ಎರಡು ಕುಟುಂಬಗಳ ನಡುವಿನ ಜಮೀನು ವಿವಾದ ಶವಸಂಸ್ಕಾರಕ್ಕೆ ಅಡ್ಡಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ. ವಿವಾದಿತ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲಾಗದೆ ಕಳೆದ 3 ದಿನದಿಂದ ಮನೆ ಮುಂದೆ ಶವ ಇಟ್ಟು ಕುಳಿತಿದ್ದಾರೆ ಸಂಬಂಧಿಕರು.

ತುಮಕೂರು(ಡಿ.23): ಎರಡು ಕುಟುಂಬಗಳ ನಡುವಿನ ಜಮೀನು ವಿವಾದ ಶವಸಂಸ್ಕಾರಕ್ಕೆ ಅಡ್ಡಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ. ವಿವಾದಿತ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲಾಗದೆ ಕಳೆದ 3 ದಿನದಿಂದ ಮನೆ ಮುಂದೆ ಶವ ಇಟ್ಟು ಕುಳಿತಿದ್ದಾರೆ ಸಂಬಂಧಿಕರು.

ಮಾಚನಳ್ಳಿಯ ನಿವಾಸಿ ಚಿಕ್ಕಹನುಮಯ್ಯ ಡಿಸೆಂಬರ್​ 21ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೇ ಊರಿನ ರಂಗಸ್ವಾಮಯ್ಯ ಹಾಗೂ ಮೃತ ವ್ಯಕ್ತಿಯ ಕುಟುಂಬದ ನಡುವೆ ಜಮೀನು ವಿವಾದ ಇತ್ತು. ಆ ವಿವಾದಿತ ಜಮೀನಲ್ಲೇ ಶವಸಂಸ್ಕಾರಕ್ಕೆ ಸಿದ್ಧತೆ ಕೂಡಾ ಮಾಡಲಾಗಿತ್ತು. ಆದ್ರೆ ಇದಕ್ಕೆ ರಂಗಸ್ವಾಮಯ್ಯ ವಿರೋಧ ಒಡ್ಡಿದ್ದಾರೆ. ಪರಿಣಾಮ ಅಂತ್ಯಸಂಸ್ಕಾರ ಮಾಡದೆ ಶವವನ್ನು ಮನೆಮುಂದೆಯೇ ಇಟ್ಟು ಸಂಬಂಧಿಕರು ರೋಧಿಸುವಂತಾಗಿದೆ.

ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಆಗಮಿಸಿ ಜಮೀನು ದಾಖಲೆ ಪರಿಶೀಲಿಸಿದ್ದಾರೆ. ಆದರೆ ಜಮೀನಿನ ದಾಖಲೆಗಳೆಲ್ಲವೂ ರಂಗಸ್ವಾಮಿ ಹೆಸರಲ್ಲಿ ಇರುವುದರಿಂದ ಪೊಲೀಸರೂ ಕೂಡಾ ಕೈಚೆಲ್ಲಿದ್ದಾರೆ. ಇತ್ತ ಮೃತನ ಸಂಬಂಧಿಕರು ಕಳೆದ ಮೂರು ದಿನಗಳಿಂದ ಶವದ ಮುಂದೆ ಕುಳಿತಿದ್ದಾರೆ.