ನವದೆಹಲಿ (ಡಿ. 28): ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಬೇಕೆಂಬ ನೂತನ ಕೇಬಲ್‌ ಟೀವಿ ದರ ವ್ಯವಸ್ಥೆ ಜಾರಿಯನ್ನು ಡಿ.29 ರಿಂದ 2019 ರ ಫೆಬ್ರವರಿ 1ಕ್ಕೆ ಮುಂದೂಡಲಾಗಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ತಿಳಿಸಿದೆ.

ನೂತನ ಕೇಬಲ್‌ ಟೀವಿ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಅರಿವಿನ ಕೊರತೆ ಇದ್ದು, ಇನ್ನೂ ಗೊಂದಲದಲ್ಲಿದ್ದಾರೆ ಎಂಬ ಕಾರಣಕ್ಕೆ, ನೂತನ ವ್ಯವಸ್ಥೆ ಜಾರಿಯನ್ನು ಫೆ.1ಕ್ಕೆ ಮುಂದೂಡಲಾಗಿದೆ ಎಂದು ಟ್ರಾಯ್‌ ತಿಳಿಸಿದೆ.

ನೂತನ ಕೇಬಲ್‌ ಟೀವಿ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಅಂಶಗಳು ಗೊತ್ತಿಲ್ಲದ ಕಾರಣ, ಅವರು ನೂತನ ವ್ಯವಸ್ಥೆ ಬಗ್ಗೆ ಕೋರಿಕೆಯನ್ನೇ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ನೀತಿಯನ್ನು ಯಾವುದೇ ಸಮಸ್ಯೆಯಿಲ್ಲದಂತೆ, ಜಾರಿ ಮಾಡಲು ಹೆಚ್ಚುವರಿ ಸಮಯಾವಕಾಶ ಕಲ್ಪಿಸಬೇಕು ಎಂದು ಟ್ರಾಯ್‌ ಬಳಿ ಕೇಬಲ್‌ ಆಪರೇಟರ್‌ಗಳು ಮೊರೆ ಇಟ್ಟಿದ್ದರು.

ಅಲ್ಲದೆ, ತಮ್ಮ ಬೇಡಿಕೆ ಈಡೇರದಿದ್ದರೆ, ಗುರುವಾರ ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಚಾನೆಲ್‌ಗಳ ಪ್ರಸಾರ ತಡೆ ಹಿಡಿಯುವ ಮೂಲಕ ಪ್ರತಿಭಟನೆ ನಡೆಸಲು ಸ್ಥಳೀಯ ಕೇಬಲ್‌ ಆಪರೇಟರ್‌ಗಳು ಮುಂದಾಗಿದ್ದರು. ಆದರೆ, ಕೇಬಲ್‌ ಆಪರೇಟರ್‌ಗಳ ಕೋರಿಕೆಯನ್ನು ಟ್ರಾಯ್‌ ಮಾನ್ಯ ಮಾಡಿದ್ದು, ಕೇಬಲ್‌ ನಿರ್ವಹಣೆಗಾರರು ಪ್ರತಿಭಟನೆಯನ್ನು ಕೈಬಿಟ್ಟರು.

ನೂತನ ಕೇಬಲ್‌ ಟೀವಿ ವ್ಯವಸ್ಥೆ ಜಾರಿಯಿಂದಾಗಿ, ಗ್ರಾಹಕರು ಎಲ್ಲ ಚಾನೆಲ್‌ಗಳಿಗೂ ಮಾಸಿಕವಾಗಿ ಹಣ ಪಾವತಿ ಮಾಡುವ ಅಗತ್ಯವಿರುವುದಿಲ್ಲ. ಬದಲಿಗೆ ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಇಂತಿಷ್ಟುಹಣ ಪಾವತಿಸಬೇಕು. ಇದರಿಂದ ಗ್ರಾಹಕರು ತಮಗಿಷ್ಟವಾದ ಚಾನೆಲ್‌ಗಳನ್ನು ಮಾತ್ರ ಹೊಂದಿ, ಉಳಿದ ಚಾನೆಲ್‌ಗಳಿಂದ ದೂರ ಇರುವ ಪರಮಾಧಿಕಾರ ಲಭ್ಯವಾಗಲಿದೆ.