ಇರಾನ್ ಮೇಲೆ ಸ್ಪೇನ್ ಸವಾರಿ : ಡಿಗೊ ಕೋಸ್ಟಾ ಟೂರ್ನಿಯ 3ನೇ ಗೋಲು
- ಮೊದಲ ಗೆಲುವು ಸಾಧಿಸಿದ ಸ್ಪೇನ್
- ಡಿಗೊ ಕೋಸ್ಟಾ ಟೂರ್ನಿಯ 3ನೇ ಗೋಲು
- ಪ್ರೀ ಕ್ವಾರ್ಟರ್ ಹಂತದ ಸನಿಹಕ್ಕೆ ತಂಡ
ಕಜಾನ್[ಜೂ.21]: ದ್ವಿತೀಯಾರ್ಧದಲ್ಲಿ ಸುಲಭವಾಗಿ ಮೂಡಿಬಂದ ಗೋಲಿನ ಆಧಾರದಿಂದ ಸ್ಪೇನ್, ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬುಧವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಇರಾನ್ ಎದುರು 1-0 ಗೋಲಿನಿಂದ ಗೆಲುವು ಸಾಧಿಸಿತು.
ಇದರೊಂದಿಗೆ ಸ್ಪೇನ್ ಮೊದಲ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಡ್ರಾಗೆ ತೃಪ್ತಿಟ್ಟಿದ್ದ ಸ್ಪೇನ್ ಅಂತೂ 2ನೇ ಪಂದ್ಯದಲ್ಲಿ ಜಯದ ನಗೆ ಬೀರಿತು. ಈ ಮೂಲಕ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಸ್ಪೇನ್ ಪ್ರೀ ಕ್ವಾರ್ಟರ್ ಹಂತದ ಸನಿಹಕ್ಕೆ ತಲುಪಿದೆ.
ಪಂದ್ಯದ ಆರಂಭದಿಂದಲೂ ಉತ್ತಮ ಹೋರಾಟ ಕಂಡುಬಂತು. ಉಭಯ ತಂಡಗಳ ಆಟಗಾರರು ಅದ್ಭುತ ಆಟದಿಂದ ಗಮನಸೆಳೆದರು. ಮೊದಲಾರ್ಧದಲ್ಲಿ ಸಾಕಷ್ಟು ಬಾರಿ ಗೋಲುಗಳಿಸುವ ಅವಕಾಶ ಸ್ಪೇನ್ ಗಿದ್ದರೂ ಖಾತೆ ತೆರೆಯುವಲ್ಲಿ ಸಫಲರಾಗಲಿಲ್ಲ. ಬಲಿಷ್ಠ ಸ್ಪೇನ್ ಎದುರು ಇರಾನ್ ಆಟಗಾರರು ಅಸಾಮಾನ್ಯ ಪ್ರದರ್ಶನ ತೋರಿದರು. ಗೋಲುಗಳು ಮಾತ್ರ ಮೂಡಲಿಲ್ಲ. ಮೊದಲ ಅವಧಿಯಲ್ಲಿ ಯಾವುದೇ ಗೋಲುಗಳು ಮೂಡಲಿಲ್ಲ.
ದ್ವಿತೀಯಾರ್ಧದ ಅವಧಿಯಲ್ಲಿ ಮತ್ತಷ್ಟು ಆಕ್ರಮಣಾಕಾರಿ ಆಟಕ್ಕೆ ಮುಂದಾದ ಸ್ಪೇನ್, ಇರಾನ್ ಆಟಗಾರರ ಮೇಲೆ ಸವಾರಿ ಮಾಡಿತು. 54ನೇ ನಿಮಿಷದಲ್ಲಿ ಡಿಗೊ ಕೋಸ್ಟಾ ಕಾಲಿಗೆ ತಾಗಿದ ಚೆಂಡು ನೇರವಾಗಿ ಗೋಲು ಪೆಟ್ಟಿಗೆಗೆ ಸೇರಿತು. 64ನೇ ನಿಮಿಷದಲ್ಲಿ ದೊರೆತ ಫ್ರೀ ಕಿಕ್‌ನಲ್ಲಿ ಇರಾನ್ ಇರಾನ್‌ನ ಎಜತೊಲಾಯಿ ಆಫ್‌ಸೈಡ್‌ನಲ್ಲಿದ್ದು ಗೋಲು ಬಾರಿಸಿದ್ದರಿಂದ ಗೋಲನ್ನು ಪರಿಗಣಿಸಲಿಲ್ಲ. ಅಂತಿಮ ಹಂತದವರೆಗೂ ಇದೇ ಅಂತರ ಕಾಯ್ದುಕೊಂಡ ಸ್ಪೇನ್ ಪಂದ್ಯ ಗೆದ್ದು ಬೀಗಿತು.