ವರ್ಗಾವಣೆಗೆ 10 ಲಕ್ಷ ಲಂಚ : ಭಾರಿ ಭ್ರಷ್ಟಾಚಾರ

Corruption rampant, don't know where to begin clean : CM Kumaraswamy
Highlights

ಏಕಾಏಕಿ ಭ್ರಷ್ಟಾಚಾರ ನಿಲ್ಲಿಸಲು ಹೋದರೆ ನನ್ನ ಸ್ಥಾನ ಉಳಿಯುವುದಿಲ್ಲ ಎಂಬುದು ನನಗೆ ಗೊತ್ತು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರು :  ಏಕಾಏಕಿ ಭ್ರಷ್ಟಾಚಾರ ನಿಲ್ಲಿಸಲು ಹೋದರೆ ನನ್ನ ಸ್ಥಾನ ಉಳಿಯುವುದಿಲ್ಲ ಎಂಬುದು ನನಗೆ ಗೊತ್ತು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಸರ್ಕಾರಿ ಇಲಾಖೆ ಅಧಿಕಾರಿಗಳ ಧನದಾಹ ಸರಿಮಾಡುವುದಕ್ಕೆ ಕೈಹಾಕಲು ನನಗೆ ಭಯವಾಗುತ್ತದೆ. ಯಾವ ಇಲಾಖೆಯಲ್ಲಿ ಹೇಗೆ ಲೂಟಿ ನಡೆಯುತ್ತಿದೆ ಎಂದು ಕಳೆದ ಒಂದು ತಿಂಗಳ ಆಡಳಿತದಲ್ಲಿ ಗಮನಿಸುತ್ತಿದ್ದೇನೆ. ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುತ್ತದೆ. ಒಂದು ವರ್ಗಾವಣೆ ಮಾಡಲು 5ರಿಂದ 10 ಲಕ್ಷ ರು. ಪಡೆಯಲಾಗುತ್ತದೆ ಎಂದೂ ಅವರು ಹೇಳುವ ಮೂಲಕ ಸರ್ಕಾರದಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಸೋಮವಾರ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಿಂದೆ ಶೃಂಗೇರಿ ಜಗದ್ಗುರುಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಲ್ಲಿಸಿ ಎಂದಿದ್ದರು. ಅದಕ್ಕೆ ನಾನು ಸಂಪೂರ್ಣವಾಗಿ ನಿಲ್ಲಿಸಲು ಕಷ್ಟಎಂದು ಹೇಳಿದ್ದೆ. ಸರ್ಕಾರಿ ಇಲಾಖೆ ಅಧಿಕಾರಿಗಳ ಧನದಾಹ ಸರಿಮಾಡುವುದಕ್ಕೆ ಕೈಹಾಕಲು ನನಗೆ ಭಯವಾಗುತ್ತದೆ. ಯಾವ ಇಲಾಖೆಯಲ್ಲಿ ಹೇಗೆ ಲೂಟಿ ನಡೆಯುತ್ತಿದೆ ಎಂದು ಕಳೆದೊಂದು ತಿಂಗಳ ಆಡಳಿತದಲ್ಲಿ ಗಮನಿಸುತ್ತಿದ್ದೇನೆ ಎಂದರು.

ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುತ್ತದೆ. ಅಲ್ಲಿನ 3ನೇ ಮಹಡಿಯಲ್ಲಿ ಕೆಲವು ಮಧ್ಯವರ್ತಿಗಳಿದ್ದಾರೆ. ವರ್ಗಾವಣೆ ಮಾಡಿಸಲು ಓಡಾಡುತ್ತಿರುತ್ತಾರೆ. ವರ್ಗಾವಣೆ ಮಾಡುವ ಕೆಲಸದಿಂದಲೂ ಭ್ರಷ್ಟಾಚಾರ ಶುರು ಆಗುತ್ತದೆ. ಒಂದು ವರ್ಗಾವಣೆ ಮಾಡಲು .5ರಿಂದ .10 ಲಕ್ಷ ಪಡೆಯಲಾಗುತ್ತದೆ. ಇದನ್ನೆಲ್ಲಾ ಹೇಗೆ ಸರಿ ಮಾಡಬೇಕು ಎಂದು ಚಿಂತನೆ ನಡೆಸಿ ಹಂತ ಹಂತವಾಗಿ ಭ್ರಷ್ಟಾಚಾರ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಅಧಿಕಾರಿಗಳು ಇನ್ನುಮುಂದೆ ಶ್ರದ್ಧೆಯಿಂದ ಕೆಲಸ ಮಾಡುವಂತೆ ಸಭೆ ಕರೆದು ಸೂಚನೆ ನೀಡುತ್ತೇನೆ ಎಂದು ಹೇಳಿದರು.

ಮಾಧ್ಯಮಗಳು ಶಾಂತಿ ಕದಡಬೇಡಿ:  ಮಾಧ್ಯಮಗಳು ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ಸಮಾಜವನ್ನು ಹಾಳು ಮಾಡಬಾರದು. ನಿಮಗೆ ಟಿಆರ್‌ಪಿ ಬೇಕು, ನಮಗೆ ಶಾಂತಿ ಬೇಕು. ನೀವೊಬ್ಬರೇ ಸತ್ಯಹರಿಶ್ಚಂದ್ರಲ್ಲ ಎಂಬುದೂ ಗೊತ್ತಿದೆ. ಮಾನಸಿಕವಾಗಿ ಆಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಅದನ್ನು ಅವರ ಕುಟುಂಬದವರು ಕೂಡ ಸ್ಪಷ್ಟಪಡಿಸಿದ್ದಾರೆ. ಆದರೆ, ಮಾಧ್ಯಮದವರು ಬಿಜೆಪಿ ಕಾರ್ಯಕರ್ತನೊಬ್ಬನನ್ನು ಕೊಲೆ ಮಾಡಿ ಕೆರೆಗೆ ಹಾಕಿರುವ ಶಂಕೆ ಇದೆ ಎಂದು ಸುದ್ದಿ ಪ್ರಸಾರ ಮಾಡಿದ್ದಾರೆ. ಸುಳ್ಳು ಸುದ್ದಿ ಪ್ರಸಾರ ಮಾಡಿದವರಿಗೆ ನೋಟಿಸ್‌ ಜಾರಿ ಮಾಡಿ ಮಾಹಿತಿ ಪಡೆಯುವಂತೆ ಸೂಚನೆ ನೀಡಿದ್ದೇನೆ. ಸುಳ್ಳು ಸುದ್ದಿಯ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಕುಮಾರಸ್ವಾಮಿ ಎಚ್ಚರಿಸಿದರು.

ಮಾಧ್ಯಮಗಳು ರಾಜ್ಯ ಸರ್ಕಾರ ಜೀವಂತವಾಗಿಲ್ಲ ಎಂದು ಬಿಂಬಿಸುತ್ತಿವೆ. ಸರ್ಕಾರ ಟೇಕ್‌ ಆಫ್‌ ಆಗಿಲ್ಲ ಎನ್ನುವ ವರದಿ ನೀಡುತ್ತಿದ್ದೀರಿ. ನಮಗೆ ಯಾವುದೇ ಭಯವಿಲ್ಲ. ಐದು ವರ್ಷ ನಮ್ಮ ಸರ್ಕಾರ ನಡೆಯುತ್ತದೆ. ಇಂತಹ ವರದಿಗಳನ್ನು ಹೇಗೆ ಸೃಷ್ಟಿಮಾಡುತ್ತಾರೋ, ಯಾರು ಸುದ್ದಿ ಕೊಡುತ್ತಾರೋ ಗೊತ್ತಿಲ್ಲ. ಇಂತಹ ಸುಳ್ಳು ವರದಿಗಳನ್ನು ಹಾಕಬೇಡಿ. ಕುಮಾರಸ್ವಾಮಿ ಅವರು ದೇವೇಗೌಡರನ್ನು ಮನೆಯಲ್ಲಿ ಕೂರಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ಸುಳ್ಳು ಪ್ರಚಾರ ಮಾಡುತ್ತಿವೆ. ದೇವೇಗೌಡರು ಮಾಜಿ ಪ್ರಧಾನಿಗಳಾಗಿದ್ದು, ಅವರ ಸಲಹೆ, ಸೂಚನೆ ಪಡೆಯದೆ ಅಧಿಕಾರ ನಡೆಸುವುದು ಕಷ್ಟ. ಸುಳ್ಳುಸುದ್ದಿ ಬಿತ್ತರಿಸುವ ಮೊದಲು ಮಾಧ್ಯಮಗಳು ಎಚ್ಚರಿಕೆ ವಹಿಸಬೇಕು ಎಂದರು.

ನಾನು ಎಷ್ಟುದಿನ  ಬದುಕ್ತೀನೋ ಗೊತ್ತಿಲ್ಲ!

ಎಷ್ಟುದಿನ ಬದುಕುತ್ತೇನೋ ಗೊತ್ತಿಲ್ಲ. ಹಣ ಮಾಡುವ ಹುಚ್ಚು ನನಗಿಲ್ಲ. ಸಿಎಂ ಆಗಲ್ಲ ಎಂದಿದ್ದೆ. ತಂದೆ ಕೂಡ ಕಾಂಗ್ರೆಸ್‌ನವರು ಸಿಎಂ ಆಗಲಿ ಎಂದಿದ್ದರು. ಆದರೆ, ಕಾಂಗ್ರೆಸ್‌ನವರು ಕುಮಾರಸ್ವಾಮಿಯೇ ಸಿಎಂ ಆಗಲಿ ಎಂದದ್ದಕ್ಕೆ ನಾನು ಅನಿವಾರ‍್ಯವಾಗಿ ಒಪ್ಪಿಕೊಂಡೆ. ಜನರಿಗಾಗಿ ನಾನು ಅಧಿಕಾರ ಪಡೆದಿದ್ದೇನೆ. ದೇವರ ಕೃಪೆ, ಹಿರಿಯರ ಆಶೀರ್ವಾದದಿಂದ ಮತ್ತೆ ಮುಖ್ಯಮಂತ್ರಿ ಆಗಿದ್ದೇನೆ

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

loader