಮಾರುತ ಅಪ್ಪಳಿಸಿದ ಬಳಿಕ ದುರ್ಬಲಗೊಳ್ಳುತ್ತದೆ. ಆದರೆ, ವಾಯು ಚಂಡಮಾರುತ ಅಪ್ಪಳಿಸಿದ 24 ಗಂಟೆಗಳ ವರೆಗೆ ಪ್ರಬಲವಾಗಿಯೇ ಇರಲಿದೆ. ಕಚ್ ಮತ್ತು ಸೌರಾಷ್ಟ್ರದ ಕರಾವಳಿಗೆ ಸಮಾನಾಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಗುಜರಾತಿನ 10 ಜಿಲ್ಲೆಗಳಲ್ಲಿ ಭಾರೀ ಕಟ್ಟೆಚ್ಚರ ಘೋಷಿಸಲಾಗಿದೆ.
'ವಾಯು' ದಾಳಿ: ಮಂಗಳೂರಿನಲ್ಲಿ ಭಾರೀ ಗಾಳಿ ಮಳೆ, ಕಡಲ ತೀರದಲ್ಲಿ ಜನರ ಪರದಾಟ
ಮುನ್ನೆಚ್ಚರಿಕಾ ಕ್ರಮವಾಗಿ ತಲಾ 45 ಜನರನ್ನು ಒಳಗೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ 52 ತಂಡಗಳನ್ನು ಗುಜರಾತಿಗೆ ಕಳುಹಿಸಿಕೊಡಲಾಗಿದ್ದು, ಭಾರತೀಯ ಸೇನೆಯ 10 ತುಕಡಿ ಮತ್ತು ವಾಯು ಪಡೆಯ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ.
ಚಂಡಮಾರುತ ಅಪ್ಪಳಿಸಿದ ಬಳಿಕ ಶೋಧ ಕಾರ್ಯಾಚರಣೆಗೆ ಹಡಗು ಮತ್ತು ವಿಮಾನಗಳನ್ನು ಭಾರತೀಯ ಕರಾವಳಿಯಲ್ಲಿ ನಿಯೋಜನೆ ಮಾಡಲಾಗಿದೆ. ಜಾಮ್‌ನಗರ, ಗಿರ್, ದ್ವಾರಕಾ, ಪೋರ್‌ಬಂದರ್, ಜಾಮ್‌ನಗರ್, ಮೊರ್ಬಿ, ಭಾವನಗರ್, ರಾಜಕೋಟ್ ಮತ್ತು ಅಮ್ರೇಲಿ ಜಿಲ್ಲೆಯಲ್ಲಿ 70 ಜನರ ಸಾಮರ್ಥ್ಯದ ಒಟ್ಟು 10 ಸೇನಾ ತುಕಡಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಗುಜರಾತಿನಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಬುಧವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ಸಭೆ ನಡೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬಂದರು ಮತ್ತು ವಿಮಾನ ನಿಲ್ದಾಣಗಳ ಕಾರ್ಯನಿರ್ವಹಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗುಜರಾತ್ ಮೂಲಕ ಸಂಚರಿಸುವ 40 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಇದೇ ವೇಳೆ, ‘ಚಂಡಮಾರುತದಿಂದ ತೊಂದರೆ ಒಳಗಾಗಲಿರುವ ಜನರ ಸುರಕ್ಷತೆ ಮತ್ತು ಒಳಿತಿಗಾಗಿ ಪ್ರಾರ್ಥಿಸುತ್ತೇನೆ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಕ್ಷಣ ಕಣದ ಮಾಹಿತಿಯನ್ನು ರವಾನಿಸುತ್ತಿವೆ’. ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
