ರಾಜ್ಯದ ಮಲ್ಟಿಪ್ಲೆಕ್ಸ್‌ ಸಿನಿಮಾ ಹಾಲ್‌ಗಳಲ್ಲಿ ಆಹಾರ ಪದಾರ್ಥಗಳನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ನೆಲಮಂಗಲದ ಆದಿನಾರಾಯಣ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸರ್ಕಾರಿ ವಕೀಲರಿಗೆ ಸೂಚಿಸಿತು.

ಬೆಂಗಳೂರು[ಅ.11]: ರಾಜ್ಯದ ಮಲ್ಟಿಪ್ಲೆಕ್ಸ್‌ ಸಿನಿಮಾ ಹಾಲ್‌ಗಳಲ್ಲಿ ದುಬಾರಿಯಾಗಿರುವ ಆಹಾರ ಪದಾರ್ಥಗಳ ದರವನ್ನು ನಿಯಂತ್ರಿಸುವ ಸಾಧ್ಯತೆ ಬಗ್ಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮಾಹಿತಿ ಪಡೆದು ತಿಳಿಸುವಂತೆ ರಾಜ್ಯ ಸರ್ಕಾರಿ ವಕೀಲರಿಗೆ ಹೈಕೋರ್ಟ್‌ ಮೌಖಿಕವಾಗಿ ಸೂಚಿಸಿದೆ.

ರಾಜ್ಯದ ಮಲ್ಟಿಪ್ಲೆಕ್ಸ್‌ ಸಿನಿಮಾ ಹಾಲ್‌ಗಳಲ್ಲಿ ಆಹಾರ ಪದಾರ್ಥಗಳನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ನೆಲಮಂಗಲದ ಆದಿನಾರಾಯಣ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸರ್ಕಾರಿ ವಕೀಲರಿಗೆ ಸೂಚಿಸಿತು.

ಅರ್ಜಿದಾರರ ಪರ ಎಚ್‌.ಸುನೀಲ್‌ ಕುಮಾರ್‌ ವಾದ ಮಂಡಿಸಿ, ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್‌ ಸಿನಿಮಾ ಹಾಲ್‌ ಮಳಿಗೆಗಳಲ್ಲಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿದೆ. ಮಲ್ಪಿಪ್ಲೆಕ್ಸ್‌ಗಳಿಗೆ ಜನರು ಸಿನಿಮಾ ನೋಡಲು ಹೋದರೆ ಅಲ್ಲಿಯ ಮಳಿಗೆಗಳಲ್ಲಿಯೇ ಆಹಾರ ಪದಾರ್ಥಗಳನ್ನು ಖರೀದಿಸಬೇಕಿದೆ. ಆದರೆ, ಅಲ್ಲಿ ಹೆಚ್ಚಿನ ಬೆಲೆ ವಿಧಿಸಿ, ಸಾರ್ವಜನಿಕರನ್ನು ಸುಲಿಗೆ ಮಾಡಲಾಗುತ್ತಿದೆ. ಹೊರಗಡೆಯಿಂದ ಆಹಾರ ಪದಾರ್ಥ ತೆಗೆದುಕೊಂಡು ಹೋಗಲು ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರದ ಯಾವ ಇಲಾಖೆಯು ಮಲ್ಟಿಪ್ಲೆಕ್ಸ್‌ ಸಿನಿಮಾ ಹಾಲ್‌ ಮಳಿಗೆಗಳಲ್ಲಿನ ಆಹಾರ ಪದಾರ್ಥಗಳ ಬೆಲೆ ನಿಯಂತ್ರಿಸುವ ಪ್ರಾಧಿಕಾರವಾಗಿದೆ ಎಂದು ಸರ್ಕಾರಿ ವಕೀಲರನ್ನು ಕೇಳಿತು. ಸರ್ಕಾರಿ ವಕೀಲರು ಉತ್ತರಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಹಾಗಾದರೆ ಅರ್ಜಿಯಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಪ್ರತಿವಾದಿ ಮಾಡಬೇಕಲ್ಲವೇ ಎಂದು ಕೇಳಿತು. ನಂತರ ಮಲ್ಟಿಪ್ಲೆಕ್ಸ್‌ ಸಿನಿಮಾ ಹಾಲ್‌ ಮಳಿಗೆಗಳಲ್ಲಿನ ಆಹಾರ ಪದಾರ್ಥಗಳ ದರವನ್ನು ನಿಯಂತ್ರಿಸುವ ಸಾಧ್ಯತೆ ಬಗ್ಗೆ ಆ ಇಲಾಖೆಯಿಂದ ಸೂಚನೆ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.