Asianet Suvarna News Asianet Suvarna News

ಊಟಕ್ಕೂ, ಕೂಟಕ್ಕೂ ದೊಣ್ಣೆನಾಯಕರ ಅಪ್ಪಣೆ ಬೇಕಾ?

Critical Situation Create in Country

ದಾವಣಗೆರೆ (ಸೆ.24): ದೇಶಭಕ್ತರ ಹೆಸರಿನ ನಕಲಿ ವಾರಸುದಾರರ ನಡೆಗಳು ದೇಶದಲ್ಲಿ ಅಪಾಯಕಾರಿ ಸನ್ನಿವೇಶಗಳ ಸೃಷ್ಟಿಸುತ್ತಿದ್ದು ಊಟಕ್ಕೂ, ಕೂಟಕ್ಕೂ ದೊಣ್ಣೆನಾಯಕರ ಅಪ್ಪಣೆ ಬೇಕೆಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ನಗರದ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ದಲಿತೋತ್ಸವದಲ್ಲಿ ಮಾತನಾಡಿದ ಅವರು ದೊಣ್ಣೆನಾಯಕರಿಗೆ ಅಸ್ತು ಎನ್ನದಿದ್ದರೆ ರಾಷ್ಟ್ರಕ್ಕೆ ಗಂಢಾಂತರ ಬಂದಿದೆ ಎಂಬರ್ಥದಲ್ಲಿ ವರ್ತಿಸುತ್ತಿದ್ದಾರೆಂದು ದೂರಿದರು.

ಸಂಘ ಪರಿವಾರದವರಿಗೆ ರಾಷ್ಟ್ರವೆಂದರೆ ಜನ ಎಂಬುದರ ಕಲ್ಪನೆಯೇ ಇಲ್ಲ. ಹಿಂದು ಧರ್ಮದ ರಕ್ಷಣೆಯೆಂದರೆ ರಾಷ್ಟ್ರ ಎಂಬಂತಾಗುವುದಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಧರ್ಮದ ವಾಖ್ಯಾನ ಇವರಿಗೆ ಗೊತ್ತೇ ಇಲ್ಲ. ಕಾಣದ ದೇವರಲ್ಲಿ ಪ್ರೀತಿ ಇಡುವ ಇವರಿಗೆ ಎದುರಿಗೆ ಕಾಣಿಸುವ ಮನುಷ್ಯರ ಬಗ್ಗೆ ವಿಶ್ವಾಸವೇ ಇಲ್ಲ. ಬಸವ, ಬುದ್ದ, ಅಂಬೇಡ್ಕರ್‌ ಇಂತಹ ವಿತಂಡವಾದಿಗಳಿಗೆ ಮನುಷ್ಯತ್ವದ ದರ್ಶನ ಮಾಡಿಸಿದ್ದಾರೆ ಎಂದರು.

ಅಂಬೇಡ್ಕರ್‌ ನೀಡಿದ ಸಂವಿಧಾನ ನಮ್ಮ ಧರ್ಮ ಗ್ರಂಥವಾಗಿದ್ದು ಎಲ್ಲ ಸಮುದಾಯಗಳಿಗೂ ಬದುಕುವ ಹಕ್ಕು ದಯಪಾಲಿಸಿದೆ. ಯಾವುದು ಸಾಮಾಜಿಕ ನ್ಯಾಯ ನೀಡುವುದೋ ಅದೇ ನಮ್ಮ ಸಂವಿಧಾನ. ಅಂಬೇಡ್ಕರ್‌ ಸ್ವಾರ್ಥ ಬಯಸಿದ್ದರೆ ಅಂತಾರಾಷ್ಟ್ರೀಯ ವಿವಿಗಳಲ್ಲಿ ಕುಲಪತಿಗಳಾಗಿ ಐಷಾರಾಮಿ ಜೀವನ ನಡೆಸಬಹುದಿತ್ತು. ಆ ರೀತಿ ಮಾಡದೆ ತಮ್ಮ ಸಮುದಾಯದ ಬಿಡುಗಡೆಗಾಗಿ ಹೋರಾಟ ಮಾಡಿದರು. ಮನುಷ್ಯತ್ವವನ್ನು ಸಮಾಜದಲ್ಲಿ ಅರಳಿಸುವ ಕೆಲಸ ಮಾಡಿದರು. ಬಲಪಂಥೀಯ ಸಂಸ್ಕೃತಿ ಬಹುದೊಡ್ಡದಾಗಿ ಬೆಳೆಯುತ್ತಿರುವ ಈ ವೇಳೆ ಮಾನವ ಬಂಧುತ್ವ ವೇದಿಕೆ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಜಾತ್ಯತೀತ ಹಾಗೂ ಧರ್ಮದ ಸೋಗಿನಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಸದಾ ಹವಣಿಸುತ್ತಿವೆ. ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಧಾರ್ಮಿಕ ಮುಖಂಡರು ಮೌಢ್ಯದ ಹೆಸರಲ್ಲಿ ಜನರನ್ನು ಮೋಸ ಮಾಡದೆ ವೈಚಾರಿಕತೆ ಬಿತ್ತುವ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ಮೌಢ್ಯಮುಕ್ತ ಭಾರತ ನಮ್ಮ ಆಶಯವಾಗಿದ್ದು ಈ ನಿಟ್ಟಿನಲ್ಲಿ ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ 12 ಲಕ್ಷ ಶಾಲೆಗಳಿದ್ದರೆ, 24 ಲಕ್ಷ ಗುಡಿಗಳಿವೆ. ಶಾಸ್ತ್ರ, ಜ್ಯೋತಿಷ್ಯ ಹೇಳುವ ಮಂದಿ ಮಳೆ ತರಿಸಿ ತಮಿಳುನವಾಡಿಗೆ 50 ಟಿಎಂಸಿ ನೀರು ಹರಿಸಿ ಕರ್ನಾಟಕವನ್ನು ರಕ್ಷಿಸಬಹುದಿತ್ತಲ್ಲವಾ ಎಂದು ಪ್ರಶ್ನಿಸಿದರು.

ಮನೆ ಕಟ್ಟುವ ತನಕ ನಾವು ಶೋಷಿತ ಜಾತಿಗಳ ಬಳಸಿಕೊಳ್ಳುತ್ತೇವೆ. ಅಲ್ಲಿಯ ತನಕ ಅವರು ಮನೆಯೊಳಗೆ ಅಡ್ಡಾಡುತ್ತಾರೆ, ಮನೆ ಕಟ್ಟುವ ಕೆಲಸ ಮುಗಿದ ನಂತರ ಅವರು ಹೊಸಲಿನಾಚೆ ನಿಂತುಕೊಳ್ಳುತ್ತಾರೆ. ಇದಾವ ಧರ್ಮವೆಂದು ಪ್ರಶ್ನಿಸಿದ ಸತೀಶ್‌ ಜಾರಕಿಹೊಳಿ ಮೌಢ್ಯವನ್ನು ದೇಶದಾಚೆ ಓಡಿಸದ ಹೊರತು ಉಳಿಗಾಲವಿಲ್ಲ ಎಂದರು.

 

Latest Videos
Follow Us:
Download App:
  • android
  • ios