ಜೈಪುರ್(ಆ.1): ಗೋಹತ್ಯೆ ಭಯೋತ್ಪಾದನೆಗಿಂತ ದೊಡ್ಡ ಅಪರಾಧ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಅಭಿಪ್ರಾಯಪಟ್ಟಿದ್ದಾರೆ. ಉಗ್ರರು ತಮ್ಮ ಹಿಂಸಾ ಕೃತ್ಯದಿಂದ ಕೇವಲ ೫ ಜನರನ್ನು ಕೊಲ್ಲಬಹುದು, ಆದರೆ ಗೋಹತ್ಯೆ ಈ ದೇಶದ ಕೋಟ್ಯಾಂತರ ಜನರ ಭಾವನೆಗಳನ್ನು ಕೊಲ್ಲುತ್ತದೆ ಎಂದು ಅಹುಜಾ ಹೇಳಿದ್ದಾರೆ.

ಹಿಂದೂಗಳಿಗೆ ಗೋವು ತಾಯಿ ಇದ್ದಂತೆ. ಯಾರಾದರೂ ತಾಯಿಯ ಜೊತೆ ಅಸಭ್ಯವಾಗಿ ನಡೆದುಕೊಂಡರೆ ಅವರನ್ನು ಸುಮ್ಮನೆ ಬಿಡಲು ಹೇಗೆ ಸಾಧ್ಯ ಎಂದು ಅಹುಜಾ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೋಹತ್ಯೆ ಮಾಡುವವರನ್ನು ಉಗ್ರವಾದಿಗಳೆಂದು ಪರಿಗಣಿಸುವಂತೆ ಅಹುಜಾ ಆಗ್ರಹಿಸಿದ್ದಾರೆ. ಅಲ್ಲದೇ ಗೋಹತ್ಯೆ ತಡೆಯಲು ವಿಶೇಷ ಪೊಲೀಸ್ ತುಕಡಿ ರಚಿಸುವಂತೆಯೂ ಅವರು ಸಲಹೆ ನೀಡಿದ್ದಾರೆ.

ಅಕ್ರಮ ಗೋವು ಸಾಗಾಣೆ ಮಾಡುವವರ ಮೇಲೆ ಹಲ್ಲೆ ಮಾಡುವುದು ತಪ್ಪು ಎಂದಿರುವ ಅಹುಜಾ, ಕೇವಲ ನಾಲ್ಕು ಏಟು ಹೊಡೆಯುವ ಬದಲು ಆ ಪಾಪಿಯನ್ನು ಮರಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಕರೆ ಮಾಡಿ, ಪೊಲೀಸರು ಬಂದು ಉಗ್ರವಾದಿಯನ್ನು ಬಂಧಿಸಿ ಕರೆದೊಯ್ಯುತ್ತಾರೆ ಎಂದು ಅಹುಜಾ ಹೇಳಿದ್ದಾರೆ.