Asianet Suvarna News Asianet Suvarna News

ರೈತನ ಪಾಲಿನ ‘ದೌ’ರ್ಭಾಗ್ಯವಾಗಿದೆ ಕೃಷಿ ಭಾಗ್ಯ

ಕಾಂಗ್ರೆಸ್​ ಸರ್ಕಾರದ ಭಾಗ್ಯಗಳ ಪೈಕಿ ಕೃಷಿ ಭಾಗ್ಯ ನುಂಗುಬಾಕರ ಪಾಲಿನ ಕಾಮಧೇನು ಆಗಿದೆ. ಯಾಕಂದರೆ ಈ ಕೃಷಿ ಭಾಗ್ಯದಲ್ಲಿ ರೈತರ ಕಲ್ಯಾಣಕ್ಕಾಗಿ ಪಾಲಿಹೌಸ್​, ಶೇಡ್​ ಹೌಸ್​, ಕೃಷಿ ಗುಂಡಿ, ಹನಿನೀರಾವರಿ, ಬೆಳೆಗೆ ಸೇರಿದಂತೆ ಲಕ್ಷಾಂತರ ರೂಪಾಯಿ ಸಹಾಯಧನ ನೀಡಲಾಗುತ್ತೆ. ಪರಿಶಿಷ್ಟಜಾತಿ ಮತ್ತು ಪಂಗಡದ ರೈತರಿಗೆ ಶೇಕಡಾ 90 ಹಾಗೂ ಸಾಮಾನ್ಯರಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತೆ. ಅಂದ್ರೆ ಈ ಯೋಜನೆಯಡಿ ಒಬ್ಬ ರೈತನಿಗೆ 25ರಿಂದ 35 ಲಕ್ಷದವರೆಗೆ ಸಹಾಯಧನ ಸಿಗುತ್ತೆ. ಈ ಸಬ್ಸಿಡಿ ನೇರವಾಗಿ ರೈತನಿಗೆ ಸಿಗುತ್ತಿದೆ ರೈತ ಉದ್ಧಾರ ಆಗೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಈ ಕೃಷಿ ಭಾಗ್ಯ ಇವತ್ತು ರೈತರ ದೌರ್ಭಾಗ್ಯ ಆಗಿ ಪರಿಪಣಿಮಿಸಿದೆ.

Cover Story Reveal Agriculture department corruption

ಕಾಂಗ್ರೆಸ್​ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಭಾಗ್ಯಗಳಿಗೆ ಬರವೇ ಬರಲಿಲ್ಲ. ಒಂದರ ಹಿಂದೆ ಭಾಗ್ಯಗಳನ್ನ ಘೋಷಿಸುತ್ತಲೇ ಇದೆ. ಆದರೆ ದೌರ್ಭಾಗ್ಯ ಅಂದ್ರೆ ಈ ಭಾಗ್ಯಗಳು ಫಲಾನುಭವಿಗಳ ಭಾಗ್ಯದ ಬಾಗಿಲು ತೆರೆಯೋ ಬದಲು ಭ್ರಷ್ಟರ ಸೌಭಾಗ್ಯ ಆಗ್ತಿದೆ. ಇದಕ್ಕೆ ಈಗ ಮತ್ತೊಂದು ಸೇರ್ಪಡೆಯೇ ಕೃಷಿ ಭಾಗ್ಯ ಯೋಜನೆ. ಈ ಯೋಜನೆಯಂತೂ ಲಂಚಬಾಕ ಅಧಿಕಾರಿಗಳ ಪಾಲಿ ಅದೃಷ್ಟ ದೇವತೆಯಾಗಿದೆ. ಅಮಾಯಕ ರೈತರಿಗೆ ಭಾಗ್ಯದ ಆಸೆ ತೋರಿಸಿ ತೋಟಗಾರಿಕಾ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬಕ್ರಾ ಮಾಡಿದ್ದಾರೆ. ಈ ಕಟು ಸತ್ಯ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ನಡೆಸಿದ ತನಿಖೆಯಲ್ಲಿ ಬಯಲಾಗಿದೆ. ಈ ಕೃಷಿ ಭಾಗ್ಯ ಯೋಜನೆಯಲ್ಲಿ ಭಾರೀ ಹಗರಣ ನಡೆದಿರೋದಕ್ಕೆ ಪಕ್ಕಾ ಸಾಕ್ಷಿಗಳೂ ಲಭ್ಯವಾಗಿವೆ.

ಕೃಷಿ ಭಾಗ್ಯ ಅನ್ನೋ ಕಾಮಧೇನು

ಕಾಂಗ್ರೆಸ್​ ಸರ್ಕಾರದ ಭಾಗ್ಯಗಳ ಪೈಕಿ ಕೃಷಿ ಭಾಗ್ಯ ನುಂಗುಬಾಕರ ಪಾಲಿನ ಕಾಮಧೇನು ಆಗಿದೆ. ಯಾಕಂದರೆ ಈ ಕೃಷಿ ಭಾಗ್ಯದಲ್ಲಿ ರೈತರ ಕಲ್ಯಾಣಕ್ಕಾಗಿ ಪಾಲಿಹೌಸ್​, ಶೇಡ್​ ಹೌಸ್​, ಕೃಷಿ ಗುಂಡಿ, ಹನಿನೀರಾವರಿ, ಬೆಳೆಗೆ ಸೇರಿದಂತೆ ಲಕ್ಷಾಂತರ ರೂಪಾಯಿ ಸಹಾಯಧನ ನೀಡಲಾಗುತ್ತೆ. ಪರಿಶಿಷ್ಟಜಾತಿ ಮತ್ತು ಪಂಗಡದ ರೈತರಿಗೆ ಶೇಕಡಾ 90 ಹಾಗೂ ಸಾಮಾನ್ಯರಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತೆ. ಅಂದ್ರೆ ಈ ಯೋಜನೆಯಡಿ ಒಬ್ಬ ರೈತನಿಗೆ 25ರಿಂದ 35 ಲಕ್ಷದವರೆಗೆ ಸಹಾಯಧನ ಸಿಗುತ್ತೆ. ಈ ಸಬ್ಸಿಡಿ ನೇರವಾಗಿ ರೈತನಿಗೆ ಸಿಗುತ್ತಿದೆ ರೈತ ಉದ್ಧಾರ ಆಗೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಈ ಕೃಷಿ ಭಾಗ್ಯ ಇವತ್ತು ರೈತರ ದೌರ್ಭಾಗ್ಯ ಆಗಿ ಪರಿಪಣಿಮಿಸಿದೆ.

ರೈತನಿಗೆ ಸೇರಬೇಕಾದ  ಭಾರೀ ಪ್ರಮಾಣದ ಸಬ್ಸಿಡಿ ಹಣವನ್ನ ನುಂಗಿ ಹಾಕುವ ಭ್ರಷ್ಟ ಅಧಿಕಾರಿಗಳ ದುಷ್ಟ ಯೋಚನೆ ಈ ಭಾರೀ ಹಗರಣಕ್ಕೆ ನಾಂದಿ ಹಾಡಿದೆ. ಈ ಹಗರಣ ರಾಜ್ಯಾದ್ಯಂತ ನಡೆದಿದೆ. ಆದ್ರೆ ನಾವು ತನಿಖೆಗಾಗಿ ರಾಜಧಾನಿ ಬೆಂಗಳೂರಿನ ಪಕ್ಕದಲ್ಲೇ ಇರೋ ಮಂಡ್ಯ ಹಾಗೂ ತುಮಕೂರು ಜಿಲ್ಲೆಯನ್ನ ಆರಿಸಿಕೊಂಡೆವು. ಅಲ್ಲಿ ಈ ಭಾರೀ ಹಗರಣದ ತನಿಖೆ ಮಾಡಿದಾಗ ಬ್ರಹ್ಮಾಂಡ ಭ್ರಷ್ಟಾಚಾರವೇ ಬಯಲಾಗಿದೆ. ಈ ಹಗರಣದಲ್ಲಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಉಪನಿರ್ದೇಶಕರೇ ನೇರವಾಗಿ ಪಾಲ್ಗೊಂಡಿರೋದು ಸ್ಪಷ್ಟವಾಗಿ ಗೋಚರವಾಗುತ್ತೆ.

ದುಷ್ಟಕೂಟದ ಕೆಟ್ಟ ಷಡ್ಯಂತ್ರ

ಕೃಷಿ ಭಾಗ್ಯ ಯೋಜನೆಯ ಸಹಾಯಧನವನ್ನ ಅನಾಮತ್ತಾಗಿ ನುಂಗೋ ಯೋಜನೆಯನ್ನ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ  ಫ್ಯಾಬ್ರಿಕೇಟರ್ಸ್ ಹಾಕಿಕೊಂಡ್ರು. ಅವರು ಅಮಾಯಕರ ರೈತರ ಬಳಿ ಹೋಗಿ ಅವರ ಜಮೀನನ್ನ 5ವರ್ಷಕ್ಕೆ ಲೀಸ್​ಗೆ ಹಾಕಿಕೊಂಡು, ರೈತನಿಗೆ ವರ್ಷಕ್ಕೆ ಕೇವಲ 20-30 ಸಾವಿರ ರೂಪಾಯಿ ಕೊಟ್ಟು, ಆತನಿಂದ ಭೂದಾಖಲೆ ಪಡೆದು, ಖಾಲಿ ಪತ್ರಗಳಿಗೆ ಸಹಿ ಹಾಕಿಸಿ, ರೈತನ ಹೆಸರಲ್ಲೇ ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಹಾಕಿ, ಅತ್ಯಂತ ಕಳಪೆ ಗುಣಮಟ್ಟದ ಪರಿಕರಗಳ ಬಳಸಿ ಪಾಲಿಹೌಸ್​/ನೆರಳಿನ ಮನೆ ನಿರ್ಮಿಸಿ, ಪರಿಶೀಲನೆಯ ನಾಟಕ ಆಡಿ, ಸಹಾಯ ಧನ ಪಡೆದು ಜೈ ಅಂತಿದ್ದಾರೆ.

ಇವರು ನಿರ್ಮಿಸೋ ಪಾಲಿಹೌಸ್​ಗಳು ಒಂದೇ ವರ್ಷಕ್ಕೆ ಚಿಂದಿ ಚಿತ್ರಾನ್ನ ಆಗಿರುತ್ತೆ. ಪ್ಲಾಸ್ಟಿಕ್​ ಹಾಳೆಗಳೆಲ್ಲಾ ಹರಿದು, ನೆಟ್​ಗಳೆಲ್ಲಾ ಚಿಂದಿಯಾಗಿ, ಕಂಬಗಳೆಲ್ಲಾ ಮುರಿದು ಬಿದ್ದು, ಹನಿನೀರಾವರಿ ಪೈಪ್​ಗಳು ಒಡೆದು ಹೋಗಿವೆ. ಇದು ನಾವು ಭೇಟಿಕೊಟ್ಟ  ಮಂಡ್ಯ ಹಾಗೂ ತುಮಕೂರಿನ ಹೆಚ್ಚಿನ ನೆರಳಿನ ಮನೆಗಳ ದುಸ್ಥಿತಿಯಾಗಿವೆ. ಇಲ್ಲಿ ರೈತ ಮತ್ತೆ ಬೆಳೆ ಬೆಳೆಯಬೇಕಾದ್ರೆ ಮತ್ತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲೇ ಬೇಕು. ಹಾಗಾಗಿ ರೈತನ ಪಾಲಿಗೆ ಕೃಷಿ ಭಾಗ್ಯ ದೌರ್ಭಾಗ್ಯವಾಗಿ ಪರಿಣಮಿಸಿದೆ.

ಬೆಳೆ ಇಲ್ಲ, ಹಣ ಗುಳುಂ

2015-16ನೇ ಸಾಲಿನಲ್ಲಿ ಜಾರಿ ಬಂದ ಈ ಕೃಷಿ ಭಾಗ್ಯ ಯೋಜನೆಯಲ್ಲಿ ನಾನಾ ರೀತಿಯಲ್ಲಿ ವಂಚನೆ ನಡೆದಿದೆ. ಯಾಕಂದರೆ ಈ ಹಗರಣದಲ್ಲಿ ಅಧಿಕಾರಿಗಳೇ ಏಜೆಂಟರಾಗಿದ್ದಾರೆ. ಅವರೇ ತಮ್ಮ ಕುಟುಂಬದ ಹೆಸರಲ್ಲಿ ಪಾಲಿಹೌಸ್​ಗಳನ್ನ ನಿರ್ಮಿಸಿಕೊಂಡು ದುಡ್ಡು ಹೊಡೆದಿದ್ದಾರೆ. ಅಧಿಕಾರಿಗಳು ರೈತನ ದಾರಿ ತಪ್ಪಿಸಿ, ಸುಳ್ಳು ಮಾಹಿತಿ ಕೊಟ್ಟು ಪಾಲಿಹೌಸ್​ ನಿರ್ಮಿಸೋ ಆಸೆ ತೋರಿಸಿ, ಸಹಾಯಧನದ ವಿಚಾರವನ್ನ ಮುಚ್ಚಿಟ್ಟು ಭರ್ಜರಿಯಾಗಿ ಲೂಟಿ ಹೊಡೆದ ಉದಾಹರಣೆ ತಿಪಟೂರು, ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ. ರೈತನಿಗೆ ಒಂದು ರೂಪಾಯಿಯೂ ಕೊಡದೆ, ಬೆಳೆ ವಿಮೆಯನ್ನೂ ನುಂಗಿ ಹಾಕಿರೋ ಉದಾಹರಣೆಯೂ ಇದೆ.

ಲಂಚಕೊಟ್ರೆ ವರ್ಕ್​ ಆರ್ಡರ್​

ಈ ತೋಟಗಾರಿಕೆ ಇಲಾಖೆ ಭ್ರಷ್ಟ ಅಧಿಕಾರಿಗಳು ಎಂಥಾ ದುಷ್ಟರೆಂದರೆ, ಇವರು ವರ್ಕ್​ ಆರ್ಡರ್​ ಕಾಪಿಯನ್ನ ಮೊದಲೇ ರೆಡಿ ಮಾಡಿಟ್ಟುಕೊಂಡಿರುತ್ತಾರೆ. ಆದರೆ ಅದರಲ್ಲಿ ರೈತರ ಹೆಸರನ್ನು ಖಾಲಿ ಬಿಟ್ಟಿರ್ತಾರೆ. ಯಾವ ರೈತ 3-6 ಲಕ್ಷ ಲಂಚ ಕೊಡ್ತಾನೋ ಆತನ ಹೆಸರನ್ನು ಅಲ್ಲಿ  ತುಂಬಿಸಿ ಕೊಡ್ತಾರೆ. ಇದು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ ಇದಕ್ಕೆ ಪಕ್ಕಾ ಸಾಕ್ಷಿ ನಮ್ಮ ಬಳಿ ಇದೆ. ಮಂಡ್ಯದ ದುದ್ದ ಹೋಬಳಿಯ ಸಂದೀಪ್​ ಅನ್ನುವವರು ಕೃಷಿಭಾಗ್ಯ ಯೋಜನೆಗೆ ಅರ್ಜಿ ಹಾಕ್ತಾರೆ.

ಆದರೆ ಲಂಚಕೊಡದ ಕಾರಣ ಅವರಿಗೆ ವರ್ಕ್​ ಆರ್ಡರ್​ ಅಧಿಕಾರಿಗಳು ಕೊಡಲ್ಲ. ಆಗ ಅವರು 29 ಅಕ್ಟೋಬರ್​ 2016ರಂದು ನೇರವಾಗಿ ತೋಟಗಾರಿಕಾ ಸಚಿವರಿಗೇ ಪತ್ರ ಬರೀತಾರೆ. ಸಚಿವರ ಶಿಫಾರಸು ಬಂದ ತಕ್ಷಣ ಸಂದೀಪ್​ಗೆ ತೋಟಗಾರಿಕಾ ಉಪನಿರ್ದೇಶಕರು ವರ್ಕಆರ್ಡ್​ರ್​ ಕೊಡ್ತಾರೆ. ಆದ್ರೆ ಆ ವರ್ಕ ಆರ್ಡ್​ರ್​ನ ದಿನಾಂಕ ಮಾತ್ರ 25 ಫೆಬ್ರವರಿ 2016 ಅಂತ ಇರುತ್ತೆ. ಇದು ತೋಟಗಾರಿಕಾ ಡಿಡಿ ಮೊದಲೇ ವರ್ಕ್​ ಆರ್ಡ್​ರ್​ ರೆಡಿ ಇಟ್ಟಿರೋದಕ್ಕೆ ಸಾಕ್ಷಿ. ಈ ಎಲ್ಲಾ ಫೈಲ್​ಗಳ ಸಮಗ್ರ ತನಿಖೆ ನಡೆಸಿದಾಗ ಈ ಎಲ್ಲಾ ಅಂಶಗಳು ಬಯಲಿಗೆ ಬರ್ತವೆ.

ಅಂದೆ ಅರ್ಜಿ, ಅಂದೇ ಹಣಪಾವತಿ

ಇನ್ನು ತುಮಕೂರಿನ ತಿಪಟೂರಿನ ರೈತರು ಎಷ್ಟು ಅದೃಷ್ಟವಂತರೆಂದರೆ ಅವರು ಕೃಷಿಭಾಗ್ಯದ ಸಹಾಯಧನಕ್ಕೆ ಯಾವತ್ತು ಅರ್ಜಿ ಹಾಕಿದ್ದಾರೋ ಅಂದೇ ಅವರಿಗೆ ಕೃಷಿ ಇಲಾಖೆಯಿಂದ ಹಣ ಸಂದಾಯವೂ ಆಗಿದೆ. ಇದಕ್ಕೂ ಸಾಕ್ಷಿ ನಮ್ಮ ಬಳಿ ಇದೆ. ಸರ್ಕಾರಿ ಕಚೇರಿಯಲ್ಲಿ ಇಂಥಾ ಬೆಳವಣಿಗೆ ನಡೆದಿರೋದು ಒಂದು ವಿಸ್ಮಯವೇ ಸರಿ. ಅಲ್ಲದೆ ರೈತರ ಅರ್ಜಿಗಳ ಫೈಲ್​ಗಳನ್ನ ತೆರೆದು ನೋಡಿದ್ರೆ ಬೋಗಸ್​ ದಾಖಲೆಗಳ ಸರಣಿಯೇ ಸಿಗುತ್ತೆ.

ಎಲ್ಲಾ ರೈತರಿಗೆ  ಒಬ್ಬನೇ ಫ್ಯಾಬ್ರಿಕೇಟರ್​, ನರ್ಸರಿಯವ, ಬೀಜಮಾರಾಟಗಾರ ಸಲಕರಣೆಗಳನ್ನ ಮಾರಾಟ ಮಾಡಿರೋ ಬಿಲ್​ಗಳಿವೆ. ಅಲ್ಲದೆ ಒಂದೇ ಪಾಲಿಹೌಸ್​ ನಾನಾ ರೈತರನ್ನ ನಿಲ್ಲಿಸಿ ಫೋಟೋ ತೆಗೆದ ಉದಾಹರಣೆಗಳೂ ಇವೆ. ಇನ್ನು ಮಣ್ಣು ನೀರಿನ ಮಾದರಿಯ ನಕಲಿ ಸರ್ಟಿಫಿಕೇಟ್​ ಕೊಡೋ ಏಜನ್ಸಿಯೂ ಹುಟ್ಟಿಕೊಂಡಿದೆ. ನೀವು ಮಣ್ಣು ನೀರು ಕೊಡಬೇಕಾಗಿಯೇ ಇಲ್ಲ, 800 ರೂಪಾಯಿ ಕೊಟ್ರೆ ಸಾಕು ಕೆಲವೇ ಗಂಟೆಗಳಲ್ಲಿ ನಿಂತಲ್ಲಿಗೆ ಸರ್ಟಿಫಿಕೇಟ್​ ರೆಡಿಯಾಗಿ ಬರುತ್ತೆ. ಇಂಥಾ ನಕಲಿ ಸರ್ಟಿಫಿಕೇಟ್​ಗಳನ್ನೇ ನಾವು ರೈತರ ಕೃಷಿ ಭಾಗ್ಯ ಫೈಲ್​ಗಳಲ್ಲಿ ಕಂಡೆವು

ಶೇಡ್​​ ಹೌಸ್ ಮಂಗಮಾಯ!

ಇದು ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದಿರೋ ಅಚ್ಚರಿ. ಇಲ್ಲಿ ಭ್ರಷ್ಟ ಫ್ಯಾಬ್ರಿಕೇಟರ್​ ಹಾಗೂ ಅಧಿಕಾರಿಗಳು ರೈತರಿಗೆ ಮೋಸ ಮಾಡಿ ಪಾಲಿಹೌಸ್​ ನಿರ್ಮಿಸಿದ್ದಾರೆ. ಸಹಾಯಧನ ಬರುವವರೆಗೆ ಪಾಲಿಹೌಸನ್ನ ಹಾಗೆ ಬಿಟ್ಟು ಸಹಾಯಧನ ಕೈಗೆ ಸಿಕ್ಕಿದ್ದೇ ತಡ, ಪಾಲಿಹೌಸನ್ನೇ ಕಿತ್ತುಕೊಂಡು ಹೋಗಿ ಇನ್ನೊಂದು ಕಡೆ ಹಾಕಿದ್ದಾರೆ. ಇದೆಲ್ಲಾ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಇಲ್ಲದೆ ನಡೆಯಲು ಸಾಧ್ಯವೇ ಇಲ್ಲ.

ಮಾಹಿತಿ ಕೇಳಿದ್ರೆ ಅರೆಸ್ಟ್​ ಮಾಡ್ತಾರಂತೆ

ಈ ಭಾರೀ ಹಗರಣದ ತನಿಖೆಯ ವೇಳೆ ನಾವು ಅಧಿಕಾರಿಗಳಿಂದ ಬೆದರಿಕೆಯನ್ನೂ ಕೇಳಬೇಕಾಯಿತು. ಚಿಕ್ಕನಾಯಕನಹಳ್ಳಿಯ ತೋಟಗಾರಿಕಾ ಅಧಿಕಾರಿ ಎ.ಎಸ್​ ಪುಷ್ಪಲತಾ ಅಂತು ಮಾಹಿತಿ ಕೇಳಿದ್ದಕ್ಕೆ ಅರೆಸ್ಟ್​ ಮಾಡ್ತೀನಿ ಅಂತ ಧಮ್ಕಿ ಬೇರೆ ಹಾಕಿದ್ರು. ತಾವು ಲಂಚ ಪಡೆದ ಬಗ್ಗೆ, ಹಿಂದೆ ಅಧಿಕಾರಿದಲ್ಲಿದ್ದ ತಿಪಟೂರಿನಲ್ಲಿ ಹಗರಣ ಮಾಡಿದ್ದು ಬಯಲು ಮಾಡ್ತೀವಿ ಅಂತ ಭಯ ಬಿದ್ದು ಭಾರೀ ರಂಪಾಟ ಮಾಡಿದ್ರು. ಜಿಲ್ಲಾ ಕೃಷಿ ಹಾಗೂ ತೋಟಗಾರಿಕಾ ಉಪನಿರ್ದೇಶಕರು ಕೃಷಿ ಭಾಗ್ಯದ ಬಗ್ಗೆ  ಆರ್​ಟಿಐ ಅರ್ಜಿ ಹಾಕಿದ್ರೂ ಯಾವ ಮಾಹಿತಿಯನ್ನೂ ಒದಗಿಸುತ್ತಿಲ್ಲ. ಒದಗಿಸಿದ್ರೂ ಅಪೂರ್ಣವಾಗಿರೋ ಮಾಹಿತಿ ನೀಡಿ ಕಾನೂನು ಉಲ್ಲಂಘಿಸುತ್ತಿದ್ದಾರೆ. ಹೀಗೆ ನುಂಗುಬಾಕ ಅಧಿಕಾರಿಗಳು ಕೃಷಿ ಭಾಗ್ಯಯೋಜನೆಯನ್ನು ಭ್ರಷ್ಟಾಚಾರದ ಕೂಪ ಮಾಡಿ ಭಾಗ್ಯ ಯೋಜನೆಗೇ ಕಪ್ಪು ಮಸಿ ಬಳಿದಿದ್ದಾರೆ. ಈ ಬಗ್ಗೆ ಕೃಷಿ ಆಯುಕ್ತರ ಬಳಿ ಮಾಹಿತಿ ಕೇಳಿದ್ರೆ ಅವರು ತನಿಖೆ ಮಾಡ್ತೀವಿ ಅಂತ ಮಾತ್ರ ಹೇಳ್ತಾರೆ.

ವರದಿ: ವಿಜಯಲಕ್ಷ್ಮಿ ಶಿಬರೂರು

Follow Us:
Download App:
  • android
  • ios