ಭುವನೇಶ್ವರ/ ನವದೆಹಲಿ: ಕರ್ನಾಟಕದ ಕೊಡಗು ಸೇರಿದಂತೆ ಇತರ ಭಾಗಗಳು ಮತ್ತು ಕೇರಳ ಭಾರೀ ನೆರೆಯಿಂದ ಸುಧಾರಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಗುರುವಾರ ರಾತ್ರಿ ಆಂಧ್ರಪ್ರದೇಶ ಹಾಗೂ ಒಡಿಶಾದ ಕರಾವಳಿಗೆ ಚಂಡ ಮಾರುತ ಅಪ್ಪಳಿಸಿದೆ. ಇದರಿಂದ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಸಿದೆ. 

ಪ್ರತೀ ಗಂಟೆಗೆ ಕೇವಲ 12 ಕಿ.ಮೀ ವೇಗವಾಗಿ ಚಲಿಸುತ್ತಿರುವ ಚಂಡಮಾರುತವು ಮುಂದಿನ 12 ಗಂಟೆಯೊಳಗೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಗುರುವಾರ ಸಂಜೆ ಐಎಂಡಿ ಹೇಳಿದೆ. 

ಈಗಾಗಲೇ ಭಾರೀ ಮಳೆಯಿಂದ ತತ್ತರಿಸಿರುವ ಒಡಿಶಾದ ಹಲವು ಭಾಗಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮುಂದುವರಿಯಲಿದೆ ಎಂದಿದೆ ಐಎಂಡಿ.