ತಮ್ಮ 12 ನೇ ಬಜೆಟ್ ಮಂಡನೆಗೆ ಕೇವಲ ೧೮ ಗಂಟೆಗಳ ಮುಂಚಿತವಾಗಿ ರಾಜ್ಯದ 26 ಜಿಲ್ಲೆಗಳ 9.68 ಲಕ್ಷ ರೈತರಿಗೆ ಬೆಳೆ ನಷ್ಟದ ಪರಿಹಾರದ ಹಣ ₹ 671 ಕೋಟಿಗಳನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ಬರದಿಂದ ನಲುಗಿರುವ ರೈತರಿಗೆ ಕೆಲಮಟ್ಟಿನ ನಿರಾಳತೆ ಉಂಟು ಮಾಡುವ ಪ್ರಯತ್ನ ನಡೆಸಿದರು.
ಬೆಂಗಳೂರು (ಮಾ.14): ತಮ್ಮ 12 ನೇ ಬಜೆಟ್ ಮಂಡನೆಗೆ ಕೇವಲ ೧೮ ಗಂಟೆಗಳ ಮುಂಚಿತವಾಗಿ ರಾಜ್ಯದ 26 ಜಿಲ್ಲೆಗಳ 9.68 ಲಕ್ಷ ರೈತರಿಗೆ ಬೆಳೆ ನಷ್ಟದ ಪರಿಹಾರದ ಹಣ ₹ 671 ಕೋಟಿಗಳನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ಬರದಿಂದ ನಲುಗಿರುವ ರೈತರಿಗೆ ಕೆಲಮಟ್ಟಿನ ನಿರಾಳತೆ ಉಂಟು ಮಾಡುವ ಪ್ರಯತ್ನ ನಡೆಸಿದರು.
ಮಂಗಳವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬರದಿಂದ ಉಂಟಾದ ಬೆಳೆಹಾನಿಗೆ ನಷ್ಟ ಭರಿಸಲು ‘ಪರಿಹಾರ ತಂತ್ರಾಂಶ’ ಹಾಗೂ ಬೆಳೆ ವಿಮೆ ಪಾವತಿಸಲು ‘ಸಂರಕ್ಷಣೆ ತಂತ್ರಾಂಶ’ಗಳಿಗೆ ರೈತರ ಖಾತೆಗಳಿಗೆ ಹಣ ಪಾವತಿಸುವ ಮೂಲಕವೇ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಇದೇ ವೇಳೆ ರಾಜ್ಯದ ಐದು ಜಿಲ್ಲೆಗಳ 38 ಸಾವಿರ ರೈತರಿಗೆ 56.57 ಕೋಟಿ ರು. ಬೆಳೆ ವಿಮೆ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಿದರು.
ಈ ವೇಳೆ ಯಾದಗಿರಿ ಜಿಲ್ಲೆಯ ದೇವಯ್ಯ ಎನ್ನುವ ರೈತನೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, ರೈತನ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡರು. ಇದಕ್ಕೆ ಪ್ರತಿಯಾಗಿ ರೈತ ದೇವಯ್ಯ, ತಮ್ಮ ಖಾತೆಗೆ ಹಣ ಜಮಾ ಆಗಿದೆ. ಅಷ್ಟೇ ಅಲ್ಲ, ಈ ರೀತಿ ನೇರವಾಗಿ ತಮಗೆ ಹಿಂದೆ ಯಾರೂ ಬೆಳೆ ವಿಮೆ ಹಣ ಕೊಟ್ಟಿರಲಿಲ್ಲ ಎಂದು ಸಿಎಂಗೆ ಕೃತಜ್ಞತೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಈ ವರ್ಷ ಬರಗಾಲದಿಂದ ಸುಮಾರು ₹25 ಸಾವಿರ ಕೋಟಿಗಳಷ್ಟು ಹಾನಿ ಉಂಟಾಗಿದೆ. ಆದರೆ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯ ನಿಯಮಾನುಸಾರ 4,702 ಕೋಟಿ ರು. ಪರಿಹಾರ ಕೇಳಿದ್ದೆವು. ಆದರೆ ಕೇಂದ್ರ ಸರ್ಕಾರ ಕೇವಲ ₹ 1,782 ಕೋಟಿ ಮಂಜೂರು ಮಾಡಿದೆ.
ಆ ಪೈಕಿ ಕೇವಲ ₹450ಕೋಟಿ ಬಿಡುಗಡೆ ಮಾಡಿದೆ. ರೈತರು ತೀವ್ರ ಸಂಕಷ್ಟದಲ್ಲಿರುವುದರಿಂದ ಅಲ್ಪ-ಸ್ವಲ್ಪ ಹಣ ಬಿಡುಗಡೆ ಮಾಡಿದರೆ ಸಾಕಾಗುವುದಿಲ್ಲ ಎಂಬುದಾಗಿ ಕೇಂದ್ರಕ್ಕೆ ಹಲವು ಸಲ ಮನವರಿಕೆ ಮಾಡಿದರೂ ಉಳಿದ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ರಾಜ್ಯದಿಂದ ₹ 221 ಕೋಟಿ ಬಿಡುಗಡೆ ಮಾಡಿ, ಕೇಂದ್ರದ ₹450 ಕೋಟಿ ಸೇರಿ ಒಟ್ಟು ₹671 ಕೋಟಿ ಹಣವನ್ನು ಪರಿಹಾರ ತಂತ್ರಾಂಶದ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ. ಆರ್‌ಟಿಜಿಎಸ್ ಮೂಲಕ ಹಾಕಿದ ಹಣವನ್ನು ಒಂದೆರಡು ದಿನಗಳಲ್ಲೇ ರೈತರು ಪಡೆಯಬಹುದಾಗಿದೆ ಎಂದು ಹೇಳಿದರು.
ರಾಜ್ಯದ 26 ಜಿಲ್ಲೆಗಳ 26.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಉಂಟಾದ ಬೆಳೆಹಾನಿಗೆ ₹671.23 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ರೈತರ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಹಾಕಿದ ತಕ್ಷಣ
ಸಂಬಂಧಪಟ್ಟ ರೈತರ ಮೊಬೈಲ್‌ಗಳಿಗೆ ಎಸ್‌ಎಂಎಸ್ ರವಾನೆಯಾಗಲಿದೆ. ಇಷ್ಟೊಂದು ಪಾರದರ್ಶಕವಾಗಿ ಹಿಂದೆಂದೂ ಯಾವ ಸರ್ಕಾರವೂ ರೈತರಿಗೆ ಪರಿಹಾರ ನೀಡಿರಲಿಲ್ಲ. ಅನೇಕ ಬಾರಿ ಮಧ್ಯವರ್ತಿಗಳ ಕಾಟದಿಂದ ರೈತರ ಕೈಗೆ ಪೂರ್ತಿ ಹಣ ಸಿಗುತ್ತಿರಲಿಲ್ಲ. ಉಳಿದ ಸುಮಾರು ₹ 1300 ಕೋಟಿ ರು.ಗಳನ್ನು ಕೂಡ ಶೀಘ್ರವೇ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಕೇಂದ್ರ ಹಣ ಬಿಡುಗಡೆ ಮಾಡಿದ ತಕ್ಷಣವೇ ರಾಜ್ಯ ಸರ್ಕಾರವೂ ರೈತರ ಖಾತೆಗೆ ನೇರವಾಗಿ ಹಣ ನೀಡಲಿದೆ ಎಂದು ತಿಳಿಸಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈ ವರ್ಷ ರಾಜ್ಯ ಸರ್ಕಾರ ರೈತರ ಬೆಳೆ ವಿಮೆ ಕಂತು ಭರಿಸಲು ₹850 ಕೋಟಿ ವೆಚ್ಚ ಮಾಡಿದೆ. ಅಷ್ಟೇ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರ ಭರಿಸಿದೆ. ಬೆಳೆ ವಿಮೆ ಪರಿಹಾರವನ್ನು ಈ ಹಿಂದೆ ಜಿಲ್ಲಾ ಲೀಡ್ ಬ್ಯಾಂಕ್‌ಗಳ ಮೂಲಕ ರೈತರಿಗೆ ವಿತರಿಸಲಾಗುತ್ತಿತ್ತು. ಈ ಹಂತದಲ್ಲೂ ಕೆಲಮಟ್ಟಿನ ಸೋರಿಕೆ, ವಿಳಂಬ ಹಾಗೂ ಕೈತಪ್ಪುವ ಅಪಾಯ ಇತ್ತು. ಹೀಗಾಗಿ ‘ಸಂರಕ್ಷಣೆ ತಂತ್ರಾಂಶ’ದ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಬೆಳೆ ವಿಮೆಯನ್ನು ಸಕಾಲದಲ್ಲೇ ಪಾವತಿಸುವ ಮೊದಲ ಯೋಜನೆಯನ್ನು ರಾಜ್ಯ ಸರ್ಕಾರ ಇಂದು ಜಾರಿಗೊಳಿಸಿದೆ. ಮುಂದಿನ ವರ್ಷದಿಂದ ವಿಮೆ ಕಂತು ಪಾವತಿಸಿದ ಆರು ತಿಂಗಳಿನಲ್ಲೇ ಪರಿಹಾರದ ಹಣ ನೇರವಾಗಿ ರೈತರಿಗೆ ಪಾವತಿಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
