ಬೆಂಗಳೂರು [ಜು.23] :  ಅತೃಪ್ತ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪ ಮಾಡುತ್ತಿದ್ದೀರಿ. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಬಹಿರಂಗ ಆಹ್ವಾನ ನೀಡುತ್ತಿದ್ದೇನೆ. ಎಲ್ಲಾ ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಬಿಜೆಪಿ ಸದಸ್ಯತ್ವ ಪಡೆಯಿರಿ. ಯೋಗ್ಯತೆಗೆ ಅನುಗುಣವಾಗಿ ಜವಾಬ್ದಾರಿಗಳನ್ನು ನೀಡುತ್ತೇವೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಜೆಡಿಎಸ್‌-ಕಾಂಗ್ರೆಸ್‌ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಮೈತ್ರಿಕೂಟದ ಶಾಸಕರು ಆರೋಪ ಮಾಡುತ್ತಿದ್ದಾರೆ. ನಾನು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ರಾಷ್ಟ್ರೀಯ ಸದಸ್ಯತ್ವ ಅಭಿಯಾನದ ಪ್ರಮುಖ ಜವಾಬ್ದಾರಿಯಲ್ಲೂ ಇದ್ದೇನೆ. ನಿಮ್ಮಲ್ಲಿ ಯಾರಾರ‍ಯರು ಬಿಜೆಪಿಗೆ ಸೇರ್ಪಡೆ ಆಗುತ್ತೀರೋ ಮುಕ್ತ ಅವಕಾಶವಿದೆ ಎಂದು ಆಹ್ವಾನ ನೀಡಿದರು.

ಬಿಜೆಪಿ ಸದಸ್ಯತ್ವ ಪಡೆದರೆ ಯೋಗ್ಯತೆಗೆ ತಕ್ಕಂತೆ ಜವಾಬ್ದಾರಿ ನೀಡಲಾಗುವುದು. ನಾವು ಜವಾಬ್ದಾರಿ, ಅಧಿಕಾರ ನೀಡಬಹುದೇ ಹೊರತು ಮಾನ ನೀಡಲು ಆಗುವುದಿಲ್ಲ. ಅದನ್ನು ನೀವೇ ಗಳಿಸಬೇಕು ಎಂದು ಹೇಳಿದರು.

ಈ ವೇಳೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ, ನಾವು ಬಿಜೆಪಿ ಸೇರಿದರೆ ಏನು ಕೊಡುತ್ತೀರಿ ಎಂಬುದು ಬೇಡ. ಮುಂಬೈನಲ್ಲಿರುವ ಶಾಸಕರಿಗೆ ಏನು ಕೊಡುತ್ತೀರೆಂದು ಹೇಳಿದ್ದೀರಿ ಎಂಬುದನ್ನು ಮೊದಲು ಬಹಿರಂಗಗೊಳಿಸಿ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರವಿ, ಕೆಲವನ್ನು ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ. ನೀವು ಬರುವುದಾದರೆ ಹೇಳಿ, ನಿಮ್ಮ ಹತ್ತಿರ ಖಾಸಗಿಯಾಗಿ ಮಾತನಾಡುತ್ತೇವೆ. ಏಳು ಮಂದಿ ಜೆಡಿಎಸ್‌ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾನ ಮಾಡಿದಾಗ ನಾವು ಈ ರೀತಿ ಕೇಳಲಿಲ್ಲ. 2006ರಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆಸಿಕೊಂಡಾಗ ಏನು ಕೊಟ್ಟಿರಿ ಎಂದು ಕೇಳಿರಲಿಲ್ಲ ಎಂದು ಕಾಲೆಳೆದರು.