ಆಸ್ಪತ್ರೆ ಕಟ್ತೀವಿ ಅಂತಾ ಬಿಡಿಎದಿಂದ ಜಾಗ ಮಂಜೂರು ಮಾಡಿಸಿಕೊಂಡಿತು ಈ ಟ್ರಸ್ಟ್. ಇದಕ್ಕಾಗಿ ಆ ಜಾಗವನ್ನೇ ಒತ್ತೆಯಿಟ್ಟು ಕೊಟ್ಯಂತರ ರೂಪಾಯಿ ಸಾಲ ಪಡೀತು. ಕೊನೆಗೆ ಆಸ್ಪತ್ರೆ ನಿರ್ಮಿಸದೇ ಅಮೆರಿಕಾ ಮೂಲದ ಆಸ್ಪತ್ರೆಗೆ ಮಾರಾಟ ಮಾಡಿತು. ಆಗ ಬಿಡಿಎನಲ್ಲಿ ಕಮಿಷನರ್‌ಗಳಾಗಿದ್ದ ಐಎಎಸ್​ ಅಧಿಕಾರಿಗಳಿಗೆ ಈ ಪ್ರಕರಣ ಈಗ ಕಂಟಕವಾಗುತ್ತಿದೆ.

ಬೆಂಗಳೂರು(ಜುಲೈ 21): ಉದ್ಯಾನನಗರಿಯಲ್ಲಿ ಯಾರ್ಯಾರದ್ದೋ ಜಾಗವನ್ನು ಇನ್ಯಾರೋ ಮಾರಾಟ ಮಾಡಿ ಮೋಸ ಮಾಡುವ ಪ್ರಕರಣಗಳಿಗೆ ಕೊರತೆ ಏನೂ ಇಲ್ಲ. ಅಂದಹಾಗೆ ಇಲ್ಲಿ ಪಂಗನಾಮ ಹಾಕಿರೋದು ಸಿ.ಆರ್​.ಜೈನ್​ ಚಾರಿಟಬಲ್​ ಟ್ರಸ್ಟ್​. ಪಂಗನಾಮ ಹಾಕಿಸ್ಕೊಂಡಿರೋದು ಬಿಡಿಎ.

ಏನಿದು ಈ ಪ್ರಕರಣ..?
ಬೆಂಗಳೂರಿನ ಜ್ಞಾನಭಾರತಿ ಬಡಾವಣೆಯಲ್ಲಿ ಆಸ್ಪತ್ರೆ ನಿರ್ಮಿಸುವ ಸಂಬಂಧ 2007ರಲ್ಲಿ ಸಿಆರ್ ಜೈನ್ ಚಾರಿಟಬಲ್ ಟ್ರಸ್ಟ್‌'ಗೆ ಬಿಡಿಎ 2,580 ಸ್ಕ್ವಯರ್​ ಫೀಟ್​ ವಿಸ್ತೀರ್ಣದ ಸಿ.ಎ.ನಿವೇಶನ ಮಂಜೂರು ಮಾಡಿತ್ತು. ತನ್ನ ಬಳಿ ಹಣ ಇಲ್ಲದಿದ್ದರೂ, ಆಸ್ಪತ್ರೆಗೆ ನಿರ್ಮಾಣಕ್ಕೆ ಮುಂದಾದ ಟ್ರಸ್ಟ್, ಸೈಟ್‌'ನ್ನೇ ಒತ್ತು ಇಟ್ಟು ಬ್ಯಾಂಕ್‌'ನಲ್ಲಿ ಸಾಲ ಪಡೆಯೋದಕ್ಕೆ ಎನ್​ಒಸಿ ಕೊಡಿ ಅಂತ ಬಿಡಿಎಗೆ ಮತ್ತೊಂದು ಅರ್ಜಿ ಸಲ್ಲಿಸಿತು. ಆಸ್ಪತ್ರೆ ನಿರ್ಮಿಸಲು ಟ್ರಸ್ಟ್​​ 44 ಕೋಟಿ ರೂ ಯೋಜನೆ ರೂಪಿಸಿತು. ಇಂಡಸ್'ವೆಸ್ಟ್'ಸೈಡ್​ ಹೆಲ್ತ್​'ಕೇರ್​ ಪ್ರೈವೈಟ್​ ಲಿಮಿಟೆಡ್​​ ಜತೆ ಜಂಟಿ ಅಭಿವೃದ್ಧಿ ಒಪ್ಪಂದ ಮಾಡ್ಕೊಳ್ಳೋದಿಕ್ಕೆ 22 ಕೋಟಿ ರೂಪಾಯಿ ಬೇಕು ಎಂದು ಅರ್ಜಿಯಲ್ಲಿ ಕೇಳಿತ್ತು. ಕೊನೆಗೆ ಕೆಎಸ್​'ಎಫ್​'ಸಿ ಮತ್ತು ಇನ್ನೆರಡು ಬ್ಯಾಂಕ್'​​ಗಳಿಂದ ಒಟ್ಟು 22 ಕೋಟಿ ರೂಪಾಯಿ ಮೊತ್ತದಲ್ಲಿ ಸಾಲ ಪಡೆಯಲಿಕ್ಕೆ ಬಿಡಿಎ ಎನ್'​ಒಸಿ ಕೊಡ್ತು.

ಪಂಗನಾಮ:
22 ಕೋಟಿ ಸಾಲ ಪಡೆದ ಬಳಿಕವೂ ಟ್ರಸ್ಟ್ ಆ ಜಾಗದಲ್ಲಿ ಆಸ್ಪತ್ರೆ ಕಟ್ಟಲಿಲ್ಲ. ಸಾಲವನ್ನೂ ರೀಪೇಮೆಂಟ್ ಮಾಡ್ಲಿಲ್ಲ. ಹೀಗಾಗಿ ಬ್ಯಾಂಕ್‌'ಗಳು ಈ ಪ್ರಕರಣವನ್ನು ಎನ್​ಪಿಎ ಪಟ್ಟಿಯಲ್ಲಿ ಸೇರಿಸಿದವು. ಬ್ಯಾಂಕ್​'​ನಿಂದ ಎನ್'​ಪಿಎ ಪಟ್ಟಿ ಸೇರುತ್ತಿದ್ದಂತೆ, ಜೈನ್​ ಚಾರಿಟಬಲ್​ ಟ್ರಸ್ಟ್​ ಆ ಸಿ.ಎ. ನಿವೇಶನವನ್ನು ಅಮೆರಿಕಾ ಮೂಲದ ಆಸ್ಪತ್ರೆಗೆ ಮಾರಾಟ ಮಾಡಿದೆ. ಅಚ್ಚರಿ ಅಂದ್ರೆ ಜಾಗ ಮಾರಾಟ ಮಾಡೋದಿಕ್ಕೆ ಟ್ರಸ್ಟ್'​​ಗೆ ಅಧಿಕಾರ ಕೊಟ್ಟಿದು ಬಿಡಿಎಯೇ.

ಪ್ರಕರಣದ ಬೆನ್ನತ್ತಿದ ಮಾಹಿತಿ ಹಕ್ಕು ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ, ಎಸಿಬಿಗೆ ದೂರು ಕೊಟ್ಟರು. ತನಿಖೆ ನಡೆಸಿದ ಎಸಿಬಿ ನಿಯಮಾವಳಿಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳದ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಇಲಾಖೆಯು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಬಿಡಿಎಗೆ ಪತ್ರ ಬರೆದಿದೆ. ಹೀಗಾಗಿ ಅಂದು ಬಿಡಿಎ ಕಮಿಷನರ್​ ಆಗಿದ್ದ ಶಂಕರಲಿಂಗೇಗೌಡ, ಐಎಎಸ್​ ಅಧಿಕಾರಿ ಸಿದ್ದಯ್ಯ, ಭರತ್'​ಲಾಲ್​ ಮೀನಾ, ಶ್ಯಾಮ್​ ಭಟ್​, ರಾಜ್'​ಕುಮಾರ್​ ಖತ್ರಿ ಅವ್ರಿಗೆ ಈ ಪ್ರಕರಣ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆಯಿದೆ.

- ಜಿ. ಮಹಾಂತೇಶ್​, ಸುವರ್ಣನ್ಯೂಸ್