ಹಿಂಸಾಚಾರದಲ್ಲಿ ತೊಡಗಿದ್ದ ಹೆಚ್ಚಿನವರು ಪರಕೀಯರು. ನಾಯಂಡಹಳ್ಳಿ, ಮೈಸೂರು ರಸ್ತೆ ಭಾಗಗಳಲ್ಲಿ ಪರ ಪ್ರದೇಶಗಳಿಂದ ಜನ ತಂಡೋಪ ತಂಡವಾಗಿ ಬಂದು ಬೆಂಕಿ ಹಚ್ಚಿ ಮಾಯವಾದ್ರು ಅಂತಾರೆ ಪ್ರತ್ಯಕ್ಷದರ್ಶಿಗಳು. ಇದು ಪೊಲೀಸರು ಬಂಧಿಸಿದ ವ್ಯಕ್ತಿಗಳನ್ನ ಕಂಡಾಗಲೇ ನಮಗೆ ಸ್ಪಷ್ಟವಾಗುತ್ತೆ

ಕಳೆದ ಸೋಮವಾರದಂದು ಕಾವೇರಿ ಕಿಚ್ಚು ಇಡೀ ಕರುನಾಡಿಗೆ ಹತ್ತಿದ್ದನ್ನ ನಾವೆಲ್ಲರೂ ಕಂಡಿದ್ದೇವೆ. ಆ ಕಿಚ್ಚು ಬೆಂಗಳೂರನ್ನ ಅಕ್ಷರಶಃ 'ಬೆಂದ'ಕಾಳೂರನ್ನಾಗಿಸಿ ಎರಡು ಬಲಿ ಪಡೆಯಿತು. ಕೋಟ್ಯಂತರ ರೂಪಾಯಿ ಆಸ್ತಿ ಪಾಸ್ತಿ ನಾಶ ಆಯಿತು. ಈ ಘಟನೆಯ ಬಳಿಕ ನಮ್ಮಲ್ಲಿ ಮೂಡೋ ಪ್ರಶ್ನೆ ಏನಪ್ಪಾ ಅಂದ್ರೆ, ನಿಜವಾಗಲೂ ಕಾವೇರಿಗೆ ಕಿಚ್ಚು ಹಚ್ಚಿದವರಾರು? ಕನ್ನಡಪರ ಸಂಘಟನೆಯವರು ಕೊಟ್ರಾ? ಸ್ಥಳೀಯರು ರಾಜಕೀಯ, ವೈಯಕ್ತಿಕ ದ್ವೇಷದಿಂದ ಕೊಟ್ರಾ? ಅಥವಾ ದುಷ್ಕರ್ಮಿಗಳ ಜೊತೆ ಉಗ್ರರು ಸೇರಿಕೊಂಡು ಈ ಕೃತ್ಯ ಮಾಡಿದ್ರಾ? ನೆರೆ ರಾಜ್ಯದವರು ಪರಿಸ್ಥಿತಿಯ ಲಾಭ ಪಡೆಯಲು ಉರಿಯೋ ಕಿಚ್ಚಿಗೆ ಬೆಂಕಿ ಹಚ್ಚಿದ್ರಾ?

ಕಿಚ್ಚು ಹಚ್ಚಿ ಹುಚ್ಚು ಹಿಡಿಸಿದವರಾರು?
ಸುಪ್ರೀಂಕೋರ್ಟ್​ ತೀರ್ಪನ್ನ ಕನ್ನಡಿಗರು ಶಾಂತಿಯುತವಾಗಿಯೇ ವಿರೋಧಿಸಿದ್ರು. ಕಾನೂನು ಬದ್ಧವಾಗಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸಿ ಇತರರಿಗೆ ಮಾದರಿಯಾದ್ರು. ಟೈರ್​ ಸುಟ್ಟು ಹಾಕಿ ಸಾಂಕೇತಿಕವಾಗಿಯೇ ಬಂದ್​ ಮಾಡಿ ಭೇಷ್​ ಎನಿಸಿಕೊಂಡಿದ್ರು. ಆದರೆ, ಆ ಕರಾಳ ಸೋಮವಾರ ಕರುನಾಡಿನ ಚಿತ್ರಣವೇ ಬದಲಾಯಿತು. ಅಂದು ಕರುನಾಡು ಧಗ ಧಗನೆ ಹೊತ್ತಿ ಉರಿಯಿತು. ಕಾವೇರಿ ಕಿಚ್ಚಿನ ಕಿಡಿ ಕ್ರೋಧಾಗ್ನಿಯಾಗಿ ಧಗ ಧಗಿಸಿತು.

ತಮಿಳುನಾಡಿಗೆ ಇನ್ನಷ್ಟು ನೀರು ಬಿಡಬೇಕೆಂಬ ಸುಪ್ರಿಂಕೋರ್ಟ್​ ಆದೇಶ ಕನ್ನಡಿಗರನ್ನ ಕೆರಳಿಸಿದ್ದು ನಿಜ. ತಮ್ಮ ಆಕ್ರೋಶವನ್ನ ಅಲ್ಲಲ್ಲಿ ಪ್ರತಿಭಟನೆ, ಭೂತ ದಹನ, ಟೈಯರ್​ ಸುಟ್ಟು ವ್ಯಕ್ತಪಡಿಸಿದ್ದು ಸತ್ಯ. ಆದ್ರೆ ಮಧ್ಯಾಹ್ನದವರೆಗೆ ಶಾಂತವಾಗಿದ್ದ ರಾಜಧಾನಿ ಮಧ್ಯಾಹ್ನದ ಬಳಿಕ ಬೆಂಕಿ ಉಂಡೆಯಾಗಿದ್ದು ಹೇಗೆ? ಕಾನೂನು ಚೌಕಟ್ಟಲ್ಲೇ ಪ್ರತಿಭಟಿಸುತ್ತಿದ್ದ ಕನ್ನಡಿಗರೇ ಮಧ್ಯಾಹ್ನದ ಬಳಿಕ ಕಾನೂನನ್ನ ಕೈಗೆತ್ತಿಕೊಂಡ್ರಾ? ಕಾವೇರಿ ಹೋರಾಟಗಾರರೇ ಏಕಾಏಕಿ ಲಾರಿ ಬಸ್​ಗಳನ್ನ ಸುಟ್ಟು, ಅಂಗಡಿ ಮಳಿಗೆಗಳನ್ನ ಲೂಟಿ ಮಾಡಿ ಬೆಂಕಿ ಕೊಟ್ರಾ? ಪೊಲೀಸರ ಮೇಲೆಯೇ ದಾಳಿ, ಪೊಲೀಸ್​ ವಾಹನಗಳನ್ನೇ ಸುಟ್ಟು ಹಾಕೋ ಮಟ್ಟಿಗೆ ಇಳಿದ್ರಾ ಕನ್ನಡದ ಕಟ್ಟಾಳುಗಳು? ಗೋಲಿಬಾರ್​ ಆಗುವಷ್ಟು ಹಿಂಸೆ ಮಾಡಿ ಇಬ್ಬರ ಪ್ರಾಣವನ್ನೇ ಬಲಿ ಪಡೆಯುವಷ್ಟು ಕ್ರೌರ್ಯ ಮೆರೆದ್ರಾ ಕನ್ನಡಪರ ಹೋರಾಟಗಾರರು?

ಈ ಗಂಭೀರ ಪ್ರಶ್ನೆಗಳು ಈಗ ಕರುನಾಡಿನ ಪ್ರತಿಯೊಬ್ಬರನ್ನ ಕಾಡ್ತಾ ಇದೆ. ಹಾಗಾಗಿ ಈ ಪ್ರಶ್ನೆಗಳಿಗೆ ಉತ್ತರ ಹುಡುಕಲೇ ಬೇಕಾಗಿದೆ. ಯಾಕಂದ್ರೆ ಈ ಕರಾಳ ಘಟನೆ ಕರುನಾಡಿಗೆ ಕಳಂಕ ತಂದಿದೆ. ಜನರಲ್ಲಿ ಆತಂಕ ಮೂಡಿಸಿದೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ನಡೆಸಿತು. ಅದಕ್ಕಾಗಿ ಅನೇಕ ಕನ್ನಡಪರ ಹೋರಾಟಗಾರರನ್ನ ಮಾತನಾಡಿಸಿತು. ಪ್ರತ್ಯಕ್ಷದರ್ಶಿಗಳ ಅಭಿಪ್ರಾಯ ಸಂಗ್ರಹಿಸಿತು. ಜೊತೆಗೆ ಘಟನೆ ನಡೆದ ಸ್ಥಳಗಳಿಗೆ ಭೇಟಿಕೊಟ್ಟು ಪರಿಸ್ಥಿತಿಯ ಅವಲೋಕವನ್ನೂ ಮಾಡಿತು.

ಕನ್ನಡ ಹೋರಾಟಗಾರರು ಏನಂತಾರೆ?
ನಾವು ಕನ್ನಡಪರ ಹೋರಾಟಗಾರರನ್ನ ನೇರವಾಗಿ ಮತ್ತು ರಹಸ್ಯ ಕಾರ್ಯಾಚರಣೆ ಮೂಲಕ ಮಾತಿಗೆಳೆದಾಗ ಅವರು ಹೇಳಿದ್ದೇನು ಗೊತ್ತಾ? ಕನ್ನಡ ಸಂಘಟನೆಗಳು ಇಂಥ ಹೀನ ಮಟ್ಟಕ್ಕೆ ಯಾವತ್ತೂ ಇಳಿದಿಲ್ಲ. ಅವರೇನಾದರೂ ಇಂಥ ಕೆಲಸ ಮಾಡಿದ್ದರೆ ಸೋಮವಾರದ ಕಿಚ್ಚಿನ ಪರಿಸ್ಥಿತಿಯ ಸ್ವರೂಪ ಬೇರೆ ರೀತಿಯೇ ಇರುತ್ತಿತ್ತು ಎಂದು ಸಾರಾ ಗೋವಿಂದು, ವಾಟಾಳ್ ನಾಗರಾಜ್, ನಾರಾಯಣಗೌಡ, ಪ್ರವೀಣ್ ಶೆಟ್ಟಿ ಮೊದಲಾದ ಕನ್ನಡ ಹೋರಾಟಗಾರರು ಹೇಳುತ್ತಾರೆ.

ಬೆಂಗಳೂರಲ್ಲಿ ಕಾವೇರಿ ಹೋರಾಟವನ್ನು ಮುನ್ನಡೆಸಿದ ಪ್ರಮುಖ ಸಂಘಟನೆ ಮುಖಂಡರೇ ಹಿಂಸಾಚಾರದಲ್ಲಿ ತಮ್ಮ ಪಾತ್ರವನ್ನ ಅಲ್ಲಗಳೆಯುತ್ತಾರೆ. ಹಾಗಾದ್ರೆ ಮಾಧ್ಯಮಗಳು ಕಿಚ್ಚು ಹಚ್ಚಿದ್ವಾ? ಪೊಲೀಸ್ರೇನಾದ್ರೂ ಕುಮ್ಮಕ್ಕು ಕೊಟ್ರಾ? ಈ ಅನುಮಾನಗಳನ್ನ ನಿವಾರಿಸಲು ನಾವು ನಮ್ಮ ಅಧ್ಯಯನ ಮುಂದುವರೆಸಿದೆವು. ಆ ಸಿಕ್ಕ ಉತ್ತರಗಳು ನಿಜವಾಗಲೂ ನಮ್ಮನ್ನ ಬೆಚ್ಚಿ ಬೀಳಿಸಿದವು.

ವಿಡಿಯೋ ವಿನಾಶ ಮಾಡಿತಾ? ಆಕ್ರೋಶ ಕಿಚ್ಚಾಗಿ ಕಾಡಿತಾ?
ತಮಿಳುನಾಡಲ್ಲಿ ಕನ್ನಡಿಗ ಚಾಲಕನಿಗೆ ತಮಿಳು ಸಂಘಟನೆಯವರು ಹೊಡೆಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಬಳಿಕ ಅದು ಮಾಧ್ಯಮಗಳಲ್ಲಿ ರಾರಾಜಿಸಿತು. ಇದು ಕನ್ನಡಿಗರನ್ನು ಕೆರಳಿಸಿದ್ದು ನಿಜ. ಆದರೆ, ಈ ಕಿಚ್ಚು ಮಧ್ಯಾಹ್ನದವರೆಗೆ ಶಾಂತವಾಗಿಯೇ ಇತ್ತು. ಆದ್ರೆ ಮದ್ಯಾಹ್ನದ ಬಳಿಕ ಅದು ಜ್ವಾಲಾಗ್ನಿಯಾಗಿ ಉರಿಯಿತು. ಇದಕ್ಕೆ ಮುಖ್ಯ ಕಾರಣ ಪೊಲೀಸರ ನಿಷ್ಕ್ರಿಯತೆ ಅನ್ನೋದು ಪ್ರತ್ಯಕ್ಷದರ್ಶಿಗಳ ದೂರು. ಪ್ರತಿಭಟನೆ ಉಗ್ರರೂಪ ಪಡೆಯೋ ಮುನ್ನವೇ ಪೊಲೀಸರು ಕ್ರಮ ಕೈಗೊಂಡಿದ್ರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಅನ್ನೋದು ಸ್ಪಷ್ಟ. ಪೊಲೀಸರ ಮೌನವನ್ನೇ ಬಂಡವಾಳ ಮಾಡಿಕೊಂಡ ಸಮಾಜಘಾತುಕ ಶಕ್ತಿಗಳು ಪ್ರತಿಭಟನಾಕಾರರಂತೆ ಪೋಸ್​ ಕೊಟ್ಟು ವಿಕೃತ ದಾಳಿಗೆ ಮುಂದಾದ್ರು.

ಸಮಾಜದಲ್ಲಿ ಅಶಾಂತಿ ಹೆಚ್ಚಿಸಬೇಕು. ಜನರ ಭಾವನೆಗಳನ್ನ ಕೆರಳಿಸಬೇಕು. ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲ ದುಷ್ಕರ್ಮಿಗಳು ಯತ್ನಿಸಿದ್ರು. ಇದಕ್ಕೆ ಬೆಂಗಳೂರಿನ ಸುಂಕದಕಟ್ಟೆಯ ಪೂರ್ಮಿಕಾ ಮೊಬೈಲ್​ ಅಂಗಡಿಯೇ ಸಾಕ್ಷಿ.

ಪರಕೀಯರು ದಾಳಿ ಇಟ್ರಾ?
ಪೀಣ್ಯ, ಹೆಗ್ಗನಹಳ್ಳಿ ಸೇರಿದಂತೆ ಮಾಗಡಿ ರಸ್ತೆಯ ಅನೇಕ ಭಾಗಗಳಲ್ಲಿ ಭಾರೀ ಹಿಂಸಾಚಾರ ನಡೆಯಿತು. ಅಲ್ಲಿ ಗೋಲಿಬಾರ್​ ನಡೆದು ಒಬ್ಬರ ಪ್ರಾಣವೂ ಬಲಿಯಾಯ್ತು. ಇಲ್ಲಿಯ ಘಟನೆಗಳನ್ನು ಅವಲೋಕಿಸಿದಾಗ ಅಚ್ಚರಿಯ ಅಂಶಗಳು ಬೆಳಕಿಗೆ ಬರುತ್ತೆ. ಅದೇನಂದ್ರೆ ಇಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ ಹೆಚ್ಚಿನವರು ಪರಕೀಯರು. ನಾಯಂಡಹಳ್ಳಿ, ಮೈಸೂರು ರಸ್ತೆ ಭಾಗಗಳಲ್ಲಿ ಪರ ಪ್ರದೇಶಗಳಿಂದ ಜನ ತಂಡೋಪ ತಂಡವಾಗಿ ಬಂದು ಬೆಂಕಿ ಹಚ್ಚಿ ಮಾಯವಾದ್ರು ಅಂತಾರೆ ಪ್ರತ್ಯಕ್ಷದರ್ಶಿಗಳು. ಇದು ಪೊಲೀಸರು ಬಂಧಿಸಿದ ವ್ಯಕ್ತಿಗಳನ್ನ ಕಂಡಾಗಲೇ ನಮಗೆ ಸ್ಪಷ್ಟವಾಗುತ್ತೆ.

ಕೆಪಿಎನ್'ಗೆ ಬೆಂಕಿ ಹಚ್ಚಿದ್ದು ಯಾರು?
ಇಂಥಾ ಒಂದು ಅನುಮಾನವೂ ಅನೇಕರನ್ನ ಕಾಡಿದ್ದು ಕೆಪಿಎನ್​ ಟ್ರಾವೆಲ್ಸ್​ ಗ್ಯಾರೇಜ್​ಗೆ ಬೆಂಕಿ ಬಿದ್ದಾಗ. ಯಾಕೆಂದರೆ, ನಗರದಿಂದ ಸಾಕಷ್ಟು ದೂರದಲ್ಲಿರುವ ಕೆಪಿಎನ್ ಟ್ರಾವೆಲ್ಸ್'ನ ಗ್ಯಾರೇಜಿಗೆ ಕನ್ನಡ ಸಂಘಟನೆಗಳು ಹೋಗಿ ಬೆಂಕಿ ಇಡುತ್ತಾರೆಂದರೆ ನಂಬುವುದು ಕಷ್ಟ. ಅಲ್ಲಿ ಬೆಂಕಿ ಹಚ್ಚಿದ ವ್ಯಕ್ತಿಗಳ ಬಗ್ಗೆ ಪ್ರತ್ಯಕ್ಷದರ್ಶಿಗಳು ಬಹಳಷ್ಟು ಅನುಮಾನ ವ್ಯಕ್ತಪಡಿಸುತ್ತಾರೆ. ಅಲ್ಲಿ ಸುಸ್ಥಿತಿಯಲ್ಲಿರುವ ವಾಹನಗಳಿದ್ದವೇ ಎಂಬ ಬಗ್ಗೆಯೂ ಅನುಮಾನವಿದೆ. ಯಾವುದೋ ಉದ್ದೇಶಪೂರ್ವಕವಾಗಿ ಇಲ್ಲಿಯ ಬಸ್'ಗಳಿಗೆ ಬೆಂಕಿ ಹಚ್ಚಿರುವ ಸಾಧ್ಯತೆ ದಟ್ಟವಾಗಿದೆ.

ಕಾವೇರಿಗೆ ಉಗ್ರರು ಕಿಚ್ಚಿಟ್ರಾ?
ಕಾವೇರಿ ಕಿಚ್ಚು ದ್ವೇಷದ ಜ್ವಾಲೆಯಾಗಿ ಹೊತ್ತಿ ಉರಿಯಲು ನಾನಾ ಬಾಹ್ಯ ಶಕ್ತಿಗಳು ಶ್ರಮಿಸಿವೆ ಅನ್ನೋದು ಈಗ ತನಿಖೆಗಳಿಂದ ಬಯಲಾಗುತ್ತಿವೆ. ಅಷ್ಟೇ ಅಲ್ಲದೆ, ನಮ್ಮ ನಾಡಲ್ಲಿ ಧರ್ಮ ಹಾಗೂ ಭಾಷೆಯ ಹೆಸರಲ್ಲಿ ಗಲಭೆ ಸೃಷ್ಟಿಸಲೆಂದೇ ಕಾಯುತ್ತಿರುವ ಕೆಲ ಉಗ್ರ ಸಂಘಟನೆಗಳೂ ಕಿಚ್ಚು ಹಚ್ಚಿರುವ ಸಾಧ್ಯತೆಗಳಿವೆ ಎಂಬ ಅನುಮಾನ ಸ್ಥಳೀಯರದ್ದು. ಕರುನಾಡಿಗೆ ಕಳಂಕ ತರಲು ಹಾಗೂ ಕನ್ನಡಿಗರು ಜಗಳಗಂಟರು ಅಂತ ಹಣೆಪಟ್ಟಿ ಕಟ್ಟಲು ನೆರೆರಾಜ್ಯದವರು ಸಾಕಷ್ಟು ಪ್ರಚೋದನೆ ನೀಡಿದ್ದಾರೆ ಅನ್ನೋದು ಕನ್ನಡಪರ ಹೋರಾಟಗಾರರ ವಾದ.

ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುಳ್ಳು ಮಾಹಿತಿಗಳನ್ನ ಹಾಗೂ ವಿಡಿಯೋಗಳನ್ನ ಹರಿದಾಡುವಂತೆ ಮಾಡಿ ತಮಿಳಿಗರು ಹಾಗೂ ಕನ್ನಡಿಗರ ನಡುವೆ ದ್ವೇಷದ ವಿಷ ಬೀಜ ಬಿತ್ತಿ ಕರುನಾಡಲ್ಲಿ ಅಶಾಂತಿ ಉಂಟು ಮಾಡಿ ಯತ್ನ ನಿರಂತರವಾಗಿ ನಡೆಯುತ್ತಿದೆ. ಅಷ್ಟೇ ಅಲ್ಲದೆ ಇದರ ಹಿಂದೆ ಇನ್ನೊಂದು ದುರುದ್ದೇಶವೂ ಇರಬಹುದು ಅನ್ನೋದು ಕರವೇ ಅಧ್ಯಕ್ಷ ನಾರಾಯಣ ಗೌಡರ ಶಂಕೆ.

ಈ ರೀತಿ ಕಾವೇರಿಯ ಹೆಸರಲ್ಲಿ ಕಾಣದ ಕೈಗಳು ಕರುನಾಡಿಗೆ ಕಿಚ್ಚಿಟ್ಟಿವೆ ಎಂಬುದು ಈಗ ಗೋಚರವಾಗುತ್ತಿವೆ. ಆದ್ರೆ ಕಿಚ್ಚಿಟ್ಟವರು ಕಣ್ಮರೆಯಾಗಿ, ಪೊಲೀಸರ ಬಲೆಗೆ ಅಮಾಯಕರು ಬಲಿಯಾಗಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಪ್ರಾಮಾಣಿಕವಾಗಿ ನಡೆಸಬೇಕು. ಅಮಾಯಕರನ್ನ ಬಂಧಿಸಿ ಶಿಕ್ಷಿಸೋ ಬದಲು ದುಷ್ಟ ಶಕ್ತಿಗಳ ಹೆಡೆಮುರಿ ಕಟ್ಟಬೇಕು. ಇಲ್ಲದಿದ್ದರೆ ಕಾವೇರಿ ಅಮಾಯಕರ ಪಾಲಿಗೆ ಜೀವನ ಪರ್ಯಂತ ಕಣ್ಣೀರಾಗೋದ್ರಲ್ಲಿ ಅನುಮಾನವೇ ಇಲ್ಲ.

ವರದಿ: ವಿಜಯಲಕ್ಷ್ಮಿ ಶಿಬರೂರು
ರಹಸ್ಯ ಕಾರ್ಯಾಚರಣೆ: ರಂಜಿತ್ ಕುಮಾರ್​​, ಗಗನ್​