ಕೋಲ್ಕತಾ : ದೇಶದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ.  ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಅಬ್ಬರ ಹೆಚ್ಚಿದ್ದು, ಲೋಕಸಭಾ ಚುನಾವಣೆಯೂ ಕೂಡ ಸಮೀಪಿಸುತ್ತಿದೆ. 

ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಕಟು ವಿರೋಧಿಗಳಾಗಿರುವ ಸಿಪಿಎಂನಿಂದ ಶಾಸಕರೋರ್ವರು  ಟಿಎಂಸಿ ಸೇರ್ಪಡೆಯಾಗುವ ಮೂಲಕ ಶಾಕ್ ನೀಡಿದ್ದಾರೆ.

ಮುರ್ಶಿದಬಾದ್ ನ ಶಾಸಕ ಕನೈ ಚಂದ್ರ ಮಂಡಲ್ ಮುರ್ಶಿದಾಬಾದ್ ನಲ್ಲಿ ನಡೆದ ಟಿಎಂಸಿ ಕಾರ್ಯಕ್ರಮವೊಂದರಲ್ಲಿ ಸಚಿವ ಸುವೇಂದು ಅಧಿಕರೈ ನೇತೃತ್ವದಲ್ಲಿ ಪಕ್ಷಕ್ಕೆ ಸೇರಿದ್ದಾರೆ.   ಮಂಡಲ್ ಅವರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ ಸಚಿವ ಸುವೇಂದು,  ಮಂಡಲ್ ಸೇರ್ಪಡೆ ತಮ್ಮ ಪಕ್ಷದ ಪ್ರಗತಿಗೆ ಹೆಚ್ಚಿನ ಅನುಕೂಲ ಒದಗಿಸುವ ಭರವಸೆ ಇದೆ ಎಂದು ಹೇಳಿದ್ದಾರೆ. 

ಇನ್ನು ನೂತನವಾಗಿ ಪಕ್ಷಕ್ಕೆ ಸೇರಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡಲ್  ಸರ್ಕಾರದ ಬೆಂಬಲವಿಲ್ಲದೇ ಕೆಲಸ ಮಾಡಲು ಸಾಧ್ಯವಿಲ್ಲ. ಜನರಿಗೆ ಸೇವೆ ಸಲ್ಲಿಸುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಆಡಳಿತ ಪಕ್ಷವನ್ನು ಸೇರ್ಪಡೆಯಾಗಿದ್ದಾಗಿ ಹೇಳಿದ್ದಾರೆ.  ಸದ್ಯ ಶಾಸಕನಾಗಿ ಮಾಡಿದ ಕೆಲಸಕ್ಕಿಂತ ಹೆಚ್ಚಿನ ಕೆಲಸ ನಿರ್ವಹಿಸಬೇಕು ಎನ್ನುವುದು ತಮ್ಮ ಇಚ್ಛೆಯಾಗಿದ್ದು, ಇದೇ ಟಿಎಂಸಿ ಸೇರ್ಪಡೆಗೆ ಕಾರಣ ಎಂದು ಹೇಳಿದ್ದಾರೆ. 

2016ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯನ್ನು ಮಂಡಲ್ 38 ಸಾವಿರ ಮತಗಳಿಂದ ಸೋಲಿಸಿ ವಿಜಯಿಯಾಗಿದ್ದರು.