ತಮ್ಮ ವಿರುದ್ಧ ಹೇಳಿಕೆ ನೀಡುವ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಈವರೆಗೂ ಏಕೆ ಕ್ರಮ ಜರುಗಿಸಿಲ್ಲ? ಕೇಜ್ರಿವಾಲ್ ವಿರುದ್ಧ ಮಾತನಾಡಿದ್ದರೆ 10 ನಿಮಿಷದಲ್ಲಿ ಖಾನ್ ವಜಾ ಮಾಡಲಾಗುತ್ತಿತ್ತು ಎಂದು ಪರೋಕ್ಷವಾಗಿ ಕೇಜ್ರಿಯನ್ನು ವಿಶ್ವಾಸ್ ತಿವಿದರು. ಈ ನಡುವೆ ವಿಶ್ವಾಸ್ ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಡಿಸಿಎಂ ಮನೀಶ್ ಸಿಸೋಡಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಮೇ.02): ಆಮ್ ಆದ್ಮಿ ಪಕ್ಷದಲ್ಲಿ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದ್ದು, ಹಿರಿಯ ಮುಖಂಡ ಕುಮಾರ್ ವಿಶ್ವಾಸ್ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ತಮ್ಮ ವಿರುದ್ಧ ಸಂಚು ರೂಪಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಪಕ್ಷದ ವಿರುದ್ಧ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದ್ದರೂ ಅದನ್ನು ಕುಮಾರ್ ವಿಶ್ವಾಸ್ ಉಲ್ಲಂಘಿಸಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿನ ತಪ್ಪುಗಳನ್ನು ಹೊರಗೆಡಹುವುದಾಗಿ ಹೇಳಿದ್ದಾರೆ. ಇದೇ ವೇಳೆ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಕೆಳಗಿಳಿಸಿ ತಾವೇ ಮುಖ್ಯಮಂತ್ರಿಯಾಗಲು ಕುಮಾರ್ ವಿಶ್ವಾಸ್ ಬಯಸಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ, ತಮಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಆಪ್ ಸಂಚಾಲಕನಾಗುವ ಯಾವುದೇ ಉದ್ದೇಶ ಇಲ್ಲ ಎಂದು ವಿಶ್ವಾಸ್ ಸ್ಪಷ್ಟನೆ ನೀಡಿದ್ದಾರೆ.

‘ನಾನು ಮುಖ್ಯಮಂತ್ರಿ ಇಲ್ಲವೆ ಆಪ್ ಸಂಚಾಲಕನಾಗುವ ಬಯಕೆ ಹೊಂದಿಲ್ಲ ಎಂದು ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರಿಗೆ ಮನವರಿಕೆ ಮಾಡಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಇಲ್ಲವೇ ಸ್ವರಾಜ್ ಇಂಡಿಯಾ (ಉಚ್ಚಾಟಿತ ಆಪ್ ಮುಖಂಡರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಸ್ಥಾಪಿಸಿರುವ ರಾಜಕೀಯ ಪಕ್ಷ) ಸೇರುವುದಿಲ್ಲ’ ಗಾಜಿಯಾಬಾದನ ತಮ್ಮ ನಿವಾಸದ ಹೊರಗಡೆ ಸುದ್ದಿಗಾರರಿಗೆ ಕಣ್ಣೀರುಗರೆಯುತ್ತ ತಿಳಿಸಿದರು.

ತಮ್ಮ ವಿರುದ್ಧ ಹೇಳಿಕೆ ನೀಡುವ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಈವರೆಗೂ ಏಕೆ ಕ್ರಮ ಜರುಗಿಸಿಲ್ಲ? ಕೇಜ್ರಿವಾಲ್ ವಿರುದ್ಧ ಮಾತನಾಡಿದ್ದರೆ 10 ನಿಮಿಷದಲ್ಲಿ ಖಾನ್ ವಜಾ ಮಾಡಲಾಗುತ್ತಿತ್ತು ಎಂದು ಪರೋಕ್ಷವಾಗಿ ಕೇಜ್ರಿಯನ್ನು ವಿಶ್ವಾಸ್ ತಿವಿದರು. ಈ ನಡುವೆ ವಿಶ್ವಾಸ್ ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಡಿಸಿಎಂ ಮನೀಶ್ ಸಿಸೋಡಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವಾಸ್‌ಗೆ ದೊಡ್ಡ ಹುದ್ದೆ?

ಇದರ ನಡುವೆಯೇ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷ (ಆಪ್)ದ ಮರುನಿರ್ಮಾಣಕ್ಕೆ ಸರ್ಜರಿ ಆರಂಭಿಸಿದ್ದಾರೆ.ಇದರ ಭಾಗವಾಗಿ ಮಂಗಳವಾರದಿಂದ ಪಕ್ಷದ ಎಲ್ಲ 64 ಶಾಸಕರ ಜತೆಗೆ ಮುಖಾಮುಖಿ ಮಾತುಕತೆ ಪ್ರಾರಂಭಿಸಿದ್ದಾರೆ. ಜತೆಗೆ ಪಕ್ಷದ ರಾಷ್ಟ್ರೀಯ ತಂಡವನ್ನು ಪುನಾರಚಿಸಿ, ಸಂಸ್ಥಾಪಕ ಸದಸ್ಯ ಕುಮಾರ್ ವಿಶ್ವಾಸ್ ಅವರಿಗೆ ದೊಡ್ಡ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪಕ್ಷದ ಸ್ಥಿತಿಗತಿ ತಿಳಿಯಲು ಪ್ರತಿ ಶಾಸಕರ ಜತೆ ಮುಖಾಮುಖಿ ಸಭೆಯನ್ನು ಕೇಜ್ರಿವಾಲ್ ಆರಂಭಿಸಿದ್ದಾರೆ. ಇದರ ಜತೆಗೆ ಪಕ್ಷಕ್ಕೆ ಬೆನ್ನೆಲುಬಿನಂತಿರುವ ಸ್ವಯಂ ಸೇವಕರೊಂದಿಗೂ ಸಮಾಲೋಚನೆ ನಡೆಸಲು ನಿರ್ಧರಿಸಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವ ಜಿದ್ದಿಗೆ ಬಿದ್ದಿದ್ದ ಕೇಜ್ರಿವಾಲ್ ಅವರು ತಳಮಟ್ಟದ ಕಾರ್ಯಕರ್ತರ ಜತೆ ಸಂಪರ್ಕ ಕಳೆದುಕೊಂಡಿದ್ದರು. ಇದೀಗ ಕಾರ್ಯಕರ್ತರನ್ನು ಮತ್ತೆ ಓಲೈಸಿ, ತಾವೊಬ್ಬ ಪಾರದರ್ಶಕ ಹಾಗೂ ಸಂಪರ್ಕಕಕ್ಕೆ ಸಿಗುವ ನಾಯಕ ಎಂಬ ಸಂದೇಶ ರವಾನಿಸಲು ಮುಂದಾಗಿದ್ದಾರೆ ಎಂದು ಟೀವಿ ಚಾನೆಲೊಂದು ವರದಿ ಮಾಡಿದೆ.