ಎಚ್‌.ಡಿ.ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದ​ರಾ​ಮಯ್ಯ ಹೇಳಿದ್ದರು. ಆದರೆ, ಇಂದು ಅವರಪ್ಪನ ಜೊತೆಯಲ್ಲೇ ಕುಳಿತಿದ್ದಾಗಿ ಬಿಜೆಪಿ ಮುಖಂಡ ಸಿಟಿ ರವಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ : ಕಳೆದ ವಿಧಾನಸಭಾ ಚುನಾವಣೆ ವೇಳೆ ಎಚ್‌.ಡಿ.ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದ​ರಾ​ಮಯ್ಯ ಹೇಳಿದ್ದರು. ಆದರೆ, ಇಂದು ಅವರಪ್ಪನ ಜೊತೆಯಲ್ಲೇ ಕುಳಿತು ಜಂಟಿ ಸುದ್ದಿ​ಗೋಷ್ಠಿ ಮಾಡುತ್ತಿದ್ದಾರೆ. ಇದು ಅವರ ಸೌಭಾಗ್ಯವೋ ಅಥವಾ ದೌರ್ಭಾಗ್ಯವೋ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ​ದ್ದಾ​ಗ, ಇಂತಹ ನೀಚ ಸಿಎಂ ಅನ್ನು ನೋಡಿಲ್ಲ, ಕಾಂಗ್ರೆಸ್‌ ಸೋಲಿಸುವುದೇ ನನ್ನ ಕೊನೆ ಆಸೆ ಎಂದು ದೇವೇಗೌಡರು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ಜೆಡಿಎಸ್‌ ಪಕ್ಷ ಬಿಜೆಪಿಯ ಬಿ ಟೀಮ್‌ ಇದ್ದಂತೆ. ಅಲ್ಪಸಂಖ್ಯಾತರು ಜೆಡಿಎಸ್‌ಗೆ ವೋಟು ಕೊಟ್ಟರೆ ಬಿಜೆಪಿಗೆ ಮತ ಹಾಕಿದಂತೆ. ದೇವೇಗೌಡರಿಗೆ ಧೃತರಾಷ್ಟ್ರ ವ್ಯಾಮೋಹ. ಯಾರಿಗೂ ಅವರು ಒಳಿತು ಮಾಡುವುದಿಲ್ಲ. ನಾನು ತಪ್ಪಿಸಿಕೊಂಡು ಬಂದೆ. ಜೆಡಿ​ಎಸ್‌ನಲ್ಲಿ​ ಅವರ ಮಕ್ಕಳನ್ನು ಬಿಟ್ಟು ಬೇರೆಯವರನ್ನು ಬೆಳೆಸುವುದಿಲ್ಲ ಎಂದಿದ್ದರು. ಇದೀಗ ದೇವೇಗೌಡರನ್ನು ಆಲಿಂಗಿಸಿದ್ದಾರೆ. ಇದು ಯಾವ ಆಲಿಂಗನ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರ ಹೇಳಿಕೆಗಳು ಬದಲಾಗುತ್ತಿರುವುದನ್ನು ನೋಡಿಯೇ ದಾಸರು ಆಚಾರವಿಲ್ಲದ ನಾಲಿಗೆ ಎಂದಿರಬಹುದು ಎಂದು ಸಿ.ಟಿ.ರವಿ ಕುಟುಕಿದರು.

ಬೆಂಗಳೂರಿನಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯನ್ನು ಬೈದಿದ್ದು ಬಿಟ್ಟರೆ, ಒಂದೇ ಒಂದು ಪದವು ರಾಜ್ಯದ ಅಭಿವೃದ್ಧಿ ಕುರಿತು ಇರಲಿಲ್ಲ. ಇದರಿಂದ ಅವರಿಗೆ ಬಿಜೆಪಿ ಭಯ ಕಾಡುತ್ತಿದೆ ಎಂಬುದು ಸ್ಪಷ್ಟ​. ಅಗಾಧವಾದ ಹೊಟ್ಟೆಉರಿ, ದ್ವೇಷ ಇದ್ದರೂ ತೋರಿಕೆಗಾಗಿ ಎರಡೂ ಪಕ್ಷಗಳು ಒಂದೇ ವೇದಿಕೆ ಹಂಚಿಕೊಂಡು ಹಾಸ್ಯ ನಾಟಕದಂತೆ ಏಕತೆ ಪ್ರದರ್ಶಿಸಿದ್ದಾರೆ. ಪರಸ್ಪರರನ್ನು ಮುಗಿಸುವ ಮನೋಭಾವ ಇರುವವರು ಎಷ್ಟುಕಾಲ ಒಟ್ಟಿಗೆ ಇರಬಲ್ಲರು ಎಂಬುದನ್ನು ಕಾಲವೇ ಹೇಳಬೇಕು ಎಂದರು.

ಮನೆಯ ಮುಂದೆ ನಾಯಿ ಇದೆ ಎಚ್ಚರಿಕೆ ಎಂದು ಬೋರ್ಡ್‌ ಹಾಕಿರುತ್ತಾರೆ. ಅದೇ ರೀತಿ ಕಾಂಗ್ರೆಸ್‌ನವರೊಂದಿ​ಗೆ ಜೆಡಿಎಸ್‌ ಇದೆ. ಜೆಡಿ​ಎಸ್‌ನಿಂದ ಅವರು ಎಚ್ಚರದಿಂದ ಇರಬೇ​ಕು. ಶಿವಮೊಗ್ಗದಲ್ಲಿ ಕಾಂಗ್ರೆಸ್‌ ನೆಲೆ ಕಳೆದುಕೊಂಡಿಲ್ಲ. ಆದರೆ, ಜೆಡಿ​ಎಸ್‌ ನೆಲೆ ಇಲ್ಲದ ಸ್ಥಿತಿಗೆ ತಳ್ಳಲು ತಯಾರಿ ನಡೆಸಿದೆ. ಈ ಬಗ್ಗೆ ಕಾಂಗ್ರೆಸ್ಸಿಗರು ಎಚ್ಚರ ವಹಿಸಬೇಕು.

ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ