ಬೆಂಗಳೂರು(ಡಿ.11): ಇಂದು ಪಂಚ ರಾಜ್ಯ ಚುನಾವಣೆಗಳ ಫಲಿತಾಂಶ ಪ್ರಕಟವಾಗುತ್ತಿದ್ದು, ಪ್ರಮುಖವಾಗಿ ಬಿಜೆಪಿ ಹಾರ್ಟ್ ಲ್ಯಾಂಡ್ ಎಂದೇ ಗುರುತಿಸಲ್ಪಡುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ್ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಭವಿಷ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ.

ಅದರಂತೆ ಐದೂ ರಾಜ್ಯಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಮತದಾರ ಯಾವ ಪಕ್ಷಕ್ಕೆ ವಿಜಯದ ಮಾಲೆ ಹಾಕಲಿದ್ದಾನೆ ಎಂಬುದು ತಿಳಿಯಲಿದೆ.

2019ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ, ಖಂಡಿತವಾಗಿಯೂ ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ. 

ರಾಜಸ್ಥಾನದಲ್ಲಿ ರಾಜೇ ರಾಜ್ಯಭಾರ ಉರುಳುತ್ತಾ?:

ಬಿಜೆಪಿಗೆ ಉತ್ತರ ಭಾರತದ ಪ್ರಮುಖ ರಾಜ್ಯವಾದ ರಾಜಸ್ಥಾನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಿಎಂ ವಸುಂಧರಾ ರಾಜೇ ಆಡಳಿತದ ವಿರುದ್ಧದ ಜನಾಕ್ರೋಶ ಇದಕ್ಕೆ ಅಡ್ಡಿಯಾಗಬಹುದು. ಇತ್ತ ಕಾಂಗ್ರೆಸ್ ಸಚಿನ್ ಪೈಲೆಟ್ ನೇತೃತ್ವದಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಸಜ್ಜಾಗಿದೆ.

ಪ್ರಮುಖ ಅಭ್ಯರ್ಥಿಗಳು:
ವಸುಂಧರಾ ರಾಜೇ: ಬಿಜೆಪಿ
ಸಚಿನ್ ಪೈಲೆಟ್: ಕಾಂಗ್ರೆಸ್
ಅಶೋಕ್ ಗೆಲ್ಹೋಟ್: ಕಾಂಗ್ರೆಸ್

ಮಧ್ಯಪ್ರದೇಶದ ಶಿವರಾಜ್ ಹಣೆಬರಹ?:

ಇನ್ನು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ದವೂ ಜಾನಕ್ರೋಶ ಎದ್ದು ಕಾಣುತ್ತಿದ್ದು, ಇದೊಂದೇ ಕಾರಣಕ್ಕೆ ಮತದಾರ ಬಿಜೆಪಿಯನ್ನು ಸೋಲಿಸಲಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಇಲ್ಲಿ ಕೆಲಸ ಮಾಡಿದರೂ ಅಚ್ಚರಿಯಿಲ್ಲ. ಆದರೆ ಕಾಂಗ್ರೆಸ್ ತನ್ನ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಕಮಲ ಪಾಳೆಯದಲ್ಲಿ ನಡುಕ ಹುಟ್ಟಿಸಲು ಸಜ್ಜಾಗಿದೆ.

ಪ್ರಮುಖ ಅಭ್ಯರ್ಥಿಗಳು:
ಶಿವರಾಜ್ ಸಿಂಗ್ ಚೌಹಾಣ್: ಬಿಜೆಪಿ
ಜ್ಯೋತಿರಾದಿತ್ಯ ಸಿಂಧಿಯಾ: ಕಾಂಗ್ರೆಸ್
ಕಮಲನಾಥ್: ಕಾಂಗ್ರೆಸ್

ಛತ್ತೀಸ್‌ಗಡ್:

ಸತತ ಎರಡು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ರಮಣಸಿಂಗ್ ಮೂರನೇ ಬಾರಿಯೂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ನಕ್ಸಲಪಿಡೀತ ರಾಜ್ಯದಲ್ಲಿ ತನ್ನ ರಾಜ್ಯಭಾರ ಮುಂದುವರೆಸಬೇಕು ಎಂದು ಬಿಜೆಪಿ ಕೂಡ ಪಣ ತೊಟ್ಟಿದೆ. ಆದರೆ ಆಡಳಿತ ವಿರೋಧಿ ಅಲೆಯನ್ನೇ ಬಂಡವಾಳ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಯುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಇದೆ.

ಪ್ರಮುಖ ಅಭ್ಯರ್ಥಿಗಳು

ರಮಣಸಿಂಗ್: ಬಿಜೆಪಿ

ಚಂದ್ರದಾಸ್ ಮಹಾಂತ್:ಕಾಂಗ್ರೆಸ್

ಭೂಪೇಶ್ ಭಾಗೆಲ್: ಕಾಂಗ್ತೆಸ್