ಎರಡು ತಿಂಗಳ ಹಿಂದೆಯಷ್ಟೇ ಅಂತರ್ಜಾತಿ ವಿವಾಹವಾಗಿದ್ದ ನವದಂಪತಿ ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದಲ್ಲಿ ನಡೆದಿದೆ.
ಬೆಂಗಳೂರು (ಡಿ.26): ಎರಡು ತಿಂಗಳ ಹಿಂದೆಯಷ್ಟೇ ಅಂತರ್ಜಾತಿ ವಿವಾಹವಾಗಿದ್ದ ನವದಂಪತಿ ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೈಲಸಂದ್ರ ನಿವಾಸಿ ಪ್ರವೀಣ್ (24) ಮತ್ತು ಪತ್ನಿ ಪ್ರಿಯಾ (19) ಮೃತರು. ಪ್ರವೀಣ್ ಮೂಲತಃ ಮಂಡ್ಯ ಜಿಲ್ಲೆಯ ಚನ್ನಸಂದ್ರದವರಾಗಿದ್ದು, ಪ್ರಿಯಾನಗರದ ಉತ್ತರಹಳ್ಳಿಯವರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಪ್ರವೀಣ್ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಮೂರು ವರ್ಷಗಳ ಹಿಂದೆ ಪ್ರವೀಣ್‌ಗೆ ಪ್ರಿಯಾ ಜತೆ ಸ್ನೇಹವಾಗಿ ಕ್ರಮೇಣ ಇಬ್ಬರು ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದರು.
ಅಂತರ್ಜಾತಿ ವಿವಾಹವಾದ ಕಾರಣ ಎರಡು ಕುಟುಂಬಸ್ಥರಿಂದ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಅದ್ಯಾಗೂ ಪ್ರವೀಣ್ ತನ್ನ ಪೋಷಕರು ಹಾಗೂ ತಾನು ಪ್ರೀತಿಸುತ್ತಿದ್ದ ಪ್ರಿಯಾಳ ಪೋಷಕರನ್ನು ವಿವಾಹಕ್ಕೆ ಒಪ್ಪಿಸಿದ್ದನು. ಕಳೆದ ಎರಡು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತ್ಮಲಿಂಗೇಶ್ವರ ದೇವಾಲಯದಲ್ಲಿ ಇಬ್ಬರ ವಿವಾಹ ನೆರವೇರಿತ್ತು. ದಂಪತಿ ಕೆಂಗೇರಿಯ ಮೈಲಸಂದ್ರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ವಿವಾಹವಾದ ಬಳಿಕ ಪ್ರವೀಣ್ ಕೆಂಗೇರಿ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಸಮೀಪ ಸ್ವಂತ ಗೋಬಿ ಮಂಚೂರಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ.
ಪತಿಯ ಕೆಲಸಕ್ಕೆ ಪತ್ನಿ ಬೆಂಬಲ ನೀಡುತ್ತಿದ್ದರು. ಶನಿವಾರ ರಾತ್ರಿ ಪ್ರವೀಣ್ ತಂದೆ ಶಂಕರಯ್ಯ ಪುತ್ರನಿಗೆ ಕರೆ ಮಾಡಿದ್ದರು. ಎಷ್ಟು ಕರೆ ಮಾಡಿದರು ಮಗ ಕರೆ ಸ್ವೀಕರಿಸದಿದ್ದಾಗ ಆತಂಕಗೊಂಡ ಶಂಕರಯ್ಯ ಅವರು ನಗರದಲ್ಲಿ ನೆಲೆಸಿರುವ ಪ್ರಿಯಾಳ ಮನೆಯವರಿಗೆ ಕರೆ ಮಾಡಿ ಕರೆ ತೆಗೆಯದ ಬಗ್ಗೆ ತಿಳಿಸಿದ್ದರು. ಪ್ರಿಯಾ ಅವರ ತಾಯಿ ಪುಷ್ಪಾ ಅವರು ಶನಿವಾರ ರಾತ್ರಿ ಮನೆ ಬಳಿ ಬಂದಿದ್ದು, ಒಳಗಿನಿಂದ ಬಾಗಿಲು ಹಾಕಿತ್ತು. ಎಷ್ಟು ಕೂಗಿದರೂ ಒಳಗಿನಿಂದ ಪ್ರತಿಕ್ರಿಯೆ ಬಂದಿಲ್ಲ. ಕೊಠಡಿಯ ಕಿಟಕಿಯಲ್ಲಿ ನೋಡಿದಾಗ ಇಬ್ಬರು ಶವ ನೋಡಿ ಆತಂಕದಿಂದ ಚೀರಾಡಿದ್ದಾರೆ. ನೆರೆ ಮನೆ ನಿವಾಸಿಗಳು ಸ್ಥಳಕ್ಕೆ ಜಮಾಯಿಸಿದ್ದು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಡೆತ್‌ನೋಟ್ ಇಲ್ಲ: ದಂಪತಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಮೃತರ ಎರಡು ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಮಕ್ಕಳ ಆತ್ಮಹತ್ಯೆಗೆ ಅವರ ಪೋಷಕರು ಆಚ್ಚರಿ ವ್ಯಕ್ತಪಡಿಸಿದ್ದಾರೆ. ದಂಪತಿಯ ಕರೆ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
