ಹೊಸ ವರ್ಷಾಚರಣೆ ಪ್ರಯುಕ್ತ ಡಿ.31ರಂದು ರಾತ್ರಿ ನಗರದಲ್ಲಿ ನಡೆಸಲು ಉದ್ದೇಶಿಸಿರುವ ‘ಸನ್ನಿನೈಟ್ ಇನ್ ಬೆಂಗಳೂರು’ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಆಯೋಜಕರಾದ ಟೈಮ್ಸ್ ಕ್ರಿಯೇಷನ್ಸ್’ ಸಲ್ಲಿಸಿರುವ ಮನವಿಪತ್ರವನ್ನು ಡಿ.25ರೊಳಗೆ ಪರಿಗಣಿಸಿ ಕಾನೂನು ಪ್ರಕಾರ ಆದೇಶ ಹೊರಡಿಸುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಬೆಂಗಳೂರು (ಡಿ.22): ಹೊಸ ವರ್ಷಾಚರಣೆ ಪ್ರಯುಕ್ತ ಡಿ.31ರಂದು ರಾತ್ರಿ ನಗರದಲ್ಲಿ ನಡೆಸಲು ಉದ್ದೇಶಿಸಿರುವ ‘ಸನ್ನಿನೈಟ್ ಇನ್ ಬೆಂಗಳೂರು’ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಆಯೋಜಕರಾದ ಟೈಮ್ಸ್ ಕ್ರಿಯೇಷನ್ಸ್’ ಸಲ್ಲಿಸಿರುವ ಮನವಿಪತ್ರವನ್ನು ಡಿ.25ರೊಳಗೆ ಪರಿಗಣಿಸಿ ಕಾನೂನು ಪ್ರಕಾರ ಆದೇಶ ಹೊರಡಿಸುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ. ‘ಸನ್ನಿ ನೈಟ್ ಇನ್ ಬೆಂಗಳೂರು’ ಆಯೋಜನೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಹಾಗೂ ನಗರ ಪೊಲೀಸ್ ಆಯುಕ್ತರು ಹಾಗೂ ಈಶಾನ್ಯ ವಲಯ ಡಿಸಿಪಿಗೆ ನಿರ್ದೇಶಿಸುವಂತೆ ಕೋರಿ ಟೈಮ್ಸ್ ಕ್ರಿಯೇಷನ್ಸ್ ಸಂಚಾಲಕಿ ಎಚ್.ಎಸ್. ಭವ್ಯಾ ಅರ್ಜಿ ಸಲ್ಲಿಸಿದ್ದರು.
ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ರಜಾಕಾಲದ ಏಕ ಸದಸ್ಯಪೀಠ, ಮನವಿ ಪತ್ರದ ಕುರಿತು ಈಶಾನ್ಯ ಡಿಸಿಪಿ ಕೋರಿರುವ ಸ್ಪಷ್ಟೀಕರಣಗಳನ್ನು ಅರ್ಜಿದಾರರು ಸಲ್ಲಿಸಬೇಕು. ಡಿಸಿಪಿ ಅವರು ಆ ಸ್ಪಷ್ಟೀಕರಣಗಳೊಂದಿಗೆ ಮನವಿಪತ್ರ ಪರಿಗಣಿಸಿ ಡಿ.25ರೊಳಗೆ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಉದಯಹೊಳ್ಳ, ಡಿಸಿಪಿ ಕೋರಿರುವ ಸ್ಪಷ್ಟೀಕರಣಗಳನ್ನು ಶುಕ್ರವಾರವೇ ಸಲ್ಲಿಸುವುದಾಗಿ ತಿಳಿಸಿದರು. ಇದರೊಂದಿಗೆ ಡಿ.25ರಂದು ಈಶಾನ್ಯ ಡಿಸಿಪಿ ಹೊರಡಲಿಸಿರುವ ಆದೇಶದ ಮೇಲೆ ಸನ್ನಿ ನೈಟ್ ಇನ್ ಬೆಂಗಳೂರು ಕಾರ್ಯಕ್ರಮದ ಭವಿಷ್ಯ ನಿಂತಿದೆ.
ಒಂದೊಮ್ಮೆ ಡಿಸಿಪಿ ಅನುಮತಿ ನಿರಾಕರಿಸಿದರೆ, ಕಾರ್ಯಕ್ರಮ ನಡೆಯುವುದು ಅನುಮಾನ. ಆದರೆ, ಆ ಆದೇಶವನ್ನು ಪ್ರಶ್ನಿಸಿ ಆಯೋಜಕರು ಮತ್ತೆ ಹೈಕೊರ್ಟ್‌ಗೆ ಹೊಸದೊಂದು ಅರ್ಜಿ ಸಲ್ಲಿಸಲು ಅವಕಾಶ ತಳ್ಳಿಹಾಕುವಂತಿಲ್ಲ. ಡಿ.26 ಮತ್ತು ಡಿ.28ರಂದು ಹೈಕೋರ್ಟ್ ರಜಾಕಾಲದ ಪೀಠಗಳು ಕಾರ್ಯ ನಿರ್ವಹಿಸಲಿವೆ. ಒಂದೊಮ್ಮೆ ಅನುಮತಿ ನೀಡಿದರೆ ಕಾರ್ಯಕ್ರಮಕ್ಕೆ ಇರುವ ಅಡ್ಡಿ ದೂರವಾಗಬಹುದು.
ಪ್ರತಿಭಟನೆಯಿಂದ ಅನುಮತಿಯಿಲ್ಲ: ಇದಕ್ಕೂ ಮುನ್ನ ಹಿರಿಯ ವಕೀಲರು ವಾದಿಸಿ, ಯಾರೋ 10 ಮಂದಿ ಪ್ರತಿಭಟನೆ ಮಾಡಿದರು ಎಂಬುದನ್ನೇ ಪರಿಗಣಿಸಿ ಪೊಲೀಸರು ಕಾನೂನು ವ್ಯವಸ್ಥೆಯ ಕಾರಣ ನೀಡಿ ಸನ್ನಿ ನೈಟ್ ಇನ್ ಬೆಂಗಳೂರು ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ. ಅನುಮತಿ ಕೋರಿ ಡಿ.1ರಂದೇ ಮನವಿ ಸಲ್ಲಿಸಿದ್ದರೂ ಈವರೆಗೂ ಪರಿಗಣಿಸಿಲ್ಲ. ನಾವು ಕೇವಲ ಅನುಮತಿ ಕೋರಿದ್ದು, ಯಾವುದೇ ಭದ್ರತೆ ವ್ಯವಸ್ಥೆ ಒದಗಿ ಸಲು ಕೇಳುತ್ತಿಲ್ಲ. ನಮಗೆ ಭದ್ರತೆ ಕಲ್ಪಿಸುವುದೂ ಬೇಡ. ಅರ್ಜಿದಾರರು ಕಾರ್ಯಕ್ರ ಮಕ್ಕೆ ಪಾಲ್ಗೊಳ್ಳಲಿರುವರಿಗೆ ಈಗಾಗಲೇ 80 ಲಕ್ಷ ರು. ಪಾವತಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿ ದಾರರಿಗೆ ಏಕೆ ಅನುಮತಿ ನೀಡಿಲ್ಲ? ಅರ್ಜಿದಾರರು ಡಿ.೧ರಂದು ಸಲ್ಲಿಸಿರುವ ಮನವಿಪತ್ರ ಮೇಲೆ ಈವರೆಗೆ ಯಾವ ಕ್ರಮ ಜರುಗಿಸಲಾಗಿದೆ? ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು.
ಸರ್ಕಾರಿ ವಕೀಲರು, ಹೊಸ ವರ್ಷದ ಆಚರಣೆ ದಿನದಂದು ನಗರದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಬೇಕಿದೆ. ಯಾವುದೇ ಅಹಿತರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುವುದು. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಇದೇ ಹೈಕೋರ್ಟ್‌ಗೆ ಇತ್ತೀಚೆಗಷ್ಟೇ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಅದರಂತೆನಡೆದುಕೊಳ್ಳಬೇಕಿದೆ ಎಂದರು.
ಇದನ್ನು ಒಪ್ಪದ ನ್ಯಾಯಮೂರ್ತಿಯವರು ಸನ್ನಿ ನೈಟ್ಸ್ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನಿರಾಕರಿಸಲಾಗಿದೆಯೇ ಅಥವಾ ಡಿ. 31ರಂದು ನಡೆಯುವ ಇತರ ಎಲ್ಲಾ ಕಾರ್ಯಕ್ರಮಗಳಿಗೂ ಇದೇ ನೀತಿ ಅನುಸರಿಸಲಾಗಿದೆಯೇ? ಅಥವಾ ಇಲ್ಲಿ ತಾರತಮ್ಯ ನಡೆದಿದೆಯೇ ಎಂದು ಪ್ರಶ್ನಿಸಿ, ಈ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿ ಕೆಲ ಕಾಲ ವಿಚಾರಣೆ ಮುಂದೂಡಿತು. ಆ ನಂತರ ಸಂಜೆ 5.20ಕ್ಕೆ ಮತ್ತೆ ಅರ್ಜಿ ವಿಚಾರಣೆ ಆರಂಭ ಗೊಂಡಾಗ ಹೊಸ ವರ್ಷದ ಆಚರಣೆ ಪ್ರಯುಕ್ತ ಯಾರೊಬ್ಬರ ಕಾರ್ಯಕ್ರಮಕ್ಕೂ ಅನುಮತಿ ನೀಡಿಲ್ಲ. ಅರ್ಜಿದಾರರ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸಿಲ್ಲ ಎಂದು ಸರ್ಕಾರಿ ವಕೀಲರು ಸ್ಪಷ್ಟಪಡಿಸಿದರು.
ಹಾಗೆಯೇ, ಸನ್ನಿ ನೈಟ್ ಇನ್ ಬೆಂಗಳೂರು ಕಾರ್ಯಕ್ರಮಕ್ಕೆ ಅನುಮತಿ ಕೋರಿ ಡಿ.1ರಂದು ಸಲ್ಲಿಸಿರುವ ಮನವಿಪತ್ರದ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ, ಆಯೋಜಕರ ಬಳಿ ಕೆಲವೊಂದು ಸ್ಪಷ್ಟೀಕರಣ ಕೇಳಿದ್ದಾರೆ. ಈವರೆಗೆ ಸ್ಪಷ್ಟೀಕರಣ ನೀಡಿಲ್ಲ. ಅವುಗಳನ್ನು ಒದಗಿಸಿದರೆ, ಕಾನೂನು ಪ್ರಕಾರ ಮನವಿ ಪತ್ರ ಪರಿಗಣಿಸಿ ಆದೇಶ ಹೊರಡಿ ಸಲಾಗುವುದೆಂದು ತಿಳಿಸಿದರು. ವಿಚಾರಣೆಗೆ ಖುದ್ದು ಹಾಜರಿದ್ದ ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ಸಹ ಕೋರ್ಟ್‌ಗೆ ಇದನ್ನು ಅನುಮೋದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಮೇಲಿನಂತೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
