ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಸತತ 8 ಬಾರಿ ವಿಚಾರಣೆಗೆ ಹಾಜರಾಗದ ನಟ ಸುದೀಪ್‌ ದಂಪತಿ ವಿರುದ್ಧ ಕೌಟುಂಬಿಕ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು: ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಸತತ 8 ಬಾರಿ ವಿಚಾರಣೆಗೆ ಹಾಜರಾಗದ ನಟ ಸುದೀಪ್‌ ದಂಪತಿ ವಿರುದ್ಧ ಕೌಟುಂಬಿಕ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ವಿಚ್ಛೇದನ ಪಡೆಯಲು ಸಮ್ಮತಿ ವ್ಯಕ್ತಪಡಿಸಿದ್ದ ದಂಪತಿ ನ್ಯಾಯಾಲಯದ ಆದೇಶ ಪಡೆದು ಪ್ರತ್ಯೇಕವಾಗಲು 2015ರ ಸೆಪ್ಟೆಂಬರ್‌ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಸಲ್ಲಿಸಿದ ದಿನದಿಂದ ಇಲ್ಲಿಯವರೆಗೂ ಒಮ್ಮೆಯೂ ಸಹ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ.

ಈ ಹಿನ್ನೆಲೆಯಲ್ಲಿ ಬುಧವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆಗಸ್ಟ್‌ 24ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದರು. ಅಲ್ಲದೆ, ಒಂದು ವೇಳೆ ದಂಪತಿ ರಾಜಿ ಸಂಧಾನ ಮಾಡಿಕೊಂಡಿದ್ದರೆ ಆ ಅಂಶವನ್ನಾದರೂ ನ್ಯಾಯಾಲಯಕ್ಕೆ ತಿಳಿಸಿ. ಇಲ್ಲವಾದಲ್ಲಿ ಅರ್ಜಿಯಲ್ಲಿರುವ ಅಂಶಗಳನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವುದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದರು.

ವಿಚಾರಣೆ ವೇಳೆ ಹಾಜರಾಗಿದ್ದ ಸುದೀಪ್‌ ಪರ ವಕೀಲರು, ಸುದೀಪ್‌ ‘ದಿ ವಿಲನ್‌' ಚಿತ್ರದ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ಗೆ ತೆರಳಿದ್ದಾರೆ. ಆದ್ದರಿಂದ ಈ ಒಂದು ಬಾರಿ ಅವಕಾಶ ನೀಡಿ. ಮುಂದಿನ ದಿನಾಂಕದಂದು ಹಾಜರಾಗುವಂತೆ ನೋಡಿಕೊಳ್ಳಲಾಗುವುದು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ಮನವಿ ಪರಿಗಣಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ಮುಂದೂಡಿದರು. ವಿಚ್ಛೇದನಕ್ಕಾಗಿ 2015ರ ಸೆಪ್ಟೆಂಬರ್‌ನಲ್ಲಿ ಸುದೀಪ್‌ ದಂಪತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಬಳಿ ಸತತ 8 ಬಾರಿ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರಿಂದಾಗಿ ಪ್ರತಿ ಬಾರಿಯೂ ವಿಚಾರಣೆ ಮುಂದೂಡಲಾಗುತ್ತಿತ್ತು.