ಬೆಂಗಳೂರು [ಜು.05] : ಕನ್ನಡದ ಕಲಾ ಸಂಘಗಳು ಹಾಗೂ ಕಲಾವಿದರಿಗೆ ನೀಡಲಾಗುತ್ತಿರುವ ಅನುದಾನವನ್ನು ದುರುಪಯೋಗದ ಆರೋಪದ  ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಅವರ ತೀರ್ಮಾನಕ್ಕೆ ಕನ್ನಡದ ಸಾಂಸ್ಕೃತಿಕ ಸಂಘಟನೆಗಳು ಹಾಗೂ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೂಡಲೇ ಈ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿದ್ದು, ಆಗ್ರಹಕ್ಕೆ ಮಣಿಯದಿದ್ದರೆ ಜು.10 ರಂದು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಧರಣಿ ಸತ್ಯಾಗ್ರಹ ನಡೆಸುವ ಬೆದರಿಕೆಯೊಡ್ಡಿದ್ದಾರೆ.

ರಾಜ್ಯಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಸಾಂಸ್ಕೃತಿಕ ಸಂಘಗಳಿಗೆ ಸರ್ಕಾರ ನೀಡುವ ಅನುದಾನವನ್ನು ವ್ಯಾಪಕವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಸುಳ್ಳು ದಾಖಲೆ ನೀಡುವ ಮೂಲಕ ನಕಲಿ ಕಲಾ ಸಂಘಗಳು ಅನುದಾನವನ್ನು ಲಪಟಾಯಿಸುತ್ತಿವೆ. ಹೀಗಾಗಿ ಈ ಅನುದಾನ ಸ್ಥಗಿತ ಗೊಳಿಸಿ, ಇಲಾಖೆಯಿಂದಲೇ ಕರ್ನಾಟಕ ಸಂಸ್ಕೃತಿ ಎಂಬ ಸಾಂಸ್ಕೃತಿಕ ಉತ್ಸವ ನಡೆಸಲಾಗುವುದು ಮತ್ತು ಈ ಉತ್ಸವದಲ್ಲಿ ಯುವ ಪ್ರತಿಭೆಗಳಿಗೆ ಪೋತ್ಸಾಹ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದರು.

ಸಚಿವರ ಘೋಷಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ರುವ ನೂರಾರು ಕಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿರಿಯ ಕಲಾವಿದರು ಮುಂದೇನು ಮಾಡಬೇಕು ಎಂಬ ಬಗ್ಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಸಭೆ ಸೇರಿದ್ದು, ತಮ್ಮ ನಿರ್ಧಾರವನ್ನು ಹಿಂಪಡೆಯುವಂತೆ ಶಿವಕುಮಾರ್ ಮೇಲೆ ಒತ್ತಡ ಹೇರಲು ಹಾಗೂ ಬೇಡಿಕೆಗೆ ಮಣಿಯದಿದ್ದರೆ ಹೋರಾಟ ಕೈಗೊಳ್ಳಲು ತೀರ್ಮಾನಿಸಿದರು.

ಸಭೆಯ ಬಳಿಕ  ಈ ವಿವರ ನೀಡಿದ ಹಿರಿಯ ರಂಗ ಕಲಾವಿದ ಶ್ರೀನಿವಾಸ್ ಜಿ.ಕಪ್ಪಣ್ಣ , ಸಚಿವರು ಕೂಡಲೇ ತಮ್ಮ ನಿರ್ಧಾರ ಹಿಂಪಡೆದು, ಖದೀಮರು ಎಂದು ಕಲಾವಿದರನ್ನು ವ್ಯಾಖ್ಯಾನಿಸಿರುವ ಬಗ್ಗೆ ಕ್ಷಮೆ ಕೋರಬೇಕು. ಇಲ್ಲದಿದ್ದರೆ, ಜು. 10 ರಂದು ನಗರದ ಪುರಭವನದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಇದೇ ದಿನ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಸಂಘಟನೆಗಳು ಹಾಗೂ ಕಲಾವಿದರೂ ಧರಣಿ ನಡೆಸಲಿದ್ದಾರೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಅವರು ಅನುದಾನ ಸ್ಥಗಿತ ಕುರಿತು ನೀಡಿರುವ ಹೇಳಿಕೆ ಸಾಂಸ್ಕೃತಿಕ ವಲಯಕ್ಕೆ ಆಘಾತಕಾರಿ ಮತ್ತು ಅನಿರೀಕ್ಷಿತವಾಗಿದೆ. ಕೆಲ ದಿನಗಳ ಹಿಂದಷ್ಟೇ 2018 -  19 ನೇ ಸಾಲಿನ ಸಹಾಯಧನ ಬಿಡುಗಡೆ ಮಾಡಿದ್ದ ಸಚಿವರು, ಏಕಾಏಕಿ ಅನುದಾನ ಸ್ಥಗಿತ ಮಾಡಲು ನಿರ್ಧರಿಸಿರುವುದು ನಿಜವಾದ ಕಲಾ ತಂಡಗಳಿಗೆ ಮಾಡಿದ ಅನ್ಯಾಯ. ಹೀಗಾಗಿ ಈ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಶಿವಕುಮಾರ್ ಅವರನ್ನು ಒತ್ತಾಯಿಸಲು ನಿರ್ಧರಿಸಲಾಯಿತು ಎಂದರು.

ಅಲ್ಲದೆ, ಅನುದಾನ ಪಡೆಯುವ ಕಲಾವಿದರನ್ನು ಖದೀಮರು ಎಂದು ಕೂಡ ಸಚಿವರು ಅವಮಾನಿಸಿದ್ದು, ಈ ಬಗ್ಗೆ ಕೂಡಲೇ ಕ್ಷಮೆ ಕೋರಬೇಕು ಎಂದು ಒತ್ತಾಯಿಸಲು ಹಾಗೂ ಈ ಒತ್ತಾಯಕ್ಕೆ ಮಣಿಯದಿದ್ದರೆ ಹೋರಾಟ ತೀವ್ರಗೊಳಿಸಲು ಸಭೆ ತೀರ್ಮಾನಿಸಿತು. ಅನುದಾನ ದುರ್ಬಳಕೆ ಮಾಡಿಕೊಳ್ಳುವ ಸಂಘ -ಸಂಸ್ಥೆಗಳು ಇದ್ದರೆ ಅವುಗಳನ್ನು ಪತ್ತೆ ಮಾಡಿ ಸರ್ಕಾರ ಕ್ರಮಕೈಗೊಳ್ಳಲಿ. ನಕಲಿ ಕಲಾ ತಂಡಗಳನ್ನು ಪೊಲೀಸರಿಗೆ ಒಪ್ಪಿಸಲಿ. ಅದನ್ನು ಬಿಟ್ಟು ಎಲ್ಲ ಕಲಾವಿದರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಖದೀಮ ಕಲಾವಿದರು ಎಂದು ಸಚಿವರು ವ್ಯಾಖ್ಯಾನಿಸಿರುವುದು ಸರಿಯಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತ್ತು ಎಂದರು.

ಕಾರ್ಯಕ್ರಮ ಮಾಡುವ ಮೊದಲು ಜಿಲ್ಲಾಧಿಕಾರಿ ಗಳ ಅನುಮತಿ ಪಡೆಯಬೇಕು. ಜಿಲ್ಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳ ಮೂಲಕ ಸದರಿ ಕಾರ್ಯ ಕ್ರಮದ ವಿಡಿಯೋ ಚಿತ್ರೀಕರಿಸಿ ಖರ್ಚು-ವೆಚ್ಚಗಳ ಬಗ್ಗೆ ಲೆಕ್ಕ ಪಕ್ಕಾ ಮಾಡಿದ ನಂತರ ಸಿಎಂ ಅನುಮತಿಗೆ ಒಳಪಟ್ಟು ಆಯಾ ಜಿಲ್ಲಾಧಿಕಾರಿಗಳ ಮೂಲಕವೇ ಅನುದಾನ ಬಿಡುಗಡೆ ಮಾಡಲು ಸಂಸ್ಕೃತಿ ಸಚಿವರು ನಿರ್ಧರಿಸಿದ್ದರು. ಇದಕ್ಕೆ ಕಲಾವಿದರ ವಿರೋಧವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅರ್ಹ ಕಲಾ ತಂಡಗಳು 2.50  ಲಕ್ಷ ರು.ಗಳಿಗಿಂತ ಹೆಚ್ಚಿನ ಅನುದಾನ ಪಡೆಯಲು ಜಿಲ್ಲಾಧಿಕಾರಿ ದೃಢೀಕರಿಸಬೇಕು ಎಂಬ ನಿಯಮ ಅವೈಜ್ಞಾನಿಕವಾದದ್ದು ಎಂದಿದ್ದಾರೆ.