ಆತ್ಮಾಹುತಿ ದಾಳಿಗೆ ಮಂಡ್ಯದ ವೀರಪುತ್ರ ಹುತಾತ್ಮ

ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧರೊಬ್ಬರೂ ಹುತಾತ್ಮರಾಗಿದ್ದಾರೆ. ಸಿಆರ್‌ಪಿಎಫ್‌ನ 82ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಎಚ್‌.ಗುರು ಹುತಾತ್ಮರು. 

CRPF Jawan Mandya District Died In Pulwama Terror Attack

ಮಂಡ್ಯ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧರೊಬ್ಬರೂ ಹುತಾತ್ಮರಾಗಿದ್ದಾರೆ.  ಸಿಆರ್‌ಪಿಎಫ್‌ನ 82ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಎಚ್‌.ಗುರು (33) ಮೃತ ಯೋಧ. ಎಂಟು ತಿಂಗಳ ಹಿಂದಷ್ಟೇ ಗುರು ಅವರ ವಿವಾಹವಾಗಿತ್ತು.

ಗುರು ಅವರು ಗುಡಿಗೆರೆ ಕಾಲೋನಿಯ ನಿವಾಸಿ ಎಚ್‌.ಹೊನ್ನಯ್ಯ ಮತ್ತು ಚಿಕ್ಕೋಳಮ್ಮ ದಂಪತಿ ಮೂವರು ಗಂಡು ಮಕ್ಕಳಲ್ಲಿ ಹಿರಿಯವರು. ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಗುರು ಅವರ ತಂದೆ ಕೆ.ಎಂ.ದೊಡ್ಡಿಯಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇವರ ಇಬ್ಬರು ಸಹೋದರರಲ್ಲಿ ಒಬ್ಬರು ಲೈನ್‌ಮ್ಯಾನ್‌ ಆಗಿ ಮತ್ತೊಬ್ಬ ಹೋಮ್‌ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವರ್ಷದ ಹಿಂದಷ್ಟೇ ಹೊಸ ಮನೆಯ ಗೃಹ ಪ್ರವೇಶ ಆಗಿತ್ತು. ಎಂಟು ತಿಂಗಳ ಹಿಂದಷ್ಟೇ ಗುರು ಅವರಿಗೆ ಮಂಡ್ಯ ಜಿಲ್ಲೆಯ ಹಲಗೂರು ಬಳಿಯ ಸಾಸಲಾಪುರದ ಸ್ವಂತ ಸೋದರ ಮಾವನ ಮಗಳು ಕಲಾವತಿ ಎಂಬ ಯುವತಿಯ ಕೈಹಿಡಿದ್ದರು.

ತಾಲೂಕಿನ ದಿವ್ಯಜ್ಯೋತಿ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಐಟಿಐ ಉತ್ತೀರ್ಣರಾಗಿದ್ದ ಗುರು, ನಂತರ ಸಿಆರ್‌ಪಿಎಫ್‌ ಸೇರಿದ್ದರು. 2011ರಿಂದ ಜಾರ್ಖಂಡ್‌ ಸೇರಿ ವಿವಿಧೆಡೆ ಯೋಧರಾಗಿ ಕಾರ್ಯ ನಿರ್ವಹಿಸಿದ್ದರು.

ಮುಗಿಲು ಮಟ್ಟಿದ ಆಕ್ರಂದನ: ಗುರು ವೀರಮರಣವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಗುಡಿಗೇರಿಯ ಅವರ ಹುಟ್ಟೂರಲ್ಲಿ ಕುಟುಂಬದವರ ಆಕ್ರಂದ ಮುಗಿಲು ಮುಟ್ಟಿತ್ತು. ವಾರದ ಹಿಂದೆ ಬಂದಿದ್ದ ಮಗ ಇನ್ನಿಲ್ಲವಲ್ಲ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

 

ವಾರದ ಹಿಂದೆ ಬಂದಿದ್ದರು!

ವರ್ಷಕ್ಕೆರಡು ಬಾರಿ ರಜೆಯ ಮೇಲೆ ಬರುತ್ತಿದ್ದ ಗುರು ಅವರು ಕೆಲ ದಿನಗಳ ಹಿಂದಷ್ಟೇ ಹುಟ್ಟೂರಿಗೆ ಬಂದು ಹೋಗಿದ್ದರು. ಒಂದಷ್ಟುದಿನ ಊರು, ಹೆಂಡತಿ ತವರೂರಲ್ಲಿದ್ದ ಅವರು ನಾಲ್ಕು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ವಾಪಸಾಗಿದ್ದರು. ನಿನ್ನೆಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಗುರುವಾರ ಸೇನಾವಾಹನದಲ್ಲಿ ಶ್ರೀನಗರದಿಂದ ತೆರಳುತ್ತಿದ್ದಾಗ ಉಗ್ರ ದಾಳಿಗೆ ಬಲಿಯಾಗಿದ್ದಾರೆ.

 

ಗುರು ಅವರು ಪ್ರತಿದಿನ ಮೂರು ಬಾರಿ ಹೆಂಡತಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಆದರೆ ಗುರುವಾರ ಮಾತ್ರ ಬೆಳಗ್ಗೆಯಿಂದ ಒಂದೇ ಒಂದು ಕರೆ ಬಂದಿರಲಿಲ್ಲ, ಹಲವು ಬಾರಿ ಕರೆ ಮಾಡಿದರೂ ರಿಸೀವ್‌ ಮಾಡಿರಲಿಲ್ಲ. ರಾತ್ರಿ ಮತ್ತೆ ಕರೆ ಮಾಡಿದಾಗ ಅವರ ಸ್ನೇಹಿತರು ಕರೆ ರಿಸೀವ್‌ ಮಾಡಿ ದುರಂತದ ಸುದ್ದಿ ತಿಳಿಸಿದ್ದಾರೆ ಎಂದು ಸ್ನೇಹಿತರು ಹೇಳುತ್ತಿದ್ದಾರೆ. ಮತ್ತೆ ಕೆಲವರ ಪ್ರಕಾರ ಜಾರ್ಖಂಡ್‌ನ ಗುರು ಅವರ ಗೆಳೆಯರೊಬ್ಬರೇ ಕರೆ ಮಾಡಿ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಸುದ್ದಿಯನ್ನು ಕುಟುಂಬದವರಿಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಈವರೆಗೆ ಜಿಲ್ಲಾಡಳಿತಕ್ಕಾಗಲಿ, ಪೊಲೀಸರಿಗಾಗಲಿ ಯಾವುದೇ ಮಾಹಿತಿ ಇಲ್ಲ. ಕುಟುಂಬದವರೂ ಇದ್ಯಾವುದನ್ನೂ ಹೇಳುವ ಸ್ಥಿತಿಯಲ್ಲಿ ಸದ್ಯದಲ್ಲಿಲ್ಲ.

ಭಯೋತ್ಪಾದಕರ ದಾಳಿಗೆ ಮದ್ದೂರು ತಾಲೂಕಿನ ಯೋಧನೊಬ್ಬ ಬಲಿಯಾದ ಸುದ್ದಿ ಕೇಳಿ ದುಃಖವಾಗಿದೆ. ಈ ಉಗ್ರ ಕೃತ್ಯದ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ಪ್ರಧಾನಿ ಮೋದಿ ಅವರ ಜತೆಗಿರುತ್ತೇವೆ. ನಮಗೆ ದೇಶ ಮುಖ್ಯ.

- ಡಿ.ಸಿ.ತಮ್ಮಣ್ಣ, ಸಚಿವ

Latest Videos
Follow Us:
Download App:
  • android
  • ios