ಬೆಂಗಳೂರು :  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಗಂಭೀರ ಆರ್ಥಿಕ ಹೊರೆಯಿಂದ ಬಳಲುತ್ತಿದೆ! ಕಳೆದ ಐದು ವರ್ಷ ಅಧಿಕಾರದಲ್ಲಿದ್ದ ಹಾಗೂ ಈಗಲೂ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ ಪಕ್ಷ ಆರ್ಥಿಕವಾಗಿ ಸಮಸ್ಯೆಯಲ್ಲಿದೆ. ಸಾಲದ ಹೊರೆ ಪಕ್ಷವನ್ನು ಕಾಡುತ್ತಿದೆ. ಅಂದಹಾಗೆ, ಪಕ್ಷದ ಮೇಲೆ ಹಾಲಿ ಇರುವ ಸಾಲದ ಹೊರೆ ಬರೋಬ್ಬರಿ 25 ಕೋಟಿ ರು.

ಇದರ ಜತೆಗೆ, ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡುವುದು ಹೇಗೆ ಎಂಬ ಚಿಂತೆಯೂ ಪಕ್ಷದ ನಾಯಕತ್ವವನ್ನು ಕಾಡಿದೆ. ಹೀಗಾಗಿಯೇ, ಪಕ್ಷವನ್ನು ಆರ್ಥಿಕ ಹೊರೆಯಿಂದ ಪಾರು ಮಾಡುವುದು ಹೇಗೆ? ಎಲ್ಲಿಂದ ಹಣ ಹೊಂದಿಸುವುದು ಮತ್ತು ಸಾಲ ನೀಡಿರುವ ಏಜೆನ್ಸಿಗಳನ್ನು ಸಮಾಧಾನಪಡಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ ನಾಯಕರು ಗುರುವಾರ ತಡರಾತ್ರಿ ರಹಸ್ಯ ಸಭೆ (ಕ್ಲೋಸ್ಡ್‌ ಡೋರ್‌ ಮೀಟಿಂಗ್‌) ಕೂಡ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ನಿಕಟಪೂರ್ವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌, ಕಾರಾರ‍ಯಧ್ಯಕ್ಷ ಈಶ್ವರ್‌ ಖಂಡ್ರೆ, ಪ್ರಭಾವಿ ಸಚಿವರಾದ ಡಿ.ಕೆ.ಶಿವಕುಮಾರ್‌ ಹಾಗೂ ಆರ್‌.ವಿ.ದೇಶಪಾಂಡೆ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಈ ಸಭೆಗೆ ಆಹ್ವಾನಿತರಾಗಿದ್ದ ಹಾಗೂ ಕಳೆದ ಅವಧಿಯಲ್ಲಿ (ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ) ಕೆಪಿಸಿಸಿ ಕಚೇರಿಗೆ ಹೆಚ್ಚು ನೆರವು ನೀಡಿದ್ದ ಕೆ.ಜೆ.ಜಾಜ್‌ರ್‍ ಅವರು ಗೈರು ಹಾಜರಾಗಿದ್ದರು.

ಈ ಮುಚ್ಚಿದ ಬಾಗಿಲಿನ ಸಭೆ ನಡೆಯಲು ಮುಖ್ಯ ಕಾರಣ ಕಳೆದ ಚುನಾವಣೆ ವೇಳೆ ಪಕ್ಷವು ನೀಡಿದ ಜಾಹೀರಾತಿನ ಶುಲ್ಕವನ್ನು ಏಜೆನ್ಸಿಗಳಿಗೆ ಪಾವತಿ ಮಾಡದಿರುವುದು. ಮೂಲಗಳ ಪ್ರಕಾರ ಕಾಂಗ್ರೆಸ್‌ ಪಕ್ಷವು ಕಳೆದ ವಿಧಾನಸಭಾ ಚುನಾವಣೆ ವೇಳೆ ಜಾಹೀರಾತಿಗಾಗಿ ಪಕ್ಷ ಮಾಡಿದ ವೆಚ್ಚದ ಪೈಕಿ 11 ಕೋಟಿ ರು.ಗಳನ್ನು ಜಾಹೀರಾತು ಏಜೆನ್ಸಿಗಳಿಗೆ ಇನ್ನೂ ನೀಡುವುದು ಬಾಕಿಯಿದೆ. ಈ ಏಜೆನ್ಸಿಗಳು ಇದೀಗ ಬಾಕಿ ಪಾವತಿಗೆ ದುಂಬಾಲು ಬಿದ್ದಿವೆ. ಇದಿಷ್ಟೇ ಅಲ್ಲ, ಚುನಾವಣೆ ವೇಳೆ ಖರೀದಿ ಮಾಡಲಾಗಿದ್ದ ಪ್ರಚಾರ ಸಾಮಗ್ರಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ದೆಹಲಿಯಿಂದ ಆಗಮಿಸಿದ್ದ ನಾಯಕರು ಬಳಸಿದ ಹೆಲಿಕಾಪ್ಟರ್‌ ಹಾಗೂ ಇತರೆ ವಾಹನಗಳ ವೆಚ್ಚವಾಗಿ ಸುಮಾರು 10 ಕೋಟಿ ರು. ಹಣವನ್ನು ಪಾವತಿಸುವುದು ಬಾಕಿಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಇನ್ನು ಕ್ವೀನ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಪಕ್ಷದ ಕಚೇರಿಯ ಪಕ್ಕದಲ್ಲೇ ನೂತನ ಕಟ್ಟಡವೊಂದನ್ನು ಕಾಂಗ್ರೆಸ್‌ ನಿರ್ಮಾಣ ಮಾಡುತ್ತಿದೆ. ಈ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ಮೊತ್ತ ಹಾಗೂ ಇತರೆ ಬಾಬ್ತುಗಳು ಸೇರಿ ಸುಮಾರು 4 ಕೋಟಿ ರು. ಸಾಲದ ಹೊರೆಯಿದೆ. ಹೀಗೆ, ಒಟ್ಟಾರೆ 25 ಕೋಟಿ ರು. ಬಾಕಿಯನ್ನು ಈ ತಕ್ಷಣಕ್ಕೆ ಕಾಂಗ್ರೆಸ್‌ ತೀರಿಸಬೇಕಿದೆ. ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರದಲ್ಲಿದ್ದಾಗ ಹರಿದುಬರುತ್ತಿದ್ದ ಸಂಪನ್ಮೂಲ ಈಗ ನಿಂತುಹೋಗಿದೆ. ವಿವಿಧ ಮೂಲಗಳಿಂದ ಹಾಲಿ ಬರುತ್ತಿರುವ ಮೊತ್ತವು ಕಚೇರಿ ಸಿಬ್ಬಂದಿ ಸಂಬಳ ಹಾಗೂ ನಿರ್ವಹಣೆಗೆ ಸಾಕಾಗುವಷ್ಟಿದೆ.

ಇಂತಹ ಸಂದರ್ಭದಲ್ಲಿ ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯೂ ಬಂದಿದೆ. ಈ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳಿಗೆ ತುಸು ಆರ್ಥಿಕ ನೆರವು ನೀಡುವ ಸಂಪ್ರದಾಯವನ್ನು ಪಕ್ಷ ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದೆ. ಈ ಬಾರಿಯೂ ಅಭ್ಯರ್ಥಿಗಳಿಗೆ ನೆರವು ನೀಡಬೇಕು. ಆದರೆ, ಪಕ್ಷದ ಬಳಿ ಹಣದ ಕೊರತೆಯಿದೆ. ಹೀಗಾಗಿ ಸಂಪನ್ಮೂಲವನ್ನು ಹೇಗೆ ಕ್ರೋಡೀಕರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಗುರುವಾರ ತಡರಾತ್ರಿ ಸಭೆ ನಡೆದಿದೆ. ಈ ಸಭೆಯಲ್ಲಿ ಸಚಿವರು ಹಾಗೂ ನಾಯಕರು ಪಕ್ಷಕ್ಕೆ ನಿಗದಿತವಾಗಿ ಆರ್ಥಿಕ ನೆರವು ನೀಡಬೇಕು ಎಂದು ಸೂಚಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.