ನಿನ್ನ ಸಹವಾಸ ಮಾಡಿದ ಮಹಿಳೆಯರಿಗೆ ಸಾವೇಕೆ ಬಂತು?
ಸೈನೈಡ್ ಮೋಹನಗೆ ಹೈಕೋರ್ಟ್ ಪ್ರಶ್ನೆ | ಸುಳ್ಯದ ಸುನಂದಾ ಕೊಲೆ ಪ್ರಕರಣದ ವಿಚಾರಣೆ
ಬೆಂಗಳೂರು: ನಿನ್ನ ಸಹವಾಸ ಮಾಡಿದ್ದ ಮಹಿಳೆಯರಿಗೆಲ್ಲಾ ಏಕೆ ಸಾವಿನ ಗತಿ ಬಂತು? ಸುಳ್ಯ ತಾಲೂಕಿನ ಸುನಂದಾ ಎಂಬಾಕೆಯ ಕೊಲೆ ಪ್ರಕರಣದ ಆರೋಪಿ ಸೈನೈಡ್ ಮೋಹನ್‌ಗೆ ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ಕೇಳಿದ ಪ್ರಶ್ನೆ ಇದು.
ತನ್ನ ಪರವಾಗಿ ತಾನೇ ವಾದ ಮಂಡಿಸಿದ ಮೋಹನ್, ಸುನಂದಾ ಕೀಟನಾಶಕ ಸೇವನೆಯಿಂದ ಸಾವನ್ನಪ್ಪಿದ್ದಳು. ಆದರೆ ಪೊಲೀಸರು ನನ್ನನ್ನು ಬಂಧಿಸಿದ ಬಳಿಕ ಸೈನೈಡ್ ಸೇವನೆಯಿಂದಲೇ ಆಕೆಯ ಸಾವು ಸಂಭವಿಸಿದೆ ಎಂಬುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತಿರುಚಿದ್ದಾರೆ. ಆ ಮೂಲಕ ಅನಗತ್ಯವಾಗಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂದು ದೂರಿದ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೀನು (ಮೋಹನ್) ಪೊಲೀಸರ ತನಿಖೆಯನ್ನು ಅನುಮಾನಸುತ್ತಿದ್ದೀಯಲ್ಲವೇ?. ಹಾಗಿದ್ದರೆ, ನಿನ್ನ ಸಹವಾಸ ಮಾಡಿದ ಮಹಿಳೆಯರಿಗೆ ಏಕೆ ಸಾವಿನ ಗತಿ ಬಂದಿತು? ಆ ಕುರಿತು ನಮಗೆ ಅನುಮಾನ ಹುಟ್ಟಿದೆ. ಸುನಂದಾ ಶವದ ಮರಣೋತ್ತರ ಪರೀಕ್ಷೆ ನಡೆದ ಒಂದೂವರೆ ವರ್ಷದ ಬಳಿಕ ನಿನ್ನನ್ನು ಪೊಲೀಸರು ಬಂಧಿಸಿದ್ದರು.
ಶವಪರೀಕ್ಷೆ ನಡೆಸಿದ ವೈದ್ಯರಿಗೆ ಅಥವಾ ವಿಧಿ ವಿಜ್ಞಾನ ತಜ್ಞರಿಗಾಗಲೀ ನೀನೇ ಕೊಲೆ ಮಾಡಿದ್ದೀರಿ ಎಂದು ತಿಳಿದಿರಲಿಲ್ಲ.ಇಂತಹ ಪರಿಸ್ಥಿತಿಯಲ್ಲಿ ದುರುದ್ದೇಶಪೂರ್ವಕವಾಗಿ ನಿಮ್ಮನ್ನು ಸಿಲುಕಿಸಲು ಸೈನೈಡ್ ನೀಡಿ ಕೊಲೆ ಮಾಡಲಾಗಿದೆ ಎಂಬುದಾಗಿ ಮೊದಲೇ ವರದಿ ಸಿದ್ಧಪಡಿಸಲು ಪೊಲೀಸರಿಗೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ನಂತರ ವಿಚಾರಣೆಯನ್ನು ಮಂಗಳವಾರಕ್ಕೆ (ನ.೧೪) ಮುಂದೂಡಿತು.
2008ರ ಫೆ.11ರಂದು ಮೈಸೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೈನೈಡ್ ನೀಡಿ ಸುನಂದಾಳನ್ನು ಕೊಲೆ ಮಾಡಿದ ಆರೋಪದಲ್ಲಿ ಸೈನೈಡ್ ಮೋಹನ್‌ಗೆ 2013ರ ಡಿ.21ರಂದು ದಕ್ಷಿಣ ಕನ್ನಡ ಜಿಲ್ಲಾ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಿಧಿಸಿದ ಗಲ್ಲುಶಿಕ್ಷೆ ವಿಧಿಸಿತ್ತು. ಗಲ್ಲು ಶಿಕ್ಷೆ ರದ್ದತಿಗೆ ಕೋರಿ ಸೈನೈಡ್ ಮೋಹನ್ ಹೈಕೋರ್ಟ್ ಮೊರೆ ಹೋಗಿದ್ದಾನೆ.