ಇದು ಬೇಲಿಯೇ ಎದ್ದು ಹೊಲ ಮೆಯ್ದ ಪ್ರಕರಣ. ಸರ್ಕಾರ ಒಂದು ಕಡೆ ತೋಟಗಾರಿಕೆ ಕ್ಷೇತ್ರವನ್ನು ನಿರ್ವಹಣೆಗೆ ಲಕ್ಷ ಲಕ್ಷ ಹಣ ನೀಡಿ, ತೋಟಗಾರಿಕೆ ಕ್ಷೇತ್ರವನ್ನ ಅಭಿವೃದ್ಧಿ ಮಾಡಲು ಮಂದಾಗಿದೆ. ಆದ್ರೆ ತೋಟಗಾರಿಕೆಯನ್ನ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ಮಾತ್ರ ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷ ಲಕ್ಷ ಹಣವನ್ನ ನುಂಗಿ ನೀರು ಕುಡಿದಿದ್ದಾರೆ.
ಚಾಮರಾಜನಗರ(ಅ.08): ರೈತರಿಗೆ ಮಾದರಿಯಾಗಬೇಕಾಗಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸೇರಿದ ತೋಟ ಅಧಿಕಾರಿಗಳ ನಿರ್ಲಕ್ಷದಿಂದ ಪಾಳು ಬಿದ್ದ ಜಮೀನಿನಂತಾಗಿದೆ. ಅಲ್ಲದೇ ಈ ತೋಟದ ಹೆಸರಿನಲ್ಲಿ ಅಧಿಕಾರಿಗಳು ಮಾತ್ರ ಅಕ್ರಮವಾಗಿ ಹಣ ಪಡೆದಿರುವುದು ಬಯಲಿಗೆ ಬಂದಿದೆ. ಆದರೆ ತೋಟ ಮಾತ್ರ ಎಂದಿನಂತೆ ಕಳೆ, ಗಿಡಗಂಟೆಗಳಿಂದ ತುಂಬಿ ಕೊಂಡಿದೆ. ಯಾವುದೇ ಅಭುವೃದ್ಧಿ ಕಾರ್ಯಗಳು ಆಗಿಲ್ಲ..
2015-16 ನೇ ಸಾಲಿನಲ್ಲಿ ಸಪೋಟ ಮತ್ತು ತೆಂಗಿನ ತೋಟಕ್ಕೆ ಹನಿ ನೀರಾವರಿ ಮಾಡಲಾಗಿದೆ ಎಂದು ಒಂದು ಸರಿ 1 ಲಕ್ಷದ 35 ಸಾವಿರದ 720 ರುಪಾಯಿ, ಎರಡನೆ ಬಾರಿ 1 ಲಕ್ಷದ 7 ಸಾವಿರದ 462 ರುಪಾಯಿ ಡ್ರಾ ಮಾಡಿ ಕೊಳ್ಳಲಾಗಿದೆ. ಜೈನ್ ಕಂಪನಿಯ ಪೈಪ್ ಅಳವಡಿಕೆ ಮಾಡಿದ್ದೇವೆ ಎಂದು ಪುಸ್ತಕದಲ್ಲಿ ತೋರಿಸಿದ್ದಾರೆ. ಆದರೆ ಅದ್ಯಾವುದು ಕೆಲಸ ಇಲ್ಲಿ ನಡೆದಿಲ್ಲ . ಪ್ರತಿ ವರ್ಷ ತೋಟ ನಿರ್ವಹಣೆಗಾಗಿ ಬರುವ ಲಕ್ಷಾಂತರ ರೂಪಾಯಿ ಹಣವನ್ನು ಫೇಕ್ ಕಂಪನಿ ಬಿಲ್ ತೋರಿಸಿ ಹಣ ಲೂಟಿ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ತೋಟಗಾರಿಕೆ ಫಾರಂ ನಲ್ಲಿ 5 ಸಾವಿರ ತೆಂಗಿನ ಗಿಡ ಬೆಳೆಯಲಾಗಿದೆ. ಗಿಡಗಳಿಗೆ ಈಗಾಗಲೇ ಎರಡು ವರ್ಷ ಕಳೆದರೂ ಮಾರಾಟ ಮಾಡಿಲ್ಲ. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ ಆಗಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷೆಯೇ ಕಾರಣ ಎನ್ನುತ್ತಾರೆ ಸ್ಥಳೀಯ ರೈತರು
ಒಟ್ಟಿನಲ್ಲಿ ರೈತರ ಕೃಷಿಗೆ ಮಾದರಿಯಾಗಬೇಕಿದ್ದ ತೋಟ ಅಧಿಕಾರಿಗಳ ಜೇಬು ತುಂಬಿಸುವ ಕ್ಷೇತ್ರವಾಗಿದೆ. ಇನ್ನಾದ್ರೂ ಸರ್ಕಾರ ಎಚ್ಚೆತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಿದೆ.
