ಹ್ಯೂಬ್ಲೊ ತನಿಖೆ ದಾಖಲೆ ಆರ್‌ಟಿಐನಲ್ಲಿ ಪಡೆಯಲು ಕೋರ್ಟ್ ಸೂಚನೆ

Court Suggest to applicant  that Hublo Watch details get by RTI
Highlights

- ಹ್ಯೂಬ್ಲೊ ತನಿಖೆ ದಾಖಲೆ ಆರ್‌ಟಿಐನಲ್ಲಿ ಪಡೆಯಿರಿ: ಅರ್ಜಿದಾರನಿಗೆ ಕೋರ್ಟ್ ಸಲಹೆ 

- ಮಾಜಿ ಸಿಎಂ ಸಿದ್ದು ವಾಚ್‌ ಪ್ರಕರಣದ ತನಿಖಾ ದಾಖಲೆಗಾಗಿ ವಕೀಲನ ಅರ್ಜಿ

- ದೂರುದಾರ ನಟರಾಜ ಶರ್ಮ ಅರ್ಜಿ ಸಲ್ಲಿಸಿದ್ದರು 

ಬೆಂಗಳೂರು (ಜೂ. 03):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹ್ಯೂಬ್ಲೊ ವಾಚ್‌ ಪ್ರಕರಣದ ತನಿಖಾ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಪಡೆದುಕೊಳ್ಳುವಂತೆ ವಕೀಲರೂ ಆದ ಪ್ರಕರಣದ ದೂರುದಾರ ನಟರಾಜ್‌ ಶರ್ಮಾಗೆ ಹೈಕೋರ್ಟ್‌ ಸೂಚಿಸಿದೆ.

ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ತಮಗೆ ಒದಗಿಸಲು ಎಸಿಬಿಗೆ ನಿರ್ದೇಶಿಸುವಂತೆ ಕೋರಿ ವಕೀಲ ನಟರಾಜ್‌ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಏಕ ಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆಯಲ್ಲವೇ? ಎಂದು ಅರ್ಜಿದಾರರನ್ನು ಪ್ರಶ್ನಿಸಿತು.

ವಕೀಲ ನಟರಾಜ್‌ ಶರ್ಮಾ ಉತ್ತರಿಸಿ, ದೂರುದಾರನಾದ ತಮಗೆ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಕೇಳುವ ಸಂಪೂರ್ಣ ಹಕ್ಕು ಇದೆ. ಈಗಾಗಲೇ ದಾಖಲೆ ಒದಗಿಸುವಂತೆ ಮೂರು ಬಾರಿ ಮನವಿ ಮಾಡಿದ್ದು, ಅದನ್ನು ಪರಿಗಣಿಸಿಲ್ಲ. ಆದ್ದರಿಂದ ತಮಗೆ ದಾಖಲೆ ಒದಗಿಸಲು ಎಸಿಬಿಗೆ ನಿರ್ದೇಶಿಸುವಂತೆ ಕೋರಿದರು.

ಸರ್ಕಾರಿ ವಕೀಲರು ವಾದಿಸಿ, ಅರ್ಜಿದಾರರು ದಾಖಲೆಗಳನ್ನು ಕೋರಿ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದರೆ, ಅದನ್ನು ಪರಿಶೀಲಿಸಲಾಗುವುದು ಎಂದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ಪ್ರಕರಣದ ತನಿಖಾ ದಾಖಲೆ ಒದಗಿಸಲು ಕೋರಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದರೆ, ಅದನ್ನು ಎಸಿಬಿ ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.

ಹ್ಯೂಬ್ಲೊ ವಾಚ್‌ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಎಸಿಬಿಯು, ಸಿದ್ದರಾಮಯ್ಯಗೆ ಕ್ಲೀನ್‌ಚಿಟ್‌ ನೀಡಿದೆ. ಆದರೆ, ತನಿಖೆ ವೇಳೆ ದೂರುದಾರರಾದ ತಮ್ಮ ಹೇಳಿಕೆ ಪಡೆದಿಲ್ಲ ಹಾಗೂ ತನಿಖೆಯ ದಾಖಲೆ ನೀಡುತ್ತಿಲ್ಲ ಎಂದು ಅರ್ಜಿದಾರರು ಅರ್ಜಿಯಲ್ಲಿ ದೂರಿದ್ದರು. 

loader