ಯುವಕನೊಬ್ಬ ಒಳಗೆ ನುಗ್ಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಯುವಕನ ಪತ್ತೆ ಕಾರ್ಯ ನಡೆಯುತ್ತಿದೆ.

ಕಲಬುರಗಿ (ಡಿ. 07):  ಇಲ್ಲಿಯ ವಿವಿ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಅಮೂಲ್ಯ ಪುಸ್ತಕಗಳನ್ನು ಸುಟ್ಟು ಹಾಕಿದ ಘಟನೆ ನಿನ್ನೆ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ವಿವಿಯಲ್ಲಿರುವ ಸುಸಜ್ಜಿತ ಗ್ರಂಥಾಲಯದ ಎರಡನೇ ಮಹಡಿಯಲ್ಲಿ ಪುಸ್ತಕಗಳನ್ನು ಗುಂಪು ಹಾಕಿ ಬೆಂಕಿ ಹಚ್ಚಲಾಗಿದೆ, ಮೂರನೇ ಮಹಡಿಯಲ್ಲಿರುವ ರ್ಯಾಕ್'ಗಳಿಗೆ ಬೆಂಕಿ ಹಚ್ಚಲಾಗಿದೆ.

ಗ್ರಂಥಾಲಯದ ಹಳೆಯ ಪುಸ್ತಕಗಳು, ಪೀಠೋಪಕರಣ ಸುಟ್ಟು ಕರಕಲಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದ್ದಾರೆ. ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಸಿ.ಎಸ್.ಪಾಟೀಲ್ ಸುವರ್ಣನ್ಯೂಸ್'ಗೆ ನೀಡಿರುವ ಹೇಳಿಕೆಯಲ್ಲಿ, ಇದು ಕಿಡಿಗೇಡಿಗಳ ಕೃತ್ಯದಂತೆ ಗೋಚರಿಸುತ್ತಿದೆ ಎಂದಿದ್ದಾರೆ.

ಇನ್ನು, ಯುವಕನೊಬ್ಬ ಒಳಗೆ ನುಗ್ಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಯುವಕನ ಪತ್ತೆ ಕಾರ್ಯ ನಡೆಯುತ್ತಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದ ಪ್ರಕಾರ, ಯುವಕನು ಕಟ್ಟಡದ ಮೇಲ್ಭಾಗದಿಂದ ಗ್ರಂಥಾಲಯ ಪ್ರವೇಶಿಸಿದ್ದಾನೆ. ಬಳಿಕ ಒಂದಷ್ಟು ಗ್ರಂಥಗಳನ್ನು ಒಟ್ಟುಗೂಡಿಸಿ ಬೆಂಕಿ ಹತ್ತಿಸುತ್ತಾನೆ. ನಂತರ ಇಡೀ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿಸುತ್ತಾನೆ.

ನಾಡಿದ್ದು ವಿವಿ ಘಟಿಕೋತ್ಸವ ನಡೆಯಲಿದ್ದು, ಎರಡು ದಿನ ಮುನ್ನ ಲೈಬ್ರರಿಗೆ ಬೆಂಕಿ ಹಚ್ಚಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.