ಚಾಂಪಿಯನ್ಸ್ ಟ್ರೋಫಿಯ ಇಂಡೋ - ಪಾಕ್ ಫೈನಲ್ ಸಮರಕ್ಕೆ ಅಭಿಮಾನಿಗಳು ಜಾತಕ ಪಕ್ಷಿಯಂತೆ ನಿಮಿಷಗಳನ್ನು ಎಣಿಸುತ್ತಿದ್ದಾರೆ. ಬದ್ಧ ವೈರಿಗಳ ಹೈ ವೋಲ್ಟೇಜ್ ಕದನ ಭಾರೀ ನಿರೀಕ್ಷೆ ಮೂಡಿಸಿದೆ. ಈ ನಡುವೆ ಇಂಡೋ - ಪಾಕ್ ನಡುವಿನ ಸಮರಕ್ಕೆ 2 ಸಾವಿರ ಕೋಟಿಗಿಂತಲೂ ಅಧಿಕ ಬೆಟ್ಟಿಂಗ್ ನಡೆದಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಫೈನಲ್ ಪಂದ್ಯದ ಜಾಹೀರಾತು ಪ್ರಸಾರ ದರವೂ ಗಗನಕ್ಕೇರಿದೆ.
ಬೆಂಗಳೂರು (ಜೂ.17): ಚಾಂಪಿಯನ್ಸ್ ಟ್ರೋಫಿಯ ಇಂಡೋ - ಪಾಕ್ ಫೈನಲ್ ಸಮರಕ್ಕೆ ಅಭಿಮಾನಿಗಳು ಜಾತಕ ಪಕ್ಷಿಯಂತೆ ನಿಮಿಷಗಳನ್ನು ಎಣಿಸುತ್ತಿದ್ದಾರೆ. ಬದ್ಧ ವೈರಿಗಳ ಹೈ ವೋಲ್ಟೇಜ್ ಕದನ ಭಾರೀ ನಿರೀಕ್ಷೆ ಮೂಡಿಸಿದೆ. ಈ ನಡುವೆ ಇಂಡೋ - ಪಾಕ್ ನಡುವಿನ ಸಮರಕ್ಕೆ 2 ಸಾವಿರ ಕೋಟಿಗಿಂತಲೂ ಅಧಿಕ ಬೆಟ್ಟಿಂಗ್ ನಡೆದಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಫೈನಲ್ ಪಂದ್ಯದ ಜಾಹೀರಾತು ಪ್ರಸಾರ ದರವೂ ಗಗನಕ್ಕೇರಿದೆ.
ನಾಳೆ ಟೀಂ ಇಂಡಿಯಾ - ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ದಿನ. ನಾಳೇ ಏನೇ ಕೆಲಸ ಇದ್ರೂ ಟಿವಿ ಮುಂದೆ ಕೂರಲು ಇಂದಿನಿಂದಲೇ ಸಜ್ಜಾಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸಿದೆ ನಾಳಿನ ಫೈನಲ್ ಕದನ.ನಾಳಿನ ಫೈನಲ್ ಸಮರ ಎರಡು ತಂಡಗಳ ನಡುವಿನ ಬ್ಯಾಟ್ - ಬಾಲ್ ಕದನ ಮಾತ್ರ ಅಲ್ಲ. ಹೈವೋಲ್ಟೇಜ್ ಪಂದ್ಯಕ್ಕೆ 2 ಸಾವಿರ ಕೋಟಿಗೂ ಅಧಿಕ ಬೆಟ್ಟಿಂಗ್ ನಡೆದಿದೆ ಎಂದು ಅಖಿಲ ಭಾರತೀಯ ಗೇಮಿಂಗ್ ಫೆಡರೇಷನ್ ಅಂದಾಜಿಸಿದೆ. ಟೀಂ ಇಂಡಿಯಾ ಬುಕ್ಕಿಗಳ ಫೇವರೀಟ್ ತಂಡವಾಗಿದ್ದು ಒಂದು ವೇಳೆ ಭಾರತ ಗೆದ್ದರೆ ಭಾರತದ ಪರ 1000 ಕಟ್ಟಿದವನಿಗೆ 700 ರೂಪಾಯಿ ಸಿಗಲಿದೆ. ಒಂದು ವೇಳೆ ಪಾಕಿಸ್ತಾನ ಗೆದ್ದರೆ 1000 ರೂಪಾಯಿಗೆ 3000 ರೂಪಾಯಿ ಗಳಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿದ್ದು, ಭಾರಿ ನಿರೀಕ್ಷೆ ಹುಟ್ಟಿಸಿದೆ. ಹೀಗಾಗಿ ಪಂದ್ಯದ ವೇಳೆ ಜಾಹಿರಾತಿಗೆ ವಾಣಿಜ್ಯ ಸಂಸ್ಥೆಗಳು ಭಾರಿ ಪೈಪೋಟಿ ನಡೆಸುತ್ತಿವೆ. ಜಾಹಿರಾತು ಪ್ರಸಾರದ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, 30 ಸೆಕೆಂಡ್ ಗಳ ಜಾಹಿರಾತು ಪ್ರಸಾರಕ್ಕಾಗಿ ಬರೊಬ್ಬರಿ 1 ಕೋಟಿ ದರ ನಿಗದಿ ಪಡಿಸಲಾಗಿದೆ.
ದಾಖಲೆ ಬರೆದ ಇಂಡೋ-ಪಾಕ್ ಲೀಗ್ ಪಂದ್ಯ
ತೀವ್ರ ಕುತೂಹಲ ಕೆರಳಿಸಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯಕ್ಕೆ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿ ಸರಣಿಯ ಲೀಗ್ ಪಂದ್ಯ ದಾಖಲೆ ಪ್ರಮಾಣದ ವೀಕ್ಷಕರನ್ನು ಸೆಳೆದಿದೆ. ಮೂಲಗಳ ಪ್ರಕಾರ ಲೀಗ್ ಹಂತದ ಪಂದ್ಯವನ್ನು ವಿಶ್ವಾದ್ಯಂತ ಬರೊಬ್ಬರಿ 201 ಮಿಲಿಯನ್ ವೀಕ್ಷ ಕರು ನೋಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ನಾಳಿನ ಪಂದ್ಯ ವೀಕ್ಷಕರ ಸಂಖ್ಯೆ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇಡೀ ವಿಶ್ವವೇ ಕಾಯುತ್ತಿರುವ ಹೈ ವೋಲ್ಟೇಜ್ ಕದನಕ್ಕೆ ಕೆಲವೇ ಕ್ಷಣ ಬಾಕಿ ಇದ್ದು ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
